ಮಂಗಳೂರು : ನವೆಂಬರ್ 30 ರವರೆಗೆ ಭಾರತೀಯ ಜನತಾ ಪಾರ್ಟಿ ದೇಶದಾದ್ಯಂತ 'ಪ್ರಜಾಪ್ರಭುತ್ವ ಉಳಿಸಿ, ಅರಾಜಕತೆ ತೊಲಗಿಸಿ, ಸಂವಿಧಾನ ರಕ್ಷಿಸಿ' ಎನ್ನುವ ಬೃಹತ್ ಅಭಿಯಾನವನ್ನು ಹಮ್ಮಿಕೊಂಡಿದೆ ಎಂದು ತಿಳಿಸಿದ್ದಾರೆ. ಅಭಿಯಾನದ ಅಂಗವಾಗಿ ರ್ಯಾಲಿ, ಪಾದಯಾತ್ರೆ, ವಿದ್ಯಾರ್ಥಿಗಳ ಜೊತೆ ಸಂವಾದ ಮತ್ತು ಪ್ರಬುದ್ಧರ ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಂಗಳೂರು ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಬಿಜೆಪಿ ನಾಯಕ ಸಿ.ಟಿ. ರವಿ ತಿಳಿಸಿದರು.
ಸಾಂವಿಧಾನಿಕ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು ಅಪಪ್ರಚಾರ ಮಾಡುತ್ತಿರುವ ಷಡ್ಯಂತ್ರದ ವಿರುದ್ಧ ಜನಾಭಿಪ್ರಾಯ ಮೂಡಿಸುವುದು ಇದರ ಮುಖ್ಯ ಉದ್ದೇಶವಾಗಿದ್ದು, ನೇಪಾಳ, ಬಾಂಗ್ಲಾದೇಶ ಹಾಗೂ ಶ್ರೀಲಂಕಾದಲ್ಲಿ ಚುನಾಯಿತ ಸರ್ಕಾರಗಳ ವಿರುದ್ಧ ಅರಾಜಕತೆ ಸೃಷ್ಟಿಸಿ ಬದಲಾಯಿಸಿದ ತಂತ್ರವನ್ನೇ ಭಾರತದಲ್ಲೂ ಪ್ರಯೋಗಿಸಲು ಯತ್ನಿಸಲಾಗುತ್ತಿದೆ. ಆರಂಭದಲ್ಲಿ ಅಸಹಿಷ್ಣುತೆ, ಅವಾರ್ಡ್ ವಾಪಸಿ ನಾಟಕ, ಸಿಎಎ ವಿವಾದ, ಕಿಸಾನ್ ಆಂದೋಲನದ ಹೆಸರಿನಲ್ಲಿ ಕೆಂಪು ಕೋಟೆಯ ಮೇಲೆ ಖಾಲಿಸ್ತಾನ್ ಧ್ವಜ ಹಾರಿಸುವ ಯತ್ನಗಳು ನಡೆದಿದ್ದವು. ಇವೆಲ್ಲವೂ ವಿಫಲಗೊಂಡ ಬಳಿಕ ಈಗ ಇವಿಎಂ ಹ್ಯಾಕಿಂಗ್ ಮತ್ತು ಎಸ್ಐಆರ್ (SIR) ವಿಚಾರದಲ್ಲಿ ದೇಶಾದ್ಯಂತ ಅಪಪ್ರಚಾರ ನಡೆಸಲಾಗುತ್ತಿದೆ ಎಂದು ಅವರು ಆರೋಪಿಸಿದರು.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸುತ್ತಿರುವ ಕಾಂಗ್ರೆಸ್ ಪಕ್ಷದ ಧೋರಣೆಯನ್ನು ಖಂಡಿಸಿದ ಅವರು, ಎಸ್ಐಆರ್ (ಸ್ಪೆಷಲ್ ಇಂಟೆನ್ಸಿವ್ ರಿವಿಷನ್) ಎಂಬುದು ಕೇಂದ್ರಕೃತ ಚಟುವಟಿಕೆಯಲ್ಲ, ಬದಲಾಗಿ ವಿಕೇಂದ್ರೀಕೃತವಾಗಿ ನಡೆಯುವ ಸಂವಿಧಾನಬದ್ಧ ಪ್ರಕ್ರಿಯೆಯಾಗಿದೆ ಎಂದರು. ಇದುವರೆಗೆ ದೇಶದಲ್ಲಿ ಎಂಟು ಬಾರಿ ಎಸ್ಐಆರ್ ನಡೆದಿದ್ದು, ಇದು ಒಂಬತ್ತನೇ ಬಾರಿಗೆ ಜಾರಿಯಲ್ಲಿದೆ. ಆರ್ಟಿಕಲ್ 324 ಮತ್ತು ಪ್ರಜಾಪ್ರತಿನಿಧಿ ಕಾಯ್ದೆ 1950 ರಡಿ ಜವಾಹರಲಾಲ್ ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಹಾಗೂ ಅಟಲ್ ಬಿಹಾರಿ ವಾಜಪೇಯಿ ಅವರ ಕಾಲದಲ್ಲೂ ಇದು ನಡೆದಿತ್ತು. ಮತದಾರರ ಪಟ್ಟಿಯ ಶುದ್ಧೀಕರಣಕ್ಕಾಗಿ (ನಿಧನ ಹೊಂದಿದವರು, ಸ್ಥಳಾಂತರಗೊಂಡವರು ಮತ್ತು ಡ್ಯೂಪ್ಲಿಕೇಟ್ ವೋಟ್ಗಳನ್ನು ಗುರುತಿಸಲು) ಈ ಪ್ರಕ್ರಿಯೆ ನಡೆಯುತ್ತಿದ್ದು, 11 ಲಕ್ಷಕ್ಕೂ ಅಧಿಕ ಬೂತ್ಗಳ ಮೂಲಕ ಹಾಗೂ ರಾಜಕೀಯ ಪಕ್ಷಗಳ ಪ್ರತಿನಿಧಿಗಳ (BLA 2) ಸಹಕಾರದೊಂದಿಗೆ ಇದು ಪಾರದರ್ಶಕವಾಗಿ ಜರುಗುತ್ತಿದೆ ಎಂದು ಸ್ಪಷ್ಟಪಡಿಸಿದರು.
ಕರ್ನಾಟಕದಲ್ಲಿ ಎಸ್ಐಆರ್ ಪ್ರಕ್ರಿಯೆಯ ನಂತರ 1 ಕೋಟಿ 7 ಲಕ್ಷಕ್ಕೂ ಅಧಿಕ ಮತದಾರರನ್ನು ಎಎಸ್ಡಿಡಿ (Absentees, Shifting, Death, Duplicate) ಎಂದು ಗುರುತಿಸಲಾಗಿದ್ದು, ಈ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿರುವ ಬೂತ್ ಮಟ್ಟದ ಅಧಿಕಾರಿಗಳು (BLOs) ಹೆಚ್ಚಾಗಿ ರಾಜ್ಯ ಸರ್ಕಾರದ ಶಾಲೆಗಳ ಶಿಕ್ಷಕರು ಮತ್ತು ಕಂದಾಯ ಇಲಾಖೆಯ ಅಧಿಕಾರிகಗಳಾಗಿದ್ದಾರೆ. ಕಾಂಗ್ರೆಸ್ ಪಕ್ಷವು ಈ ಅಂಕಿಅಂಶಗಳ ಬಗ್ಗೆ ಅನುಮಾನ ವ್ಯಕ್ತಪಡಿಸುವುದರ ಮೂಲಕ ತನ್ನದೇ ಸರ್ಕಾರದ ಅಧಿಕಾರಿಗಳು ಹಾಗೂ ಸ್ವತಃ ತಮ್ಮದೇ ಪಕ್ಷದ ಬಿಎಲ್ಎ-2 ಏಜೆಂಟರ ಮೇಲೆಯೇ ಆರೋಪ ಹೊರಿಸಿದಂತಾಗಿದೆ ಎಂದು ಸಿ.ಟಿ. ರವಿ ಕಿಡಿಕಾರಿದರು. ಚುನಾವಣಾ ಆಯೋಗದ ಮೇಲೆ ಗೂಬೆ ಕೂರಿಸುವ ಮೂಲಕ ಸುಳ್ಳು ಆರೋಪಗಳನ್ನು ಮಾಡುತ್ತಿರುವವರ ಸತ್ಯವನ್ನು ಜನತೆಯ ಮುಂದಿಡಲು ಈ ಅಭಿಯಾನ ಸಹಕಾರಿಯಾಗಲಿದೆ ಎಂದರು.
