image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

'ಸತ್ಯಾಗ್ರಹ' ಡಿಜಿಟಲ್ ವೇದಿಕೆ ಚಾಲನೆ: ಪ್ರತಿಭಟನೆಗಳ ಒಗ್ಗೂಡಿಸಲು ರಾಹುಲ್ ಗಾಂಧಿ ಕರೆ

'ಸತ್ಯಾಗ್ರಹ' ಡಿಜಿಟಲ್ ವೇದಿಕೆ ಚಾಲನೆ: ಪ್ರತಿಭಟನೆಗಳ ಒಗ್ಗೂಡಿಸಲು ರಾಹುಲ್ ಗಾಂಧಿ ಕರೆ

ನವದೆಹಲಿ: ದೇಶಾದ್ಯಂತ ವಿವಿಧ ಹಕ್ಕುಗಳಿಗಾಗಿ ಪ್ರತ್ಯೇಕವಾಗಿ ನಡೆಯುತ್ತಿರುವ ಜನಪರ ಹೋರಾಟಗಳನ್ನು ಒಂದೇ ವೇದಿಕೆಯಡಿ ತರಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ 'ಸತ್ಯಾಗ್ರಹ' ಎಂಬ ನೂತನ ಡಿಜಿಟಲ್ ಉಪಕ್ರಮವನ್ನು ಘೋಷಿಸಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ ದೇಶವ್ಯಾಪಿ ಸಾರ್ವಜನಿಕ ಧ್ವನಿಯನ್ನು ಒಗ್ಗೂಡಿಸುವ ಹಾಗೂ ವಿಭಿನ್ನ ಪ್ರತಿಭಟನೆಗಳಿಗೆ ರಾಷ್ಟ್ರೀಯ ವೇದಿಕೆ ಕಲ್ಪಿಸುವ ಉದ್ದೇಶದಿಂದ ಈ ಯೋಜನೆಗೆ ಚಾಲನೆ ನೀಡಲಾಗಿದೆ.

ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿರುವ ರಾಹುಲ್ ಗಾಂಧಿ, ದೇಶದಲ್ಲಿ ವಿದ್ಯಾರ್ಥಿಗಳು, ರೈತರು, ಆಶಾ ಕಾರ್ಯಕರ್ತೆಯರು ಹಾಗೂ ಬುಡಕಟ್ಟು ಜನಾಂಗದವರು ಸೇರಿದಂತೆ ವಿಭಿನ್ನ ವರ್ಗಗಳು ಪ್ರತ್ಯೇಕವಾಗಿ ಹೋರಾಟ ನಡೆಸುತ್ತಿದ್ದು, ಏಕಾಂಗಿತನ ಅನುಭವಿಸುತ್ತಿವೆ ಎಂದಿದ್ದಾರೆ. ಹೀಗೆ ಹರಿದುಹಂಚಿ ಹೋಗಿರುವ ಚಳವಳಿಗಳನ್ನು ಒಂದೆಡೆ ಸೇರಿಸಿ, ಸರ್ಕಾರವನ್ನು ತಲೆಬಾಗಿಸುವ ಸಾಮೂಹಿಕ ಶಕ್ತಿಯನ್ನಾಗಿ ಪರಿವರ್ತಿಸಲು 'ಸತ್ಯಾಗ್ರಹ' ವೇದಿಕೆ ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಈ ನೂತನ ಡಿಜಿಟಲ್ ಉಪಕ್ರಮದ ಅಡಿಯಲ್ಲಿ ಸಾರ್ವಜನಿಕರು ತಾವು ಎದುರಿಸುತ್ತಿರುವ ಅನ್ಯಾಯ ಮತ್ತು ಹೋರಾಟದ ಕಥೆಗಳನ್ನು ಹಂಚಿಕೊಳ್ಳಲು ಡಿಜಿಟಲ್ ವೇದಿಕೆ ನಿರ್ಮಿಸಲಾಗಿದೆ. ಸಲ್ಲಿಕೆಯಾಗುವ ಮಾಹಿತಿಯನ್ನು ಸಂವಾದಾತ್ಮಕ ನಕ್ಷೆಯಲ್ಲಿ (Interactive Map) ಪ್ರದರ್ಶಿಸಲಾಗುತ್ತದೆ. ಇದರಿಂದ ಒಂದೇ ರೀತಿಯ ಸಮಸ್ಯೆಗಳ ವಿರುದ್ಧ ಹೋರಾಡುತ್ತಿರುವ ದೇಶದ ಇತರ ಭಾಗಗಳ ಜನರು ಪರಸ್ಪರ ಸಂಪರ್ಕ ಸಾಧಿಸಲು ನೆರವಾಗಲಿದೆ. ಸಾರ್ವಜನಿಕರು ಪ್ರತಿಭಟನೆಗಾಗಿ ದೆಹಲಿಗೆ ಬರುವ ಅಗತ್ಯವಿಲ್ಲದೇ, ಕೇವಲ ಎರಡು ನಿಮಿಷಗಳಲ್ಲಿ ತಮ್ಮ ಚಳವಳಿಯ ಮಾಹಿತಿಯನ್ನು ಈ ವೆಬ್‌ಸೈಟ್‌ನಲ್ಲಿ ದಾಖಲಿಸಬಹುದಾಗಿದೆ.

ಸತ್ಯವೇ ಅತ್ಯಂತ ದೊಡ್ಡ ಅಸ್ತ್ರ ಎಂದು ಮಹಾತ್ಮಾ ಗಾಂಧೀಜಿ ಕಲಿಸಿದ್ದಾರೆ, ಆದರೆ ಆ ಸತ್ಯದೊಂದಿಗೆ ಒಗ್ಗಟ್ಟಿನಲ್ಲಿ ನಿಲ್ಲುವುದು ಅದಕ್ಕಿಂತಲೂ ದೊಡ್ಡ ಅಸ್ತ್ರವಾಗಿದೆ ಎಂದು ರಾಹುಲ್ ಗಾಂಧಿ ಪ್ರತಿಪಾದಿಸಿದ್ದಾರೆ. ವಿದ್ಯಾರ್ಥಿಗಳ ಶುಲ್ಕ ಹೆಚ್ಚಳ, ರೈತರ ಭೂಮಿ-ಬೆಳೆ ಸಮಸ್ಯೆಗಳು, ಜಲ-ಜಂಗಲ್-ಜಮೀನ್ ಮೇಲಿನ ಬುಡಕಟ್ಟು ಜನರ ಹಕ್ಕುಗಳು ಹಾಗೂ ದಲಿತರು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯಗಳ ವಿರುದ್ಧದ ತಳಮಟ್ಟದ ಚಳವಳಿಗಳಿಗೆ ರಾಷ್ಟ್ರೀಯ ಮಟ್ಟದಲ್ಲಿ ಬಲವಾದ ಧ್ವನಿ ನೀಡುವುದು ಈ 'ಸತ್ಯಾಗ್ರಹ' ವೇದಿಕೆಯ ಮುಖ್ಯ ಉದ್ದೇಶವಾಗಿದೆ.

Category
ಕರಾವಳಿ ತರಂಗಿಣಿ