image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ದೆಹಲಿಯಲ್ಲಿ ಸಿಜೆಪಿ ಪ್ರತಿಭಟನೆ ವಿಫಲ: ಮುಖಂಡರ ಬಂಧನ

ದೆಹಲಿಯಲ್ಲಿ ಸಿಜೆಪಿ ಪ್ರತಿಭಟನೆ ವಿಫಲ: ಮುಖಂಡರ ಬಂಧನ

ನವದೆಹಲಿ : ಭಾರತದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ಕುಮಾರ್‌ ರಾಜೀನಾಮೆಗೆ ಆಗ್ರಹಿಸಿ ನವದೆಹಲಿಯ ಜಂತರ್‌ಮಂತರ್‌ನಲ್ಲಿ ಕ್ರಾಕೋಚ್‌ ಜನತಾ ಪಾರ್ಟಿ (ಸಿಜೆಪಿ) ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ದೆಹಲಿ ಪೊಲೀಸರು ತೀವ್ರು ಕಾವಲು ಮತ್ತು ಮುನ್ನೆಚ್ಚರಿಕಾ ಕ್ರಮಗಳ ಮೂಲಕ ಯಶಸ್ವಿಯಾಗಿ ವಿಫಲಗೊಳಿಸಿದ್ದಾರೆ.

ಪ್ರತಿಭಟನೆಯನ್ನು ಹತ್ತಿಕ್ಕಲು ರಾಷ್ಟ್ರ ರಾಜಧಾನಿಯಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಕೈಗೊಳ್ಳಲಾಗಿದ್ದು, ಸಿಜೆಪಿ ಸಂಸ್ಥಾಪಕ ಅಧ್ಯಕ್ಷ ಅಭಿಜಿತ್‌ ದೀಪ್ಕೆ, ವಕ್ತಾರ ಅಶುತೋಶ್‌ ರಂಕಾ, ಸೌರವ್‌ ದಾಸ್‌ ಹಾಗೂ ಯೂಟ್ಯೂಬರ್‌ ಧ್ರುವ್‌ ರಾಠಿ ಸೇರಿದಂತೆ ಸಾವಿರಾರು ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪುಣೆಯಿಂದ ದೆಹಲಿಗೆ ವಿಮಾನದಲ್ಲಿ ಬರುತ್ತಿದ್ದ ಅಭಿಜಿತ್‌ ದೀಪ್ಕೆ ಹಾಗೂ ಅಶುತೋಶ್‌ ರಂಕಾ ಅವರನ್ನು ವಿಮಾನದೊಳಗೆಯೇ ತಡೆದು ವಶಕ್ಕೆ ಪಡೆಯಲಾಯಿತು. ಗುರುಗಾಂವ್‌ನಲ್ಲಿದ್ದ ಧ್ರುವ್‌ ರಾಠಿ ಅವರನ್ನು ಕೂಡ ಅವರ ನಿವಾಸದಲ್ಲೇ ಪೊಲೀಸರು ಬಂಧಿಸಿದರು.

ಪ್ರತಿಭಟನಾಕಾರರ ಸಂಘಟನೆಯನ್ನು ತಡೆಯಲು ದೆಹಲಿಯಾದ್ಯಂತ ರಾತ್ರಿಯಿಡೀ ಕಾರ್ಯಾಚರಣೆ ನಡೆಸಲಾಗಿದ್ದು, 400ಕ್ಕೂ ಅಧಿಕ ಶಂಕಿತರನ್ನು ಹಾಗೂ ಶಾಹೀನ್ ಬಾಗ್ ಸೇರಿದಂತೆ ವಿವಿಧೆಡೆಯಿಂದ ನೂರಾರು ಜನರನ್ನು ಬಂಧಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಮೇಲೆ ನಿರ್ಬಂಧ ಹೇರಲಾಗಿದ್ದು, 45ಕ್ಕೂ ಹೆಚ್ಚು ಮೆಟ್ರೋ ನಿಲ್ದಾಣಗಳನ್ನು ಮುಚ್ಚಲಾಗಿದೆ ಮತ್ತು ಹಲವು ರೈಲು ಸಂಚಾರಗಳನ್ನು ರದ್ದುಪಡಿಸಲಾಗಿದೆ.

ದೆಹಲಿಯಲ್ಲಿ ಯಾವುದೇ ಅನಧಿಕೃತ ಸಭೆಗಳು ನಡೆಯದಂತೆ ತಡೆಯಲು 35,000ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಜಂತರ್‌ಮಂತರ್‌ ರಸ್ತೆಯಲ್ಲಿ ಏಳು ಹಂತಗಳ ವೆಲ್ಡಿಂಗ್‌ ಬ್ಯಾರಿಕೇಡ್‌ಗಳನ್ನು ಹಾಕಲಾಗಿದ್ದು, ನಗರದ 6 ಪ್ರಮುಖ ಕ್ರೀಡಾಂಗಣಗಳನ್ನು ತಾತ್ಕಾಲಿಕ ಬಂಧನ ಕೇಂದ್ರಗಳನ್ನಾಗಿ ಮಾರ್ಪಡಿಸಲಾಗಿದೆ. ಅಲ್ಲದೆ, ಮುಖ ಗುರುತಿಸುವಿಕೆ ವ್ಯವಸ್ಥೆ, ಸಿಸಿಟಿವಿ ಹಾಗೂ ಡ್ರೋನ್‌ಗಳ ಮೂಲಕ ತೀವ್ರ ಕಣ್ಗಾವಲು ಇಡಲಾಗಿದೆ.

Category
ಕರಾವಳಿ ತರಂಗಿಣಿ