image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಸಿದ್ದರಾಮಯ್ಯ ವಿರುದ್ಧ ಡಿಕೆಶಿ 'ಸ್ಟಿಂಗ್ ಆಪರೇಷನ್': ಹೆಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ

ಸಿದ್ದರಾಮಯ್ಯ ವಿರುದ್ಧ ಡಿಕೆಶಿ 'ಸ್ಟಿಂಗ್ ಆಪರೇಷನ್': ಹೆಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ

ಬೆಂಗಳೂರು: ಹಾಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನಡೆಸಿದ ವ್ಯವಸ್ಥಿತ ‘ಸ್ಟಿಂಗ್ ಆಪರೇಷನ್’ನಿಂದಾಗಿಯೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ಥಾನದಿಂದ ಕೆಳಗಿಳಿಯುವಂತಾಯಿತು ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಜೆಡಿಎಸ್ ಪಕ್ಷದ ಕೇಂದ್ರ ಕಚೇರಿ ಜೆ.ಪಿ. ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಡಿ. ದೇವರಾಜ ಅರಸು ಅವರಿಗಿಂತ ದೀರ್ಘಾವಧಿಗೆ ರಾಜ್ಯವಾಳಿದ ಹಾಗೂ ಅಹಿಂದ ವರ್ಗದ ಪ್ರಭಾವಿ ನಾಯಕರಾಗಿದ್ದ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ನಡೆಸಿಕೊಂಡ ರೀತಿ ಅತ್ಯಂತ ಅವಮಾನಕಾರಿಯಾಗಿದೆ ಎಂದು ಕುಮಾರಸ್ವಾಮಿ ದೂರಿದರು. ಸಂಪುಟ ಸಭೆಯಲ್ಲಿ ತಮ್ಮ ಸಚಿವರ ವಿರುದ್ಧವೇ ಸ್ಟಿಂಗ್ ಆಪರೇಷನ್ ನಡೆಯುತ್ತಿದೆ ಎಂದು ಡಿ.ಕೆ. ಶಿವಕುಮಾರ್ ನೀಡಿದ್ದ ಎಚ್ಚರಿಕೆಯ ಸುದ್ದಿಗೆ ಪ್ರತಿಕ್ರಿಯಿಸಿದ ಅವರು, ಹೈಕಮಾಂಡ್‌ಗೆ ಸ್ಟಿಂಗ್ ಆಪರೇಷನ್ ವಿಡಿಯೋ ತೋರಿಸಿ ಸಿದ್ದರಾಮಯ್ಯ ಅವರನ್ನು ರಾಜೀನಾಮೆ ನೀಡುವಂತೆ ಮಾಡಲಾಯಿತು ಎಂದು ವಾಗ್ದಾಳಿ ನಡೆಸಿದರು.

ಸಂಪುಟ ವಿಸ್ತರಣೆಯ ನೆಪದಲ್ಲಿ ದೆಹಲಿಗೆ ಕರೆಸಿಕೊಂಡು ಈ ವ್ಯವಸ್ಥಿತ ಸಂಚು ರೂಪಿಸಿ ಸಿದ್ದರಾಮಯ್ಯ ಅವರಿಂದ ರಾಜೀನಾಮೆ ಪಡೆಯಲಾಯಿತು. ಇದರ ಹಿಂದೆ ಒಂದು ಸುದ್ದಿವಾಹಿನಿ ಹಾಗೂ ಕಾಂಗ್ರೆಸ್ ಹೈಕಮಾಂಡ್ ಶಾಮೀಲಾಗಿತ್ತು ಎಂಬ ಮಾಹಿತಿ ತಮಗೆ ಕಾಂಗ್ರೆಸ್ ಪಕ್ಷದವರೇ ಹಂಚಿಕೊಂಡಿದ್ದಾರೆ ಎಂದರು.

ಅಲ್ಲದೆ, ರಮೇಶ್ ಜಾರಕಿಹೊಳಿ ಹಾಗೂ ಕೆ.ಎನ್. ರಾಜಣ್ಣ ಅವರ ವಿಚಾರದಲ್ಲೂ ಇಂತಹದ್ದೇ ಕೃತ್ಯಗಳನ್ನು ನಡೆಸಿ, ಈಗ ವಿರೋಧ ಪಕ್ಷಗಳ ಮೇಲೆ ಗೂಬೆ ಕೂರಿಸುವ ಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು. ಸಚಿವರ ಮೇಲೆ ಹಿಡಿತ ಸಾಧಿಸಲು ಹಾಗೂ ದೇವೇಗೌಡರ ಕುಟುಂಬವನ್ನು ಹಣಿಯಲು ಇದೇ ತಂತ್ರವನ್ನು ಬಳಸಲಾಗುತ್ತಿದೆ ಎಂದ ಅವರು, ಡಿಕೆಶಿ ಸ್ಟಿಂಗ್ ಆಪರೇಷನ್ ಮಾಡುವುದರಲ್ಲಿ ಮಾಸ್ಟರ್ ಎಂದು ಕಿಡಿಕಾರಿದರು. ಹಿಂದೆ ಸಂಪುಟ ಸಭೆಯಲ್ಲಿ ಅಭಿವೃದ್ಧಿ ವಿಷಯಗಳ ಬಗ್ಗೆ ಚರ್ಚೆ ನಡೆಯುತ್ತಿತ್ತು, ಆದರೆ ಈಗ ಹನಿಟ್ರ್ಯಾಪ್ ಮತ್ತು ಸ್ಟಿಂಗ್ ಆಪರೇಷನ್‌ಗಳ ಕುರಿತು ಚರ್ಚೆಯಾಗುತ್ತಿರುವುದು ರಾಜ್ಯಕ್ಕೆ ಒದಗಿರುವ ದುಸ್ಥಿತಿ ಎಂದು ಹೆಚ್.ಡಿ. ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.

Category
ಕರಾವಳಿ ತರಂಗಿಣಿ