ಮಂಗಳೂರು: ರಾಜ್ಯ ಸರ್ಕಾರದ ಜನವಿರೋಧಿ ನೀತಿಗಳು, ಗ್ರಾಮ ಪಂಚಾಯತ್ಗಳ ಆಡಳಿತದಲ್ಲಿ ಉಂಟಾಗಿರುವ ತೀವ್ರ ಆರ್ಥಿಕ ಮುಗ್ಗಟ್ಟು, ಪಿಂಚಣಿ ಕಡಿತ, ಗೃಹಲಕ್ಷ್ಮಿ ಹಾಗೂ ವಸತಿ ಯೋಜನೆಗಳ ಸ್ಥಗಿತವನ್ನು ಖಂಡಿಸಿ, ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನವೆಂಬರ್ 15ರ ಒಳಗೆ ಎಲ್ಲಾ ಗ್ರಾಮ ಪಂಚಾಯತ್ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಎದುರು 'ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ' ಹಾಗೂ 'ಪ್ರಜಾತಂತ್ರ ಬಚಾವೊ' ಅಭಿಯಾನದಡಿ ಬೃಹತ್ ಪಾದಯಾತ್ರೆ ಮತ್ತು ಪ್ರತಿಭಟನಾ ಸಭೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ರಾಜ್ಯದ ಜನತೆ ಹಾಗೂ ಗ್ರಾಮೀಣ ಪ್ರದೇಶಗಳು ತೀವ್ರ ಸಂಕಷ್ಟ ಎದುರಿಸುತ್ತಿವೆ ಎಂದು ಆರೋಪಿಸಿದರು. ಗ್ರಾಮ ಪಂಚಾಯತ್ಗಳ ಅಸ್ತಿತ್ವ ಇಂದು ಉಳಿದಿದ್ದರೆ ಅದು ಕೇಂದ್ರ ಸರ್ಕಾರದ 16ನೇ ಹಣಕಾಸು ಯೋಜನೆಯ ಅನುದಾನದಿಂದ ಮಾತ್ರ ಎಂದ ಅವರು, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಪಂಚಾಯತ್ಗಳಿಗೆ ನಿರಂತರವಾಗಿ ಅನುದಾನ ನೀಡುತ್ತಿದ್ದು, ಗ್ರಾಮೀಣ ಭಾಗದಲ್ಲಿ ಬೀದಿ ದೀಪಗಳು ಉರಿಯುತ್ತಿದ್ದರೆ ಅದಕ್ಕೆ ಕೇಂದ್ರ ಸರ್ಕಾರದ ನೆರವಷ್ಟೇ ಕಾರಣ ಎಂದು ಸ್ಪಷ್ಟಪಡಿಸಿದರು.
ರಾಜ್ಯ ಸರ್ಕಾರದ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದ ಸತೀಶ್ ಕುಂಪಲ, ಗೃಹಲಕ್ಷ್ಮಿ ಯೋಜನೆಯಡಿ ಬಡ ಮಹಿಳೆಯರಿಗೆ ಸಿಗಬೇಕಾದ ಎರಡು ಸಾವಿರ ರೂಪಾಯಿ ಹಣವನ್ನು ಕಟ್ ಮಾಡಲಾಗುತ್ತಿದ್ದು, ವಾರ್ಷಿಕ ಆದಾಯ ಮಿತಿಯ ನೆಪಡ್ಡಿ ಅನೇಕ ಅರ್ಹರನ್ನು ಕೈಬಿಡಲಾಗುತ್ತಿದೆ ಎಂದರು.
