image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಕುರಿತು ರಾಹುಲ್ ಗಾಂಧಿ ಹೇಳಿಕೆಗೆ ತೀವ್ರ ಆಕ್ರೋಶ

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಕುರಿತು ರಾಹುಲ್ ಗಾಂಧಿ ಹೇಳಿಕೆಗೆ ತೀವ್ರ ಆಕ್ರೋಶ

ನವದೆಹಲಿ : ಭಾರತದ ರಾಜಕೀಯ ಅಖಾಡದಲ್ಲಿ ಪರಸ್ಪರ ಟೀಕೆ-ಟಿಪ್ಪಣಿಗಳು ಸಹಜ. ಆದರೆ ದೇಶದ ಭದ್ರತಾ ವ್ಯವಸ್ಥೆಯ ಬೆನ್ನೆಲುಬಾಗಿ ನಿಂತಿರುವ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್‌ಎ) ಅಜಿತ್ ದೋವಲ್ ಅವರಂತಹ ಹಿರಿಯ ಅಧಿಕಾರಿಯನ್ನು ರಾಜಕೀಯ ದಾಳವಾಗಿ ಬಳಸಿರುವುದು ಈಗ ದೇಶಾದ್ಯಂತ ಭಾರಿ ಚರ್ಚೆಗೆ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ.

ದೆಹಲಿಯಲ್ಲಿ ನಡೆದ ರಾಜಕೀಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಎನ್‌ಎಸ್‌ಎ ಅಜಿತ್ ದೋವಲ್ ಅವರು ದೇಶದ ವಿರುದ್ಧ ಸಂಚು ರೂಪಿಸುತ್ತಿರುವ 'ಖಳನಾಯಕರು' ಎಂದು ಬಣ್ಣಿಸಿದ್ದರು. ಅಷ್ಟೇ ಅಲ್ಲದೆ, ಈ ನಾಯಕರ ವಲಯವು ಕ್ರಮೇಣ ಕುಗ್ಗುತ್ತಿದ್ದು, ಅವರನ್ನು ಚಕ್ರವ್ಯೂಹದಂತೆ ಸುತ್ತುವರೆದಿರುವುದಾಗಿ ಹೇಳಿದ್ದರು. ಈ ಹೇಳಿಕೆಯು ಕೇವಲ ಸರ್ಕಾರದ ವಿರುದ್ಧದ ಟೀಕೆಯಾಗಿ ಉಳಿಯದೆ, ದೇಶದ ಭದ್ರತಾ ಸಂಸ್ಥೆಗಳ ಮೇಲಿನ ದಾಳಿಯಂತೆ ಕಾಣುತ್ತಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ರಾಹುಲ್ ಗಾಂಧಿ ಅವರ ಈ ವಿವಾದಾತ್ಮಕ ಹೇಳಿಕೆ ಹೊರಬೀಳುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಜಿತ್ ದೋವಲ್ ಅವರ ಸಾಹಸಗಾಥೆಗಳು ಸದ್ದು ಮಾಡುತ್ತಿವೆ. ಪಾಕಿಸ್ತಾನದಂತಹ ಶತ್ರು ರಾಷ್ಟ್ರದ ಒಳಗೆ ಸೇರಿ ಬರೋಬ್ಬರಿ ಏಳು ವರ್ಷಗಳ ಕಾಲ ಗುಪ್ತಚರನಾಗಿ ಕೆಲಸ ಮಾಡಿ ದೇಶಕ್ಕೆ ಮಹತ್ವದ ಕೊಡುಗೆ ನೀಡಿದ ದೋವಲ್ ಅವರ ಕೊಡುಗೆಗಳನ್ನು ನೆಟ್ಟಿಗರು ಸ್ಮರಿಸುತ್ತಿದ್ದಾರೆ. ದೇಶದ ಆಂತರಿಕ ಭದ್ರತೆಗಾಗಿ ತಮ್ಮ ಇಡೀ ಜೀವನವನ್ನೇ ಮುಡುಪಾಗಿಟ್ಟ ವ್ಯಕ್ತಿಯನ್ನು ರಾಜಕೀಯ ಪ್ರೇರಿತವಾಗಿ 'ವಿಲನ್' ಎಂದು ಕರೆಯುವುದು ಅಕ್ಷಮ್ಯ ಅಪರಾಧ ಎಂದು ಸಾರ್ವಜನಿಕರು ಹಾಗೂ ನೆಟ್ಟಿಗರು ಕಠಿಣವಾಗಿ ತೊಳೆಯುತ್ತಿದ್ದಾರೆ.

ದೇಶದ ರಕ್ಷಣೆಗಾಗಿ ಮೌನವಾಗಿ ಕೆಲಸ ಮಾಡುವ ಅಧಿಕಾರಿಯನ್ನು ವಿವಾದಕ್ಕೆ ಎಳೆದು ತಂದಿರುವ ರಾಹುಲ್ ಗಾಂಧಿಯವರ ನಡೆ ಅವರ ರಾಜಕೀಯ ಅಪಕ್ವತೆಯನ್ನು ತೋರಿಸುತ್ತದೆ ಎಂದು ಬಿಜೆಪಿ ನಾಯಕರು ತೀವ್ರವಾಗಿ ಟೀಕಿಸಿದ್ದಾರೆ. ಶತ್ರು ರಾಷ್ಟ್ರಗಳು ಹಾಗೂ ಭಯೋತ್ಪಾದಕರು ಯಾರನ್ನು ಕಂಡು ನಡುಗುತ್ತಾರೋ ಅಂತಹ ಧೀರ ನಾಯಕನನ್ನು ದೇಶದ ವಿರೋಧ ಪಕ್ಷದ ನಾಯಕರೇ ಅವಮಾನಿಸುವುದು ದುರದೃಷ್ಟಕರ ಸಂಗತಿ ಎಂದು ಪ್ರತಿಪಾದಿಸಲಾಗಿದೆ.

ರಾಜಕೀಯ ನಾಯಕರು ತಮ್ಮ ಸೈದ್ಧಾಂತಿಕ ಹಾಗೂ ಪಕ್ಷಪಾತದ ಸಂಘರ್ಷಕ್ಕಾಗಿ ದೇಶದ ಭದ್ರತಾ ಪಡೆಗಳು ಮತ್ತು ಗುಪ್ತಚರ ಇಲಾಖೆಯ ಮುಖ್ಯಸ್ಥರನ್ನು ಗುರಿಯಾಗಿಸುವುದು ಅಪಾಯಕಾರಿ ಬೆಳವಣಿಗೆಯಾಗಿದೆ. ಅಜಿತ್ ದೋವಲ್ ಅವರು ಕೇವಲ ಒಬ್ಬ ವ್ಯಕ್ತಿಯಲ್ಲ, ಅವರು ಭಾರತದ ಭದ್ರತೆಯ ಅಸ್ಮಿತೆ. ಇಂತಹ ದೇಶಭಕ್ತ ಅಧಿಕಾರಿಯನ್ನು 'ವಿಲನ್' ಎಂದು ಕರೆದಿರುವ ರಾಹುಲ್ ಗಾಂಧಿ ಅವರು ದೇಶದ ಜನತೆಯ ಕ್ಷಮೆಯಾಚಿಸಬೇಕು ಎಂಬ ಒತ್ತಾಯ ದೇಶಾದ್ಯಂತ ಬಲವಾಗಿ ಕೇಳಿಬರುತ್ತಿದೆ.

Category
ಕರಾವಳಿ ತರಂಗಿಣಿ