ಮಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಜನವಿರೋಧಿ ಧೋರಣೆಯನ್ನು ಅನುಸರಿಸುತ್ತಿದ್ದು, ಹಳ್ಳಿಗಳ ಪಂಚಾಯತ್ ವ್ಯವಸ್ಥೆಯನ್ನು ಕಡೆಗಣಿಸಿ ಭ್ರಷ್ಟಾಚಾರ ಹಾಗೂ ಬೆಲೆ ಏರಿಕೆಯ ಮೂಲಕ ಜನರ ರಕ್ತ ಹೀರುವ ಕೆಲಸ ಮಾಡುತ್ತಿದೆ ಎಂದು ಮಂಗಳೂರು ನಗರ ಉತ್ತರ ಶಾಸಕರಾದ ಡಾ. ವೈ. ಭರತ್ ಶೆಟ್ಟಿ ಹಾಗೂ ವಿಧಾನ ಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಪುತ್ತೂರು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಭಾರತೀಯ ಜನತಾ ಪಾರ್ಟಿ ಮಂಗಳೂರು ನಗರ ಉತ್ತರ ಮಂಡಲದ ವತಿಯಿಂದ ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳಲಾಗಿದ್ದ "ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಜನಾಂದೋಲನ - ನಮ್ಮ ಹಕ್ಕು ನಮಗೆ ನೀಡಿ" ಬೃಹತ್ ಹಕ್ಕೊತ್ತಾಯ ಸಭೆಯಲ್ಲಿ ಇಬ್ಬರೂ ನಾಯಕರು ಜಂಟಿಯಾಗಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ಬೃಹತ್ ಪ್ರತಿಭಟನಾ ಸಭೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ, ಮಂಡಲದ ಅಧ್ಯಕ್ಷರಾದ ರಾಜೇಶ್ ಕೊಟ್ಟಾರಿ ಸೇರಿದಂತೆ ಪಕ್ಷದ ಪ್ರಮುಖ ನಾಯಕರು ಹಾಗೂ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಶಾಸಕ ಡಾ. ವೈ. ಭರತ್ ಶೆಟ್ಟಿ, ಕಾಂಗ್ರೆಸ್ ಆಡಳಿತದಲ್ಲಿ ಜನಸಾಮಾನ್ಯರ ಬದುಕು ದುಸ್ತರವಾಗಿದೆ. ನೋಂದಣಿ ಶುಲ್ಕ ಮತ್ತು ತೆರಿಗೆಗಳನ್ನು ಮೂರ್ನಾಲ್ಕು ಪಟ್ಟು ಹೆಚ್ಚಿಸಲಾಗಿದ್ದು, ಹುಟ್ಟಿದ ಮಗುವಿನ ಜನನ ಪ್ರಮಾಣಪತ್ರದಿಂದ ಹಿಡಿದು ಮರಣ ಪ್ರಮಾಣಪತ್ರದವರೆಗೂ ಹಣ ವಸೂಲಿ ಮಾಡುವಂತಹ ನೀಚ ವ್ಯವಸ್ಥೆಯನ್ನು ಸರ್ಕಾರ ಜಾರಿಗೆ ತಂದಿದೆ. ಕಳೆದ ಮೂರೂವರೆ ವರ್ಷಗಳಲ್ಲಿ ಮಂಗಳೂರು ನಗರ ಉತ್ತರ ಕ್ಷೇತ್ರದಲ್ಲಿ ಸರ್ಕಾರಿ ಶಾಲೆಗೆ ಒಂದೇ ಒಂದು ಕೊಠಡಿಯನ್ನೂ ನಿರ್ಮಿಸಲು ಈ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೊರೊನಾ ಸಂಕಷ್ಟದ ನಡುವೆಯೂ ವಿವೇಕ ಯೋಜನೆಯಡಿ ಶಾಲೆಗಳಿಗೆ ಕೊಠಡಿಗಳನ್ನು ನಿರ್ಮಿಸಲಾಗಿತ್ತು. ಆದರೆ ಇಂದು ಶಾಲೆಗಳಿಗೆ ಕುರ್ಚಿ ಹಾಗೂ ಕಂಪ್ಯೂಟರ್‌ಗಳಿಗಾಗಿ ಎಂಆರ್‌ಪಿಎಲ್, ಎನ್‌ಎಂಪಿಎ, ಎಂಸಿಎಫ್ ನಂತಹ ಸಂಸ್ಥೆಗಳ ಸಿಎಸ್‌ಆರ್ ನೆರವನ್ನು ಬೇಡುವ ದುಃಸ್ಥಿತಿ ಬಂದೊದಗಿದೆ. ಶಿಕ್ಷಣ ಕಾಶಿ ದಕ್ಷಿಣ ಕನ್ನಡ ಜಿಲ್ಲೆಯ ಶಾಲೆ ಹಾಗೂ ಅಂಗನವಾಡಿಗಳ ನಿರ್ವಹಣೆಗೆ ಹಣ ನೀಡದ ಸರ್ಕಾರ, ಅಧಿಕಾರಿಗಳನ್ನು ಕೇವಲ ಹಣ ವಸೂಲಿಗಾಗಿ ಬಳಸಿಕೊಳ್ಳುತ್ತಿದೆ. ಪೊಲೀಸ್ ಇಲಾಖೆಯಲ್ಲಿ ಭ್ರಷ್ಟಾಚಾರ ಮಿತಿಮೀರಿದ್ದು, ವರ್ಗಾವಣೆಗೆ ಲಂಚ ನೀಡಿ ಬಂದಿರುವ ಅಧಿಕಾರಿಗಳು ಸಾರ್ವಜನಿಕರ ಮೇಲೆ ದರ್ಪ ತೋರುತ್ತಿದ್ದಾರೆ ಎಂದು ದೂರಿದರು.