ವೃದ್ಧರು, ಅಂಗವಿಕಲರು ಹಾಗೂ ಬಡ ಕುಟುಂಬಗಳಿಗೆ ದೊರೆಯಬೇಕಾದ ವೃದ್ಧಾಪ್ಯ ಪಿಂಚಣಿಗಳು ರಾಜ್ಯಾದ್ಯಂತ ಸ್ಥಗಿತಗೊಂಡಿದ್ದು, ಹಿರಿಯರು ಸರ್ಕಾರದ ಹಣಕ್ಕಾಗಿ ಕಾಯುವಂತಹ ದಯನೀಯ ಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು. ಅಲ್ಲದೆ, ಬಸವ ವಸತಿ ಯೋಜನೆಯಡಿ ಬಡವರಿಗೆ ಮನೆ ಹಾಗೂ ನಿವೇಶನಗಳನ್ನು ನೀಡುವಲ್ಲಿಯೂ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಎರಡು ವರ್ಷಗಳಿಂದ ಗ್ರಾಮ ಪಂಚಾಯತ್ಗಳಿಗೆ ಅಭಿವೃದ್ಧಿ ಹಾಗೂ ನಿರ್ವಹಣೆಗೆ ಅಗತ್ಯವಿರುವ ಯಾವುದೇ ಆರ್ಥಿಕ ಅನುದಾನವನ್ನು ಬಿಡುಗಡೆ ಮಾಡದಿರುವುದರಿಂದ ಸರ್ಕಾರ ಆರ್ಥಿಕ ದಿವಾಳಿತನವನ್ನು ಎದುರಿಸುತ್ತಿದೆ. ಸಿಬ್ಬಂದಿ ವೇತನ, ಕಚೇರಿ ನಿರ್ವಹಣೆ ಹಾಗೂ ತುರ್ತು ದುರಸ್ತಿಗೆ ಹಣವಿಲ್ಲದೆ ಪಂಚಾಯತ್ಗಳು ಮುಗ್ಗಟ್ಟಿನಲ್ಲಿವೆ. ಕಳೆದ ಒಂಬತ್ತು ತಿಂಗಳಿಂದ ಚುನಾವಣೆ ನಡೆಯದ ಕಾರಣ ಅಧಿಕಾರಿಗಳ ಮೂಲಕ ಏಕಪಕ್ಷೀಯ ಆಡಳಿತ ನಡೆಯುತ್ತಿದ್ದು, ಜನಪ್ರತಿನಿಧಿಗಳಿಗಾಗಲಿ ಅಥವಾ ಸಾರ್ವಜನಿಕರಿಗಾಗಲಿ ಯಾವುದೇ ಬೆಲೆ ಇಲ್ಲದಂತಾಗಿದೆ ಎಂದು ಟೀಕಿಸಿದರು. 9/11 ಹಾಗೂ 11E ಸ್ಕೆಚ್ ಸಮಸ್ಯೆ, ತಾಂತ್ರಿಕ ದೋಷಗಳು ಮತ್ತು ಸರ್ವರ್ ಸಮಸ್ಯೆಯಿಂದಾಗಿ ದೈನಂದಿನ ಕೆಲಸಗಳಿಗೂ ಸಾರ್ವಜನಿಕರು ತಹಶೀಲ್ದಾರ್ ಹಾಗೂ ಪಂಚಾಯತ್ ಕಚೇರಿಗಳಿಗೆ ಅಲೆಯುವ ದುಸ್ಥಿತಿ ಮುಂದುವರಿದಿದೆ ಎಂದರು.
ಗ್ರಾಮೀಣ ಪ್ರದೇಶಗಳಲ್ಲಿ ನಿರಂತರ ಅಘೋಷಿತ ಲೋಡ್ಶೆಡ್ಡಿಂಗ್ನಿಂದಾಗಿ ರೈತರು ಹಾಗೂ ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಕುಡಿಯುವ ನೀರಿನ ಕೊರತೆ, ಮಳೆ ವೈಫಲ್ಯ ಹಾಗೂ ಬೆಳೆ ವಿಮೆ ಪರಿಹಾರ ಸಿಗದೆ ಕೃಷಿಕರು ಕಂಗಾಲಾಗಿದ್ದಾರೆ.
ಈ ಎಲ್ಲ ಸಮಸ್ಯೆಗಳನ್ನು ಪರಿಹರಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಅವರು ಆರೋಪಿಸಿದರು.
ಈ ಎಲ್ಲಾ ಜನವಿರೋಧಿ ಧೋರಣೆಗಳನ್ನು ಖಂಡಿಸಿ ನವೆಂಬರ್ 15ರೊಳಗೆ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಎದುರು 1 ಕಿಲೋಮೀಟರ್ ಪಾದಯಾತ್ರೆ ನಡೆಸಿ ಬೃಹತ್ ಪ್ರತಿಭಟನಾ ಸಭೆಗಳನ್ನು ಹಮ್ಮಿಕೊಳ್ಳಲಾಗುವುದು. ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಕಾವೂರಿನಿಂದ ಎಂಸಿಸಿ ತನಕ ದೊಡ್ಡ ಮಟ್ಟದ ಪಾದಯಾತ್ರೆ ನಡೆಸಲಾಗುವುದು. ಜಿಲ್ಲೆಯ ಸಂಸದರು, ಶಾಸಕರು ಹಾಗೂ ಪಕ್ಷದ ಪ್ರಮುಖರ ನೇತೃತ್ವದಲ್ಲಿ ನಡೆಯಲಿರುವ ಈ ಜನಪರ ಹೋರಾಟಕ್ಕೆ ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡಬೇಕು ಎಂದು ಸತೀಶ್ ಕುಂಪಲ ವಿನಂತಿಸಿದರು.