image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ರಾಜಮನೆತನದ ಆರೋಪಗಳಿಗೆ ಸಚಿವ ಯತೀಂದ್ರ ಸಿದ್ದರಾಮಯ್ಯ ತೀಕ್ಷ್ಣ ತಿರುಗೇಟು

ರಾಜಮನೆತನದ ಆರೋಪಗಳಿಗೆ ಸಚಿವ ಯತೀಂದ್ರ ಸಿದ್ದರಾಮಯ್ಯ ತೀಕ್ಷ್ಣ ತಿರುಗೇಟು

ಮೈಸೂರು : ಮೈಸೂರು ದಸರಾ ಮಹೋತ್ಸವ ಮುಕ್ತಾಯಗೊಳ್ಳುತ್ತಿದ್ದಂತೆ ರಾಜ್ಯ ಸರ್ಕಾರ ಹಾಗೂ ಮೈಸೂರು ರಾಜಮನೆತನದ ನಡುವಿನ ಭಿನ್ನಾಭಿಪ್ರಾಯ ಬಹಿರಂಗಗೊಂಡಿದೆ. ದಸರಾ ಆಚರಣೆ ವೇಳೆ ಧಾರ್ಮಿಕ ಸಂಪ್ರದಾಯಗಳಿಗೆ ಅಡ್ಡಿಪಡಿಸಲಾಗಿದೆ ಮತ್ತು ಪೊಲೀಸ್ ಅಧಿಕಾರಿಗಳು ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರು ಬರೆದಿದ್ದ ನಾಲ್ಕು ಪುಟಗಳ ಪತ್ರಕ್ಕೆ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಯತೀಂದ್ರ ಸಿದ್ದರಾಮಯ್ಯ, ಅರಮನೆಯ ಸಂಪೂರ್ಣ ಜಾಗ ಸರ್ಕಾರದ ಸುಪರ್ದಿಯಲ್ಲೇ ಇದ್ದು, ರಾಜಮನೆತನದವರಿಗೆ ಕೇವಲ ವಾಸಿಸಲು ಮಾತ್ರ ಜಾಗ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು. ಅಲ್ಲದೆ, ಜಂಬೂಸವಾರಿಗೆ ಬಳಸುವ ಚಿನ್ನದ ಅಂಬಾರಿಯನ್ನು ಸರ್ಕಾರ ಉಚಿತವಾಗಿ ಪಡೆಯುತ್ತಿಲ್ಲ, ಬದಲಾಗಿ ಅದಕ್ಕೆ ಹಣ ಪಾವತಿಸಲಾಗುತ್ತಿದೆ ಎಂದು ತಿಳಿಸಿದರು.

ರಾಜಮನೆತನದವರು ಯಾವುದೇ ಸಮಸ್ಯೆ ಇದ್ದರೂ ನೇರವಾಗಿ ಸರ್ಕಾರದ ಗಮನಕ್ಕೆ ತರಬಹುದಿತ್ತು. ನಿರಂತರ ಸಂಪರ್ಕದಲ್ಲಿದ್ದರೂ ಏಕಾಏಕಿ ಮಾಧ್ಯಮಗಳಿಗೆ ಪತ್ರ ಬಿಡುಗಡೆ ಮಾಡಿರುವುದು ಸರಿಯಲ್ಲ ಎಂದು ಸಚಿವರು ಬೇಸರ ವ್ಯಕ್ತಪಡಿಸಿದರು.

ಅರಮನೆ ಆವರಣವನ್ನು ಸಂಪೂರ್ಣವಾಗಿ ಬಿಟ್ಟುಕೊಡುವುದು ಅಥವಾ ಹಬ್ಬದ ಅವಧಿಯನ್ನು ಕುಗ್ಗಿಸುವಂತಹ ರಾಜಮನೆತನದ ಷರತ್ತುಗಳನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದ ಅವರು, 1971-72 ರಿಂದ ದಸರಾ ನಾಡಹಬ್ಬವಾಗಿ ಸರ್ಕಾರದಿಂದಲೇ ನಡೆದುಕೊಂಡು ಬಂದಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ಉತ್ಸವದ ಆಚರಣೆಯ ಅಂತಿಮ ತೀರ್ಮಾನ ಸರ್ಕಾರದ ಮೇಲಿರುತ್ತದೆ ಎಂದು ಕಡ್ಡಿ ಮುರಿದಂತೆ ಹೇಳಿದರು.

ಜಟ್ಟಿ ಕಾಳಗದ ವಿಳಂಬ ಹಾಗೂ ಪೊಲೀಸರ ವರ್ತನೆಯ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಮತ್ತು ಅಂಬಾರಿ ಹೊರುವ ಆನೆ ಆಯ್ಕೆಯಲ್ಲಾದ ವಿಳಂಬಕ್ಕೆ ಅರಣ್ಯ ಇಲಾಖೆಯ ಕೊನೆ ಕ್ಷಣದ ನಿರ್ಧಾರವೇ ಕಾರಣ ಎಂದರು. ರಾಜಮನೆತನದ ಸಂಪ್ರದಾಯಕ್ಕೆ ಸರ್ಕಾರ ಎಂದಿಗೂ ಅಡ್ಡಿಪಡಿಸುವುದಿಲ್ಲ, ಅಗತ್ಯವಿದ್ದರೆ ಸರ್ಕಾರದ ಪ್ರತಿನಿಧಿಗಳನ್ನು ಕಳುಹಿಸಿ ಮಾತುಕತೆ ನಡೆಸಲಾಗುವುದು ಎಂದು ಭರವಸೆ ನೀಡಿದರು.

Category
ಕರಾವಳಿ ತರಂಗಿಣಿ