image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಖರ್ಗೆಯವರ ಹೇಳಿಕೆ ಕಾಂಗ್ರೆಸ್‌ನ ಹತಾಶೆಯ ಪ್ರತೀಕ: ಡಾ. ಸಿ.ಟಿ. ರವಿ

ಖರ್ಗೆಯವರ ಹೇಳಿಕೆ ಕಾಂಗ್ರೆಸ್‌ನ ಹತಾಶೆಯ ಪ್ರತೀಕ: ಡಾ. ಸಿ.ಟಿ. ರವಿ

ಚಿಕ್ಕಮಗಳೂರು/ ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರ ತಂದೆಯವರ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನೀಡಿರುವ ಹೇಳಿಕೆಯು ಕಾಂಗ್ರೆಸ್ ಪಕ್ಷದ ತೀವ್ರ ಹತಾಶೆಯನ್ನು ಬಿಂಬಿಸುತ್ತದೆ ಎಂದು ಬಿಜೆಪಿ ಮುಖಂಡ ಹಾಗೂ ವಿಧಾನ ಪರಿಷತ್ ಸದಸ್ಯ ಡಾ. ಸಿ.ಟಿ. ರವಿ ಟೀಕಿಸಿದ್ದಾರೆ. ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪ್ರತಿಪಾದಿಸುವ ‘ಮೊಹಬ್ಬತ್ ಕಿ ದುಕಾನ್’ ಪರಿಕಲ್ಪನೆಯಲ್ಲಿ ಪ್ರಧಾನಿಯವರ ಕುಟುಂಬದ ವಿರುದ್ಧ ಇಂತಹ ಅವಹೇಳನಕಾರಿ ಮಾತುಗಳಿಗೆ ಅವಕಾಶವಿದೆಯೇ ಎಂದು ಪ್ರಶ್ನಿಸಿದರು. ಮೋದಿ ಅವರು ಕಾಂಗ್ರೆಸ್‌ನ ಕೃಪೆಯಿಂದ ಪ್ರಧಾನಿಯಾಗಿಲ್ಲ. ದೇಶದ ಜನರ ಅಚಲ ವಿಶ್ವಾಸ ಗಳಿಸಿ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಜನರ ನಿರ್ಧಾರವೇ ಅಂತಿಮ ಎಂದರು.

ಸತತ ಚುನಾವಣಾ ಸೋಲುಗಳಿಂದ ಕಂಗಾಲಾಗಿರುವ ಕಾಂಗ್ರೆಸ್, ರಾಜಕೀಯ ವಿರೋಧಿಗಳ ವಿರುದ್ಧ ಇಂತಹ ನಿಂದನಾತ್ಮಕ ಹೇಳಿಕೆಗಳನ್ನು ನೀಡುತ್ತಿದೆ ಎಂದು ಆರೋಪಿಸಿದರು. ಅಧಿಕಾರ ಪಡೆಯಬೇಕಾದರೆ ಚುನಾವಣೆಯಲ್ಲಿ ಜನರ ಮನಸ್ಸು ಗೆಲ್ಲಬೇಕೇ ಹೊರತು, ಬೀದಿ ಸಂಘರ್ಷದ ಮೂಲಕ ಚುನಾಯಿತ ಸರ್ಕಾರವನ್ನು ಕೆಳಗಿಳಿಸಲು ಸಾಧ್ಯವಿಲ್ಲ ಎಂದು ಖಾರವಾಗಿ ನುಡಿದರು. ಇದೇ ವೇಳೆ ಇತ್ತೀಚಿನ ಸ್ಟಿಂಗ್ ಆಪರೇಷನ್ ಪ್ರಕರಣದ ಕುರಿತು ಪ್ರಸ್ತಾಪಿಸಿದ ಅವರು, ವಿಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡವರ ಮೇಲೆ ಮಾತ್ರ ಕ್ರಮ ಕೈಗೊಂಡರೆ ಸಾಲದು, ಅದರ ಸೂತ್ರಧಾರರು ಯಾರು ಎಂಬುದರ ಬಗ್ಗೆಯೂ ನಿಷ್ಪಕ್ಷಪಾತವಾಗಿ ತನಿಖೆಯಾಗಬೇಕು ಎಂದು ಆಗ್ರಹಿಸಿದರು.

