ಮಂಗಳೂರು: ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಮುಚ್ಚಿಹಾಕಲು ಮತ್ತು ಜನರ ಗಮನವನ್ನು ಬೇರೆಡೆ ಸೆಳೆಯುವ ದುರ್ಬುದ್ಧಿಯಿಂದ ಎಸ್‌ಐಆರ್ (SIR) ಪ್ರಕ್ರಿಯೆಯಲ್ಲಿ ಬಿಜೆಪಿ ಕಾರ್ಯಕರ್ತರ ವಿರುದ್ಧ ಎಫ್‌ಐಆರ್ (FIR) ದಾಖಲಿಸಿ ಪೊಲೀಸ್ ಇಲಾಖೆಯನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಕಾನೂನು ಪ್ರಕೋಷ್ಠದ ನಿಯೋಗವು ಕಾವೂರು ಪೊಲೀಸ್ ಠಾಣೆಗೆ ಭೇಟಿ ನೀಡಿ ಪೊಲೀಸ್ ಅಧಿಕಾರಿಗಳೊಂದಿಗೆ ಗಂಭೀರ ಚರ್ಚೆ ನಡೆಸಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಕಾನೂನು ಪ್ರಕೋಷ್ಠದ ಸಂಚಾಲಕರು, ಎಸ್‌ಐಆರ್ ಎಂಬುದು ಕಡ್ಡಾಯ ಚುನಾವಣಾ ಸಂಬಂಧಿತ ಪ್ರಕ್ರಿಯೆಯಾಗಿದ್ದು, ನಮೂನೆ-7 ರ (Form-7) ಅನ್ವಯ ಸಲ್ಲಿಕೆಯಾಗುವ ಅರ್ಜಿಗಳನ್ನು ವಿಲೇವಾರಿ ಮಾಡಲು ಚುನಾವಣಾಧಿಕಾರಿಗಳು ಸ್ವತಂತ್ರರು ಹಾಗೂ ಸಕ್ಷಮರಾಗಿರುತ್ತಾರೆ ಎಂದು ಸ್ಪಷ್ಟಪಡಿಸಿದರು. ಸರ್ಕಾರದ ಇಂತಹ ಅಧಿಕಾರ ದುರುಪಯೋಗದ ಕ್ರಮಗಳ ವಿರುದ್ಧ ಪಕ್ಷದ ಕಾರ್ಯಕರ್ತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಬಿಜೆಪಿ ಸಂಪೂರ್ಣವಾಗಿ ಕಾನೂನಾತ್ಮಕ ಹೋರಾಟವನ್ನು ಮುಂದುವರಿಸಲಿದೆ ಎಂದು ಎಚ್ಚರಿಸಿದರು.
ಈ ಪ್ರತಿಭಟನಾ ಭೇಟಿ ಹಾಗೂ ಸಭೆಯಲ್ಲಿ ಜಿಲ್ಲಾ ಲೀಗಲ್ ಸೆಲ್‌ನ ಸಂಚಾಲಕರಾದ ಶ್ರೀಧರ ಶೆಟ್ಟಿ ಪುಳಿಂಚ, ಸಹ ಸಂಚಾಲಕರಾದ ಪ್ರಮೋದ್ ಪೂಜಾರಿ ಕೆರ್ವಾಸೆ, ಜಿಲ್ಲಾ ಲೀಗಲ್ ಸೆಲ್‌ನ ಸದಸ್ಯರಾದ ಶ್ರೀ ವೇಣುಕುಮಾರ್, ಮೂಡಬಿದ್ರೆ ಮಂಡಲದ ಸಹ ಸಂಚಾಲಕರಾದ ಶಶಿಕುಮಾರ್ ಮೂಲ್ಕಿ, ಸಮಿತಿ ಸದಸ್ಯರಾದ ರವೀಶ್ ಕಾಮತ್, ಮಂಗಳೂರು ಉತ್ತರ ಮಂಡಲದ ಸಮಿತಿ ಸದಸ್ಯರಾದ ರಾಘವೇಂದ್ರ ಟಿ.