ಮಂಗಳೂರು: ಇತಿಹಾಸ ಕಂಡರಿಯದ ರೀತಿಯಲ್ಲಿ ಮೀನಿನ ಕ್ಷಾಮ ಎದುರಾಗಿದ್ದು ಮೀನುಗಾರರು ಆರ್ಥಿಕ ಸಂಕಷ್ಟದಲ್ಲಿದ್ದು ಮೀನುಗಾರಿಕೆಯನ್ನು ನಂಬಿರುವ ಕುಟುಂಬಗಳು ತೀವ್ರ ಆರ್ಥಿಕ ಬಿಕ್ಕಟ್ಟಿನ ಹೊಡೆತದಿಂದ ತತ್ತರಿಸಿಹೋಗಿದೆ.
ಅನೇಕ ಬೋಟುಗಳು ಲಂಗರು ಹಾಕಿವೆ . ಮೀನುಗಾರಿಕೆಗೆ ತೆರಳುವ ಬೋಟುಗಳು ಮೀನಿಲ್ಲದೆ ವಾಪಸು ಬರುತ್ತಿದೆ. ಬೋಟು ಮಾಲಕರು ಬ್ಯಾಂಕ್ ಸಾಲ ಸಂದಾಯ ಮಾಡಲು ಪರದಾಡುತ್ತಿದ್ದರೆ ಇನ್ನೊಂದೆಡೆ ಮೀನುಗಾರಿಕಾ ವೃತ್ತಿಯಲ್ಲಿರುವ ಒರಿಸ್ಸಾ, ತಮಿಳುನಾಡು ಮೂಲದ ವಲಸೆ ಕಾರ್ಮಿಕರು ಕೆಲಸವಿಲ್ಲದೆ ಬರಿಗೈಯಲ್ಲಿ ತಮ್ಮ ರಾಜ್ಯಗಳಿಗೆ ಹಿಂದಿರುಗುತ್ತಿದ್ದಾರೆ. ಮಂಗಳೂರಿನ ಮೀನುಗಾರಿಕಾ ಕಾರ್ಮಿಕರ ಆರ್ಥಿಕ ಪರಿಸ್ಥಿತಿ ಕೇಳುವವರೇ ಇಲ್ಲದಾಗಿದ್ದಾರೆ.
ಮೀನುಗಾರಿಕೆಯಿಂದ ಬರುವ ಆದಾಯವನ್ನು ನಂಬಿಕೊಂಡು ಸ್ವ ಸಹಾಯ ಸಂಘಗಳ ಮೂಲಕ ಕಿರು ಸಾಲ ಪಡೆದ ಕುಟುಂಬಗಳು ಮಸ್ತ್ಯ ಕ್ಷಾಮದಿಂದಾಗಿ ಸಾಲ ಮರು ಪಾವತಿ ಮಾಡಲಾಗದೆ ಕಂಗಾಲಾಗಿದ್ದಾರೆ. ಸ್ವ ಸಹಾಯ ಸಂಘಗಳು ಸಾಲ ವಸೂಲಾತಿಗಾಗಿ ತಮ್ಮ ಪ್ರತಿನಿಧಿಗಳ ಮೂಲಕ ಒತ್ತಡ ಹಾಕುವುದು ಮಾತ್ರವಲ್ಲ ಮಾನಸಿಕ ಕಿರುಕುಳ ನೀಡಿ ದೌರ್ಜನ್ಯ ನಡೆಸಿರುವುದಲ್ಲದೆ ಕೆಲವು ಮಹಿಳೆಯರು ಆತ್ಮಹತ್ಯೆಗೂ ಮುಂದಾಗಿರುವ ಘಟನೆಗಳೂ ನಡೆದಿರುವುದು ನಮ್ಮ ಗಮನಕ್ಕೆ ಬಂದಿದೆ ಎಂದು ಇಂದು ಮಂಗಳೂರಿನ ಕಸಬಾ ಬೆಂಗರೆಯಲ್ಲಿ ಸಾಲ ಸಂತ್ರಸ್ತ ಮೀನುಗಾರ ಕುಟುಂಬಗಳನ್ನು ಭೇಟಿ ಮಾಡಿ ಸಭೆ ನಡೆಸಿದ ಡಿವೈಎಫ್ಐ ಜಿಲ್ಲಾಧ್ಯಕ್ಷರಾದ ಬಿಕೆ ಇಮ್ತಿಯಾಜ್ ತಿಳಿಸಿದ್ದಾರೆ.
ಮೀನಿನ ಕ್ಷಾಮವನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ಸರಕಾರ ವಿಶೇಷ ಪ್ಯಾಕೇಜ್ ಘೋಷಿಸಿ ಮೀನುಗಾರ ಕುಟುಂಬಗಳು ಸ್ವಸಹಾಯ ಸಂಘಗಳಿಂದ ಪಡೆದಿರುವ ಸಾಲ ಮನ್ನಾ ಮಾಡಲು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ ಅವರ ಸಾಲ ವಸೂಲಾತಿಯ ಹೆಸರಿನಲ್ಲಿ ಕಿರುಕುಳ ನೀಡುವ ಹಣಕಾಸು ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಜರಗಿಸಬೇಕೆಂದು ಬಿಕೆ ಇಮ್ತಿಯಾಜ್ ಒತ್ತಾಯಿಸಿದರು. ಕಿರುಕುಳ ನೀಡುವ ಹಣಕಾಸು ಸಂಸ್ಥೆಗಳ ವಿರುದ್ಧ ಕ್ರಮಕೈಗೊಳ್ಳಲು ಜಿಲ್ಲಾಡಳಿತ ವಿಫಲವಾದರೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು
ಡಿವೈಎಫ್ಐ ನಗರ ಅಧ್ಯಕ್ಷರಾದ ಜಗದೀಶ್ ಬಜಾಲ್ ಮಾತನಾಡಿ ಸ್ವ ಸಹಾಯ ಸಂಘಗಳ ಮೂಲಕ ಸಾಲ ನೀಡಿರುವ ಹಣಕಾಸು ಸಂಸ್ಥೆಗಳು ರಿಸರ್ವ್ ಬ್ಯಾಂಕಿನ ನಿರ್ದ್ಗೇಶನಗಳನ್ನು ಉಲ್ಲಂಘನೆ ಮಾಡಿದೆ ಮತ್ತು ಸಾಲಗಾರ ಸಂತ್ರಸ್ತರಿಗೆ ಸರಿಯಾದ ಮಾಹಿತಿಯನ್ನು ನೀಡದೆ ವಂಚನೆ ಮಾಡುತ್ತಿದೆ ಎಂದು ಆರೋಪಿಸಿದರು.
ಡಿವೈಎಫ್ಐ ಜಿಲ್ಲಾ ಸಹ ಕಾರ್ಯದರ್ಶಿ ತಯ್ಯುಬ್ ಬೆಂಗ್ರೆ, ಸಿಪಿಎಂ ಬೆಂಗರೆ ಕಾರ್ಯದರ್ಶಿ ಎ ಬಿ ನೌಷಾದ್, ಗ್ರಾಮ ಸಮಿತಿ ಅಧ್ಯಕ್ಷರಾದ ಹನೀಫ್ ಬೆಂಗ್ರೆ, ಮುಖಂಡರಾದ ಜಮ್ಶೀರ್ ಬೆಂಗ್ರೆ, ಉಪಸ್ಥಿತರಿದ್ದರು.