ಮೈಸೂರು ರಾಜಮನೆತನದ ಬಗ್ಗೆ ಮಾತನಾಡಿದ ಸಿ.ಟಿ. ರವಿ, ರಾಜಪರಿವಾರದ ಬಗ್ಗೆ ರಾಜ್ಯದ ಜನರಿಗೆ ಅಪಾರ ಗೌರವ ಮತ್ತು ಅಭಿಮಾನವಿದೆ. ನಾಲ್ವಡಿ ಕೃಷ್ಣರಾಜ ಒಡೆಯರು ರಾಜ್ಯದ ಪ್ರಗತಿಗೆ ದೂರದೃಷ್ಟಿಯ ಕೊಡುಗೆ ನೀಡಿದ್ದಾರೆ. ಕನ್ನಂಬಾಡಿ ಅಣೆಕಟ್ಟು ನಿರ್ಮಾಣಕ್ಕಾಗಿ ತಮ್ಮ ಖಾಸಗಿ ಚಿನ್ನಾಭರಣಗಳನ್ನು ನೀಡಿದ ಐತಿಹಾಸಿಕ ತ್ಯಾಗ ಅವರದ್ದು ಎಂದರು. ಜಯಚಾಮರಾಜೇಂದ್ರ ಒಡೆಯರು ಸಂಸ್ಥಾನಗಳ ವಿಲೀನದ ಸಂದರ್ಭದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲರಿಗೆ ತಮ್ಮ ಖಾಸಗಿ ವಿಮಾನವನ್ನು ಬಳಕೆಗೆ ನೀಡಿದ್ದನ್ನು ಉಲ್ಲೇಖಿಸಿದ ಅವರು, ಈ ಕೊಡುಗೆಗಳನ್ನು ಯಾರೂ ಮರೆಯಬಾರದು ಎಂದರು. ಸಂಸ್ಥಾನಗಳು ಭಾರತ ಒಕ್ಕೂಟಕ್ಕೆ ವಿಲೀನಗೊಂಡಾಗ ನೀಡಿದ ಭರವಸೆ, ಗೌರವ ಮತ್ತು ಆಸ್ತಿಯ ಒಪ್ಪಂದಗಳನ್ನು ಸ್ಮರಿಸಿದ ಅವರು, ಅಧಿಕಾರದ ಮದದಿಂದ ವರ್ತಿಸಬಾರದು ಎಂದು ಎಚ್ಚರಿಸಿದರು.

ರಾಜಕುಟುಂಬದ ಕುರಿತು ಶಾಸಕ ಯತೀಂದ್ರ ಸಿದ್ದರಾಮಯ್ಯ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿ, ಇತಿಹಾಸದ ಹಿನ್ನೆಲೆಯನ್ನು ತಿಳಿದುಕೊಂಡು ಮಾತನಾಡಬೇಕು. ರಾಜಮನೆತನದ ವಿಚಾರಗಳನ್ನು ಸಹಾನುಭೂತಿಯಿಂದ ನೋಡಬೇಕೇ ಹೊರತು, ಅಧಿಕಾರದ ಅಹಂಕಾರ ಪ್ರದರ್ಶಿಸಬಾರದು ಎಂದರು. ಪೋಲಿಸರು ಯಾವುದೇ ಒತ್ತಡಕ್ಕೆ ಒಳಗಾಗದೆ ಸ್ಟಿಂಗ್ ಆಪರೇಷನ್ ಪ್ರಕರಣದ ಹಿನ್ನೆಲೆಯನ್ನು ಪತ್ತೆಹಚ್ಚಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

Category
ಕರಾವಳಿ ತರಂಗಿಣಿ