ಎನ್., ಜಿಲ್ಲಾ ಬಿಜೆಪಿ ಸಾಮಾಜಿಕ ಜಾಲತಾಣ ಪ್ರಕೋಷ್ಟದ ಸಂಚಾಲಕ ಹಾಗೂ ವಕೀಲ ಅಕ್ಷಯ್ ಆಳ್ವ, ಮಂಗಳೂರು ವಿಧಾನಸಭಾ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಮೋಹನ್ ರಾಜ್ ಕೆ.ಆರ್., ಮಂಗಳೂರು ಉತ್ತರ ಮಂಡಲದ ಪ್ರಧಾನ ಕಾರ್ಯದರ್ಶಿ ರಣದೀಪ್ ಕಾಂಚನ್, ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾ ಅಧ್ಯಕ್ಷ ಶಾನವಾಝ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ಕಾರ್ಯಕರ್ತರಿಗೆ ಬೆನ್ನೆಲುಬಾಗಿ ನಿಲ್ಲಲಿದೆ ಬಿಜೆಪಿ ಲೀಗಲ್ ಸೆಲ್
ದಕ್ಷಿಣ ಕನ್ನಡ ಜಿಲ್ಲೆಯ ಯಾವುದೇ ಬಿಜೆಪಿ ಕಾರ್ಯಕರ್ತರು ಅಥವಾ ಬಿಎಲ್‌ಒ-2 (BLO-2) ಆಗಿ ಎಸ್‌ಐಆರ್ ಕಾರ್ಯದಲ್ಲಿ ಸಹಕರಿಸಿದವರು ಆಡಳಿತರೂಢ ಕಾಂಗ್ರೆಸ್ಸಿನ ಯಾವುದೇ ರೀತಿಯ ಬೆದರಿಕೆ ಅಥವಾ ಒತ್ತಡಗಳಿಗೆ ಭಯಪಡುವ ಅಗತ್ಯವಿಲ್ಲ ಎಂದು ಬಿಜೆಪಿ ಲೀಗಲ್ ಸೆಲ್ ಅಭಯ ನೀಡಿದೆ. ಸಂಕಷ್ಟದ ಈ ಸಂದರ್ಭದಲ್ಲಿ ಜಿಲ್ಲಾ ಹಾಗೂ ಎಲ್ಲಾ ಮಂಡಲಗಳ ಲೀಗಲ್ ಸೆಲ್ ತಂಡವು ಕಾರ್ಯಕರ್ತರ ಸದಾ ಬೆನ್ನೆಲುಬಾಗಿ ನಿಲ್ಲಲಿದೆ ಎಂದು ತಿಳಿಸಲಾಗಿದೆ.
ಮಾತ್ರವಲ್ಲದೆ, ಈ ವಿಚಾರಕ್ಕೆ ಸಂಬಂಧಿಸಿದಂತೆ ಮುಂಬರುವ ದಿನಗಳಲ್ಲಿ ಉಚ್ಛ ನ್ಯಾಯಾಲಯದಲ್ಲಿ (High Court) ರಿಟ್ ಅರ್ಜಿ ಸಲ್ಲಿಸಿ, ಯಾವುದೇ ಕಾರ್ಯಕರ್ತರಿಗೆ ಅನ್ಯಾಯ ಅಥವಾ ತೊಂದರೆ ಉಂಟಾಗದಂತೆ ಕಾನೂನುಬದ್ಧ ರಕ್ಷಣೆ ಮತ್ತು ಅಗತ್ಯ ಎಲ್ಲಾ ಸಹಕಾರವನ್ನು ಒದಗಿಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಕಾನೂನು ಪ್ರಕೋಷ್ಠವು ಸ್ಪಷ್ಟಪಡಿಸಿದೆ.