ಪಂಜಾಬ್ : 2027ರ ಪಂಜಾಬ್ ವಿಧಾನಸಭಾ ಚುನಾವಣೆಗೆ ರಾಜಕೀಯ ಗಟುಗಳು ಬಿರುಸುಗೊಳ್ಳುತ್ತಿರುವ ಬೆನ್ನಲ್ಲೇ ಆಡಳಿತಾರೂಢ ಆಮ್ ಆದ್ಮಿ ಪಕ್ಷಕ್ಕೆ (ಎಎಪಿ) ದೊಡ್ಡ ಹಿನ್ನಡೆಯಾಗಿದೆ. ಪಕ್ಷದ ಹಾಲಿ ಶಾಸಕರಾದ ಹರಮೀತ್ ಸಿಂಗ್ ಪಠಾಣ್ಮಾಜ್ರಾ (ಸನೌರ್) ಮತ್ತು ಮಾಜಿ ಸಚಿವ ಚೇತನ್ ಸಿಂಗ್ ಜೌರಮಾಜ್ರಾ (ಸಮಾನಾ) ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ಎಎಪಿ ತನ್ನ 40 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ ಬೆನ್ನಲ್ಲೇ ಈ ದಿಢೀರ್ ಬೆಳವಣಿಗೆ ನಡೆದಿದೆ. ಪ್ರಕಟಿತ ಪಟ್ಟಿಯಲ್ಲಿ ಮುಖ್ಯಮಂತ್ರಿ ಭಗವಂತ್ ಮಾನ್ ಸೇರಿದಂತೆ ಹಲವು ನಾಯಕರಿಗೆ ಟಿಕೆಟ್ ನೀಡಲಾಗಿದೆಯಾದರೂ, ಈ ಇಬ್ಬರೂ ಶಾಸಕರಿಗೆ ಮೊದಲ ಪಟ್ಟಿಯಲ್ಲಿ ಅವಕಾಶ ಸಿಕ್ಕಿರಲಿಲ್ಲ. ಈ ಇಬ್ಬರೂ ಶಾಸಕರು ಶಾಸಕ ಸ್ಥಾನವನ್ನು ಕಾಯ್ದುಕೊಂಡು, ಪಕ್ಷದ ಸದಸ್ಯತ್ವಕ್ಕೆ ಮಾತ್ರ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.
ಶಾಸಕ ಹರಮೀತ್ ಸಿಂಗ್ ಪಠಾಣ್ಮಾಜ್ರಾ ಅವರು ಈ ಹಿಂದಿನಿಂದಲೂ ಪಕ್ಷದ ನಾಯಕತ್ವ ಮತ್ತು ಸ್ಥಳೀಯ ಅಧಿಕಾರಿಗಳ ಕಾರ್ಯವೈಖರಿ ಕುರಿತು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದರು. ಮುಂದಿನ ಚುನಾವಣೆಯಲ್ಲಿ ಕ್ಷೇತ್ರದ ಜನರ ಅಭಿಪ್ರಾಯ ಪಡೆದು ಸ್ಪರ್ಧೆಯ ನಿರ್ಧಾರ ಕೈಗೊಳ್ಳುವುದಾಗಿ ಅವರು ಹೇಳಿದ್ದರು.
2027ರ ವಿಧಾನಸಭಾ ಚುನಾವಣೆಯ ಸಿದ್ಧತೆಯಲ್ಲಿ ತೊಡಗಿರುವ ಎಎಪಿಗೆ ಹಾಲಿ ಶಾಸಕರ ಈ ಅಸಮಾಧಾನ ಹಾಗೂ ನಿರ್ಗಮನವು ಆಂತರಿಕ ಭಿನ್ನಮತವನ್ನು ಎತ್ತಿ ತೋರಿಸಿದ್ದು, ಮುಂಬರುವ ದಿನಗಳಲ್ಲಿ ಪಂಜಾಬ್ ರಾಜಕೀಯ ಸಮೀಕರಣಗಳ ಮೇಲೆ ಇದು ಎಂತಹ ಪರಿಣಾಮ ಬೀರಲಿದೆ ಎಂಬುದನ್ನು ಕಾದುನೋಡಬೇಕಿದೆ.