ಇವಿಎಂ ಹಾಗೂ ಚುನಾವಣಾ ಫಲಿತಾಂಶಗಳ ಕುರಿತು ಮಾತನಾಡಿ, 2014, 2019 ಮತ್ತು 2024ರ ಲೋಕಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಹಾಗೂ 'ಇಂಡಿಯಾ' ಒಕ್ಕೂಟದ ಮತಗಳ ಶೇಕಡವಾರು ಮತ್ತು ಸ್ಥಾನಗಳು ಕಾಲಕಾಲಕ್ಕೆ ಹೆಚ್ಚಾಗಿರುವುದನ್ನು ಅಂಕಿಅಂಶಗಳ ಸಮೇತ ವಿವರಿಸಿದರು. ಬಿಜೆಪಿ ಚುನಾವಣಾ ಆಯೋಗವನ್ನು ಬಳಸಿ ಅಧಿಕಾರಕ್ಕೆ ಬಂದಿದೆ ಎಂಬ ಆರೋಪ ಸಂಪೂರ್ಣ ಆಧಾರರಹಿತ ಮತ್ತು ಹಾಸ್ಯಾಸ್ಪದವಾಗಿದೆ. "ಸತ್ಯ ಮುಸುಲು ದಾಟೋದಕ್ಕೆ ಮುಂಚೆ ಸುಳ್ಳು ಊರೆಲ್ಲಾ ಸುತ್ತಾಡಿ ಬರುತ್ತೆ" ಎಂಬ ಗಾದೆಯಂತೆ ಕಾಂಗ್ರೆಸ್ ಸುಳ್ಳುಗಳನ್ನು ಹಬ್ಬಿಸುತ್ತಿದ್ದು, ಪ್ರಜಾಪ್ರಭುತ್ವ ಮತ್ತು ಸಾಂವಿಧಾನಿಕ ಸಂಸ್ಥೆಗಳನ್ನು ಹಳಿಯುವ ಈ ಕೃತ್ಯದ ವಿರುದ್ಧ ಭಾರತೀಯ ಜನತಾ ಪಾರ್ಟಿ ಸತ್ಯದ ಅನಾವರಣದೊಂದಿಗೆ ಜನಜಾಗೃತಿ ಮೂಡಿಸಲಿದೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಸತೀಶ್ ಕುಂಪಲ, ಪ್ರವೀಣ್ ಶೆಟ್ಟಿ, ಬೃಜೇಶ್ ಚೌಟ, ಗಣೇಶ್ ಕಾರ್ಣಿಕ್, ಕಿಶೋರ್ ಕುಮಾರ್, ಗುರ್ಮೆ ಸುರೇಶ್ ಶೆಟ್ಟಿ, ಭಾಗ್ಯರಥಿ ಮುರುಳ್ಯ, ಭಾರತೀಶ್, ಜಯಂತ್ ಕೋಟ್ಯಾನ್, ಯತೀಶ್ ಆರ್ವಾರ್, ಸಂಜಯ್ ಪ್ರಭು ಹಾಗೂ ಮನೋಜ್ ಶೆಟ್ಟಿ ಉಪಸ್ಥಿತರಿದ್ದರು.