ಇದೇ ವೇಳೆ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ಗ್ಯಾರಂಟಿಗಳ ಹೆಸರಿನಲ್ಲಿ ಪರಿಶಿಷ್ಟ ಸಮುದಾಯಕ್ಕೆ ಸೇರಬೇಕಿದ್ದ 46,000 ಕೋಟಿ ರೂಪಾಯಿ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಅನುದಾನವನ್ನು ಲೂಟಿ ಮಾಡಲಾಗಿದೆ. ವಾಲ್ಮೀಕಿ ನಿಗಮದ 187 ಕೋಟಿ ರೂಪಾಯಿ ಬಡವರ ಹಣವನ್ನು ನುಂಗಿ ಖಜಾನೆಯನ್ನು ಸಂಪೂರ್ಣ ಖಾಲಿ ಮಾಡಲಾಗಿದೆ. ಗ್ರಾಮ ಪಂಚಾಯಿತಿಗಳಿಗೆ ನೀಡುವ 10 ಲಕ್ಷ ರೂಪಾಯಿ ಅನುದಾನದಲ್ಲಿ 6 ಲಕ್ಷ ರೂಪಾಯಿ ಕೇವಲ ವಿದ್ಯುತ್ ಬಿಲ್‌ಗೇ ವೆಚ್ಚವಾಗುತ್ತಿದ್ದು, ಹಳ್ಳಿಗಳ ರಸ್ತೆ ಹಾಗೂ ಮೂಲಸೌಕರ್ಯಗಳಿಗೆ ಹಣವೇ ಇಲ್ಲದಂತಾಗಿದೆ. ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದ 15ನೇ ಹಣಕಾಸು ಆಯೋಗದ ಅನುದಾನವೊಂದೇ ಪಂಚಾಯಿತಿಗಳ ಉಳಿವಿಗೆ ಆಸರೆಯಾಗಿದೆ ಎಂದು ಹೇಳಿದರು.
ರಾಜ್ಯದ 42 ಇಲಾಖೆಗಳಲ್ಲಿ 2.84 ಲಕ್ಷಕ್ಕೂ ಅಧಿಕ ಸರ್ಕಾರಿ ಹುದ್ದೆಗಳು ಖಾಲಿ ಇದ್ದರೂ ಭರ್ತಿ ಮಾಡುತ್ತಿಲ್ಲ ಮತ್ತು ಯುವಕರಿಗೆ ಯುವನಿಧಿಯೂ ಸಿಗುತ್ತಿಲ್ಲ. ವಸತಿ ಯೋಜನೆಯಡಿ ಸಲ್ಲಿಸಲಾದ 13 ಸಾವಿರಕ್ಕೂ ಅಧಿಕ ಅರ್ಜಿಗಳಲ್ಲಿ ಒಂದೇ ಒಂದು ಬಡ ಕುಟುಂಬಕ್ಕೂ ಮನೆ ಮಂಜೂರಾಗಿಲ್ಲ. ವೃದ್ಧಾಪ್ಯ ಹಾಗೂ ವಿಧವಾ ವೇತನಗಳಿಗೆ ಕತ್ತರಿ ಹಾಕಲಾಗಿದ್ದು, 11A ಮತ್ತು 11B ದಾಖಲೆಗಳಿಗಾಗಿ ಬಡವರು ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಭ್ರಷ್ಟ ಹಾಗೂ ಜನವಿರೋಧಿ ಸರ್ಕಾರವನ್ನು ಅಧಿಕಾರದಿಂದ ಕಿತ್ತೊಗೆಯುವವರೆಗೂ ಗ್ರಾಮ ಪಂಚಾಯತ್ ಮಟ್ಟದಿಂದಲೇ ಬೃಹತ್ ಜನಾಂದೋಲನ ರೂಪಿಸಿ ಹೋರಾಟ ಮುಂದುವರಿಸಲಾಗುವುದು ಎಂದು ಬಿಜೆಪಿ ನಾಯಕರು ಎಚ್ಚರಿಸಿದರು.