image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕಾಂಗ್ರೆಸ್ ಅಧ್ಯಕ್ಷ ಖರ್ಗೆ ಹೇಳಿಕೆ ಅವರ ಹಿರಿತನಕ್ಕೆ ಶೋಭೆಯಲ್ಲ: ಶಾಸಕ ವೇದವ್ಯಾಸ ಕಾಮತ್ ಆಕ್ರೋಶ

ಕಾಂಗ್ರೆಸ್ ಅಧ್ಯಕ್ಷ ಖರ್ಗೆ ಹೇಳಿಕೆ ಅವರ ಹಿರಿತನಕ್ಕೆ ಶೋಭೆಯಲ್ಲ: ಶಾಸಕ ವೇದವ್ಯಾಸ ಕಾಮತ್ ಆಕ್ರೋಶ

ಮಂಗಳೂರು:ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಸಾರ್ವಜನಿಕ ಭಾಷಣದ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಬಳಸಿರುವ ಭಾಷೆ ಮತ್ತು ಹೇಳಿಕೆ ತೀವ್ರ ಖಂಡನೀಯವಾಗಿದ್ದು, ಇದು ಅವರ ವೈಯಕ್ತಿಕ ವ್ಯಕ್ತಿತ್ವ ಹಾಗೂ ಹಿರಿತನಕ್ಕೆ ಶೋಭೆ ತರುವಂತಹುದಲ್ಲ ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೇಶದ ಜನತೆ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದ ಮೇಲೆ ಅಪಾರ ವಿಶ್ವಾಸವಿಟ್ಟಿದ್ದು, ಆ ವಿಶ್ವಾಸವನ್ನು ಗಳಿಸುವಲ್ಲಿ ಕಾಂಗ್ರೆಸ್ ಪಕ್ಷ ಮತ್ತು ಅದರ ನಾಯಕರು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಸುಧೀರ್ಘ ರಾಜಕೀಯ ಅನುಭವ ಹೊಂದಿರುವ ಖರ್ಗೆಯವರಂತಹ ಹಿರಿಯ ನಾಯಕರು ತಮ್ಮ ಸ್ಥಾನದ ಜವಾಬ್ದಾರಿಯನ್ನು ಅರಿತು ಮಾತನಾಡಬೇಕಿತ್ತು. ಆದರೆ, ಭಾಷಣದ ಮಧ್ಯೆ ತಾಳ್ಮೆ ಕಳೆದುಕೊಂಡು ವಿನಾಕಾರಣ ದೇಶದ ಪ್ರಧಾನಿಯವರ ತಂದೆಯವರನ್ನು ಎಳೆದು ತಂದು ನಿಂದಿಸಿರುವುದು ಯಾವುದೇ ರಾಜಕೀಯ ಅಥವಾ ಸಾರ್ವಜನಿಕ ಮಾನದಂಡಗಳಲ್ಲೂ ಒಪ್ಪಲು ಸಾಧ್ಯವಿಲ್ಲದ ನಡವಳಿಕೆಯಾಗಿದೆ.

ವಿಪಕ್ಷಗಳು ನಿರಂತರವಾಗಿ ಹಿನ್ನಡೆ ಅನುಭವಿಸುತ್ತಿರುವುದರಿಂದ ಉಂಟಾಗಿರುವ ನಿರಾಶೆ ಹಾಗೂ ಹತಾಶೆ ಅವರು ಬಳಸುತ್ತಿರುವ ಭಾಷೆಯಲ್ಲೇ ಸ್ಪಷ್ಟವಾಗಿ ಗೋಚರಿಸುತ್ತಿದೆ. ಇಂತಹ ಬಾಯಿ ಚಪಲದ ಮತ್ತು ಕ್ಷುಲ್ಲಕ ಹೇಳಿಕೆಗಳಿಂದ ಪ್ರಧಾನಿ ಮೋದಿಯವರ ಘನತೆ ಹಾಗೂ ವರ್ಚಸ್ಸಿಗೆ ಕಿಂಚಿತ್ತೂ ಧಕ್ಕೆ ತರಲು ಸಾಧ್ಯವಿಲ್ಲ. ದೇಶಕ್ಕಾಗಿ ಮತ್ತು ದೇಶದ ಜನರ ಕಲ್ಯಾಣಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ಪ್ರಧಾನಿಗಳಿಗೆ ದೇಶದ ಕೋಟ್ಯಂತರ ಜನರ ಪ್ರೀತಿ ಹಾಗೂ ವಿಶ್ವಾಸವೇ ದೊಡ್ಡ ಶ್ರೀರಕ್ಷೆಯಾಗಿದೆ. ಇಂತಹ ಕ್ಷುಲ್ಲಕ ಆರೋಪಗಳು ಹಾಗೂ ವ್ಯಕ್ತಿಗತ ನಿಂದನೆಗಳಿಗೆ ದೇಶದ ಜನತೆಯೇ ಚುನಾವಣೆಯ ಮೂಲಕ ಪದೇಪದೇ ಸೂಕ್ತ ಉತ್ತರ ನೀಡುತ್ತಿದ್ದಾರೆ ಎಂದು ಶಾಸಕ ವೇದವ್ಯಾಸ ಕಾಮತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Category
ಕರಾವಳಿ ತರಂಗಿಣಿ