ಬೆಂಗಳೂರು: ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಸಚಿವ ರುದ್ರಪ್ಪ ಲಮಾಣಿ ಅವರ ಸಮ್ಮುಖದಲ್ಲೇ ನಕಲಿ ಮತದಾನ ನಡೆದಿದೆ ಎಂದು ವಿಡಿಯೋ ದಾಖಲೆ ಬಿಡುಗಡೆ ಮಾಡುವ ಮೂಲಕ ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಆರೋಪಿಸಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಾವೇರಿಯ ತಹಶೀಲ್ದಾರ್ ಕಚೇರಿಯ ಬೂತ್ ನಂಬರ್ 85 ರಲ್ಲಿ ನಕಲಿ ಮತದಾನ ನಡೆದಿದೆ. ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಸಂಜೀವಕುಮಾರ ನೆರಳಗಿ ಅವರ ಪತ್ನಿ ಆಶಾ ಪಾಟೀಲ್ ಅವರ ಹೆಸರಿನಲ್ಲಿ ಶಿಲ್ಪಾ ಬುಡಣ್ಣವರ್ ಎಂಬುವರು ನಕಲಿ ಮತ ಚಲಾಯಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಕಾಂಗ್ರೆಸ್ನವರು ದೇಶಾದ್ಯಂತ 'ವೋಟ್ ಚೋರಿ' ಆರೋಪ ಮಾಡುತ್ತಿದ್ದಾರೆ. ಆದರೆ ನಮ್ಮ ರಾಜ್ಯದಲ್ಲೇ ಕಾಂಗ್ರೆಸ್ ವೋಟ್ ಚೋರಿ ಮಾಡುತ್ತಿದೆ. ಸಚಿವ ರುದ್ರಪ್ಪ ಲಮಾಣಿ ಅವರು ಮತ ಚಲಾಯಿಸಿದ ತಕ್ಷಣ, ಅವರ ಹಿಂದೆಯೇ ನಿಂತಿದ್ದ ಶಿಲ್ಪಾ ನಕಲಿ ಮತ ಹಾಕಿದ್ದಾರೆ. ಈ ಕುರಿತು ಕಾಂಗ್ರೆಸ್ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು. ಈ ಅಕ್ರಮಕ್ಕೆ ಸಂಬಂಧಿಸಿದಂತೆ ಬಿಜೆಪಿ ಪ್ರತಿಭಟನೆ ನಡೆಸಿದ ಬಳಿಕ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ ಎಂದೂ ಅವರು ತಿಳಿಸಿದರು. ಈ ಆರೋಪಕ್ಕೆ ಪ್ರತಿಯಾಗಿ ಸ್ಪಷ್ಟನೆ ನೀಡಿರುವ ಸಚಿವ ರುದ್ರಪ್ಪ ಲಮಾಣಿ, ಹಾವೇರಿಯಲ್ಲಿ ನಡೆದ ಮತದಾನದಲ್ಲಿ ನಕಲಿ ವೋಟಿಂಗ್ ನಡೆದಿದೆ ಎಂಬ ಆರೋಪದ ಬಗ್ಗೆ ಅಧಿಕಾರಿಗಳು ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಸರತಿ ಸಾಲಿನಲ್ಲಿ ನಿಂತಿರುವ ಮತದಾರರು ನೈಜ ಮತದಾರರೇ ಅಲ್ಲವೇ ಎಂಬುದನ್ನು ಗುರುತಿಸುವುದು ಇತರರಿಗೆ ಸಾಧ್ಯವಿಲ್ಲ. ಗುರುತಿನ ಚೀಟಿ ಹಾಗೂ ಮತದಾರರ ಪಟ್ಟಿಯನ್ನು ಪರಿಶೀಲಿಸಿ ಮತದಾನಕ್ಕೆ ಅವಕಾಶ ನೀಡುವುದು ಚುನಾವಣಾಧಿಕಾರಿಗಳ ಜವಾಬ್ದಾರಿಯಾಗಿದೆ. ನಾನು ಯಾವುದೇ ಕಾರಣಕ್ಕೂ ಇಂತಹ ತಪ್ಪುಗಳಿಗೆ ಪ್ರೋತ್ಸಾಹ ನೀಡುವುದಿಲ್ಲ. ಬಿಜೆಪಿ ಮುಖಂಡರು ರಾಜಕೀಯ ಲಾಭಕ್ಕಾಗಿ ನನ್ನ ಹೆಸರನ್ನು ಅನಗತ್ಯವಾಗಿ ಎಳೆದು ತರುತ್ತಿದ್ದಾರೆ. ಮತದಾನ ಪ್ರಕ್ರಿಯೆಯಲ್ಲಿ ಲೋಪ ಎಸಗಿದ ಅಧಿಕಾರಿಗಳ ವಿರುದ್ಧ ಕ್ರಮವಾಗಬೇಕು ಹಾಗೂ ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಚುನಾವಣಾ ಸಿಬ್ಬಂದಿಗೆ ಸೂಕ್ತ ತರಬೇತಿ ನೀಡಬೇಕು ಎಂದು ಸಚಿವರು ಹೇಳಿದರು. ಇದರ ಜೊತೆಗೆ, ಬಿಜೆಪಿ ಮುಖಂಡರಾದ ಶಿವಬಸವನಹಳ್ಳಿ ಹಾಗೂ ನಾಗರಾಜ್ ಹಾರಿಕೋಳ ಅವರ ಕುಟುಂಬದ ಯುವತಿಯರು ಮತದಾನಕ್ಕೆ ಬರದಿದ್ದರೂ ಅವರ ಹೆಸರಿನಲ್ಲಿ ಮತ ಚಲಾಯಿಸಲಾಗಿರುವ ಆರೋಪಗಳಿದ್ದು, ಈ ಬಗ್ಗೆಯೂ ಸಮಗ್ರ ತನಿಖೆಯಾಗಬೇಕು ಎಂದು ಸಚಿವ ರುದ್ರಪ್ಪ ಲಮಾಣಿ ಒತ್ತಾಯಿಸಿದ್ದಾರೆ.