ಮಂಗಳೂರು: ಮಂಗಳೂರು ದಕ್ಷಿಣ (203) ವಿಧಾನಸಭಾ ಕ್ಷೇತ್ರದಲ್ಲಿ ಇತ್ತೀಚೆಗೆ ಪ್ರಕಟಗೊಂಡ ಕರಡು ಮತದಾರರ ಪಟ್ಟಿಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ, ಐವನ್ ಡೆಸೋಜಾ ಅವರ ನೇತೃತ್ವದಲ್ಲಿ ಕಾಂಗ್ರೆಸ್ ನಿಯೋಗವು ಜಿಲ್ಲಾಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿಗಳಿಗೆ ದಾಖಲೆ ಸಹಿತ ಮನವಿ ಸಲ್ಲಿಸಿದೆ. ಕ್ಷೇತ್ರದಲ್ಲಿ ಮನೆಗಳು ಅಸ್ತಿತ್ವದಲ್ಲೂ ಇಲ್ಲದಿದ್ದರೂ ಹಾಗೂ ಸಂಬಂಧಪಟ್ಟ ಮತದಾರರು ಆ ಸ್ಥಳದಲ್ಲಿ ವಾಸವಾಗಿರದಿದ್ದರೂ, 2023-24ರಲ್ಲಿ ಮತ ಚಲಾಯಿಸಿದ್ದಾರೆ ಎಂಬ ಕಾರಣಕ್ಕೆ ಕರಡು ಪಟ್ಟಿಯಲ್ಲಿ ಹೆಸರುಗಳನ್ನು ಉಳಿಸಿಕೊಳ್ಳಲಾಗಿದೆ. ಈ ಹಿಂದೆ ಮನೆಗಳಿದ್ದ ಸ್ಥಳಗಳು ನೆಲಸಮವಾಗಿ ಆಟದ ಮೈದಾನಗಳಾಗಿ ಮಾರ್ಪಟ್ಟಿದ್ದರೂ, ಡೋರ್ ನಂಬರ್ ಇಲ್ಲದೆಯೇ ಹೆಸರುಗಳನ್ನು ಮುಂದುವರಿಸಲಾಗಿದೆ. ಅಲ್ಲದೆ, ಬೇರೆಡೆ ವಾಸವಿರುವ ಮತದಾರರು ಹೊಸ ಸ್ಥಳದಲ್ಲೂ ನೋಂದಾಯಿಸಿಕೊಂಡಿದ್ದು, ಎರಡೆರಡು ಕಡೆಗಳಲ್ಲಿ ಹೆಸರುಗಳನ್ನು ಉಳಿಸಿಕೊಳ್ಳಲಾಗಿದೆ. ಇದಕ್ಕೆ ಉದಾಹರಣೆಯಾಗಿ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 59ನೇ ವಾರ್ಡ್, ಜೆಪ್ಪು, ಭಾಗ ಸಂಖ್ಯೆ 167, ಪುಟ ಸಂಖ್ಯೆ 8ರಲ್ಲಿನ ಕ್ರಮ ಸಂಖ್ಯೆ 160 ರಿಂದ 167ರ ವರೆಗಿನ ಮತದಾರರ ವಿವರಗಳನ್ನು ಅಪರ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಯಿತು.
ಇದಲ್ಲದೆ, ಕ್ಷೇತ್ರದಲ್ಲಿ 1000ಕ್ಕೂ ಅಧಿಕ ಮಂದಿಗೆ ಈಗಾಗಲೇ ಫಾರ್ಮ್ ನಂ. 7 ನೀಡಲಾಗಿದ್ದು, ಬಿ.ಎಲ್.ಒ.ಗಳು ಏಕಪಕ್ಷೀಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ನಿಯೋಗವು ತಿಳಿಸಿದೆ. ಮುಖ್ಯವಾಗಿ ಅಲ್ಪಸಂಖ್ಯಾತರು ಹೆಚ್ಚಾಗಿ ವಾಸಿಸುವ ಪ್ರದೇಶಗಳಲ್ಲಿ ಅನಾವಶ್ಯಕವಾಗಿ ಬಿ.ಎಲ್.ಒ.ಗಳ ಮೂಲಕ ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕಲು ಕೆಲವರು ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಹೀಗಾಗಿ ಪ್ರತಿಯೊಂದು ಫಾರ್ಮ್ ನಂ. 7 ಅರ್ಜಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಿ, ಮತದಾರರು ಜೀವಂತವಾಗಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಂಡು ಹಾಗೂ ಬಿಎಲ್‌ಎ2ಗಳ (BLA2) ಗಮನಕ್ಕೆ ತಂದ ನಂತರವೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಯಿತು. ನೈಜ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಹಾಗೂ ಅಕ್ರಮವಾಗಿ ಹೊಸ ಹೆಸರುಗಳು ಸೇರ್ಪಡೆಯಾಗದಂತೆ ತಡೆಯಬೇಕು ಎಂದು ಐವನ್ ಡೆಸೋಜಾ ಮನವಿ ಮಾಡಿದ್ದು, ಅಪರ ಜಿಲ್ಲಾಧಿಕಾರಿಯವರು ಈ ಕುರಿತು ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಮಾಜಿ ಮೇಯರ್ ಶಶಿಧರ್, ಮಾಜಿ ಕಾರ್ಪೊರೇಟರ್‌ಗಳಾದ ನವೀನ್ ಡಿಸೋಜಾ, ಪ್ರವೀಣ್ ಚಂದ್ರ ಆಳ್ವಾ, ಪ್ರಕಾಶ್ ಸಾಲಿಯಾನ್, ಅಶ್ರಫ್ ಬಜಾಲ್, ಸತೀಶ್ ಪೆಂಗಲ್, ಭಾಸ್ಕರ್ ರಾವ್, ಹಾಗೂ ಎಸ್‌ಐಆರ್ (SIR) ಕಾಂಗ್ರೆಸ್ ಸಂಯೋಜಕರಾದ ಅಮಿತಾ ಅಶ್ವಿನ್, ಮಂಜುಳಾ ನಾಯಕ್, ರಫೀಕ್ ಇಕೆ, ಪ್ರಿಯಾ ಪ್ರಕಾಶ್ ಪಾತ್ರಾವ್, ದುರ್ಗಾ ಪ್ರಸಾದ್, ಹ್ಯಾರಿ ಮಣ್ಣಗುಡ್ಡ, ವಹಾಬ್ ಕುದ್ರೋಳಿ, ಶಾಂತಲ ಗಟ್ಟಿ, ಯೋಗೀಶ್ ನಾಯಕ್, ನೀತು ಡಿಸೋಜಾ, ಹರ್ಬರ್ಟ್ ಡಿಸೋಜಾ, ದಿನೇಶ್ ರಾವ್, ಬಶೀರ್, ಸಮರ್ಥ್ ಭಟ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.