image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ರಾಜ್ಯ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ಬಿಜೆಪಿ ‘ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ’ ಪಾದಯಾತ್ರೆ: MLC ಕಿಶೋರ್ ಕುಮಾರ್ ಪುತ್ತೂರು ಕರೆ

ರಾಜ್ಯ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ಬಿಜೆಪಿ ‘ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ’ ಪಾದಯಾತ್ರೆ: MLC ಕಿಶೋರ್ ಕುಮಾರ್ ಪುತ್ತೂರು ಕರೆ

ಮಂಗಳೂರು: ರಾಜ್ಯ ಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ ಹಾಗೂ ಸಾರ್ವಜನಿಕರ ಮೂಲಭೂತ ಸಮಸ್ಯೆಗಳ ಪರಿಹಾರಕ್ಕಾಗಿ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ವತಿಯಿಂದ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ‘ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ’ ಬೃಹತ್ ಪಾದಯಾತ್ರೆ ಹಾಗೂ ‘ನಮ್ಮ ಹಕ್ಕು ನಮಗೆ ನೀಡಿ’ ಪ್ರತಿಭಟನಾ ಸಭೆಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಬೃಹತ್ ಹೋರಾಟಕ್ಕೆ ಜಿಲ್ಲೆಯ ಸಾರ್ವಜನಿಕರು, ಯುವಕರು, ಮಹಿಳೆಯರು, ಕಾರ್ಯಕರ್ತರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಬೆಂಬಲ ನೀಡಬೇಕೆಂದು ಕರ್ನಾಟಕ ವಿಧಾನ ಪರಿಷತ್ ಶಾಸಕ ಹಾಗೂ ಹೋರಾಟದ ಸಂಚಾಲಕ ಕಿಶೋರ್ ಕುಮಾರ್ ಪುತ್ತೂರು ಮನವಿ ಮಾಡಿದ್ದಾರೆ.

ರಾಜ್ಯದಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳ ಆಡಳಿತ ಸಂಪೂರ್ಣ ಕಸಿದುಕೊಂಡಿದ್ದು, ಜನಸಾಮಾನ್ಯರ ದಿನನಿತ್ಯದ ಸಮಸ್ಯೆಗಳಿಗೆ ಸರ್ಕಾರ ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ. ಗ್ರಾಮ ಪಂಚಾಯತಿಗಳಲ್ಲಿ ಅನುದಾನದ ಕೊರತೆ, ಸಿಬ್ಬಂದಿಗಳ ಅಭಾವ, ಹಾಗೂ 2024ರಲ್ಲಿ ಪ್ರಾರಂಭಿಸಲಾದ PDO ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳದಿರುವುದು ಗ್ರಾಮೀಣ ಆಡಳಿತವನ್ನು ಕುಸಿಯುವಂತೆ ಮಾಡಿದೆ. ಅಲ್ಲದೆ, ಗ್ರಾಮ ಪಂಚಾಯತ್ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಸಿಬ್ಬಂದಿಗೆ ಪರಿಷ್ಕೃತ ಕನಿಷ್ಠ ವೇತನ ಜಾರಿಗೊಳಿಸಲು ಸರ್ಕಾರ ವಿಳಂಬ ಮಾಡುತ್ತಿದೆ.

ಇ-ಸ್ವತ್ತು ಮತ್ತು ಪಂಚತಂತ್ರ ತಂತ್ರಾಂಶಗಳಲ್ಲಿನ ಸರ್ವರ್ ದೋಷಗಳಿಂದ ಸಾರ್ವಜನಿಕರು ಆಸ್ತಿ ದಾಖಲೆಗಳಿಗೆ ಕಚೇರಿಗಳಿಂದ ಕಚೇರಿಗಳಿಗೆ ಅಲೆದಾಡುವಂತಾಗಿದೆ. ಬಸವ ವಸತಿ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ನಿವಾಸ ಯೋಜನೆಗಳಡಿ ಕಳೆದ ಮೂರು ವರ್ಷಗಳಿಂದ ಮನೆಗಳನ್ನು ಮಂಜೂರು ಮಾಡದೆ ಬಡವರಿಗೆ ಅನ್ಯಾಯ ಎಸಗಲಾಗಿದೆ. ನಿವೇಶನ ಮತ್ತು ಕಟ್ಟಡ ನಕ್ಷೆ ಅನುಮೋದನೆಯ ಅಧಿಕಾರವನ್ನು ಪುನಃ ಗ್ರಾಮ ಪಂಚಾಯತಿಗಳಿಗೇ ನೀಡಬೇಕು ಎಂದು ಒತ್ತಾಯಿಸಲಾಗಿದೆ.

ಬಜೆಟ್‌ನಲ್ಲಿ ಘೋಷಿಸಲಾದ 'ಪ್ರಗತಿಪಥ' ರಸ್ತೆ ಯೋಜನೆ ಹಾಗೂ ಪಂಚಾಯತಿಗಳನ್ನು ದತ್ತು ಪಡೆಯುವ ಯೋಜನೆಗಳು ಕಾಗದಕ್ಕಷ್ಟೇ ಸೀಮಿತವಾಗಿವೆ. ಗೃಹಲಕ್ಷ್ಮಿ ಯೋಜನೆ, ವೃದ್ಧಾಪ್ಯ ಹಾಗೂ ವಿಧವಾ ವೇತನದ ಮಾಸಾಶನಗಳು ಕಳೆದ ಆರು ತಿಂಗಳಿಂದ ಬಿಡುಗಡೆಯಾಗದೆ ಮಹಿಳೆಯರು ಹಾಗೂ ಹಿರಿಯ ನಾಗರಿಕರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ನಡೆಸಲು ಸರ್ಕಾರ ವಿಳಂಬ ಮಾಡುತ್ತಿದ್ದು, ನಗರ ಪ್ರದೇಶಗಳಲ್ಲಿ ಕಟ್ಟಡ ಪರವಾನಗಿಯ LBPAS ತಂತ್ರಾಂಶದ ದೋಷಗಳಿಂದ ಅರ್ಜಿಗಳು ಬಾಕಿ ಉಳಿದಿವೆ.

ಈ ಹೋರಾಟವು ಜನರ ಹಕ್ಕುಗಳನ್ನು ರಕ್ಷಿಸುವ ಮತ್ತು ಸರ್ಕಾರವನ್ನು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುವಂತೆ ಮಾಡುವ ಜನಪರ ಹೋರಾಟವಾಗಿದ್ದು, ಪ್ರತಿಯೊಬ್ಬರೂ ಕೈಜೋಡಿಸಿ ಹೋರಾಟವನ್ನು ಯಶಸ್ವಿಗೊಳಿಸಬೇಕೆಂದು ಕಿಶೋರ್ ಕುಮಾರ್ ಪುತ್ತೂರು ಕೋರಿದ್ದಾರೆ.

Category
ಕರಾವಳಿ ತರಂಗಿಣಿ