ಮಂಗಳೂರು:ಕರಾವಳಿ ಜನರ ಕಣ್ಣಿಗೆ ಮಣ್ಣೆರಚಿ, ಆರ್ಥಿಕವಾಗಿ ದಿವಾಳಿಯಾಗಿರುವ ರಾಜ್ಯ ಸರ್ಕಾರವು ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯ ಮೂಲಕ 'ಅಂಗೈಯಲ್ಲಿ ಆಕಾಶ ತೋರಿಸುವ' ಕೆಲಸ ಮಾಡಿದೆ ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮಂಗಳೂರಿನಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,
ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆಯುವ ಹಿಂದಿನ ದಿನವೇ ಅಂದರೆ ಸೆಪ್ಟೆಂಬರ್ 17ರಂದು ಹಣಕಾಸು ಇಲಾಖೆಯು ಅಧಿಕೃತ ಪತ್ರ ಬರೆದು ರಾಜ್ಯದ ದಯನೀಯ ಆರ್ಥಿಕ ಸ್ಥಿತಿಯನ್ನು ಬಿಚ್ಚಿಟ್ಟಿತ್ತು. ಈಗಾಗಲೇ ಬಜೆಟ್‌ನಲ್ಲಿ ಘೋಷಿಸಿದ ಕಾಮಗಾರಿಗಳಿಗೇ ಹಣವಿಲ್ಲದೇ 2 ಲಕ್ಷ ಕೋಟಿ ರೂಪಾಯಿಗೂ ಹೆಚ್ಚಿನ ಕಾಮಗಾರಿಗಳು ಬಾಕಿ ಉಳಿದಿವೆ. ಪಿಡಬ್ಲ್ಯೂಡಿ, ನಗರಾಭಿವೃದ್ಧಿ, ಜಲಸಂಪನ್ಮೂಲ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಗುತ್ತಿಗೆದಾರರಿಗೆ ಸುಮಾರು 36,000 ಕೋಟಿ ರೂಪಾಯಿ ಬಾಕಿ ಪಾವತಿಸಬೇಕಿದೆ. ಹೊಸ ಘೋಷಣೆಗಳನ್ನು ಅನುಷ್ಠಾನಗೊಳಿಸಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿಗಳ ಅಧೀನದಲ್ಲೇ ಇರುವ ಹಣಕಾಸು ಇಲಾಖೆ ಸ್ಪಷ್ಟಪಡಿಸಿದ್ದರೂ, ಸಂಪುಟ ಸಭೆಯಲ್ಲಿ 30 ರಿಂದ 32 ಸಾವಿರ ಕೋಟಿ ರೂಪಾಯಿ ಅನುದಾನದ ನಿರ್ಣಯ ಕೈಗೊಂಡು ಜನರನ್ನು ಮರುಳು ಮಾಡಲಾಗಿದೆ.
ಈ ಸತ್ಯ ಹೊರಬಿದ್ದ ತಕ್ಷಣ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ಪತ್ರ ಸೋರಿಕೆ ಮಾಡಿದ ಅಧಿಕಾರಿಯ ಮೇಲೆ ಕ್ರಮ ಕೈಗೊಳ್ಳುವುದಾಗಿ ಹೇಳಿರುವುದು, ಹಣಕಾಸು ಇಲಾಖೆಯ ಪತ್ರ ಸತ್ಯ ಎಂಬುದನ್ನು ಅವರೇ ಒಪ್ಪಿಕೊಂಡಂತಾಗಿದೆ ಎಂದು ವ್ಯಂಗ್ಯವಾಡಿದರು.
ಸ್ವಾತಂತ್ರ್ಯ ಬಂದು 78-79 ವರ್ಷಗಳಲ್ಲಿ ವಿವಿಧ ಸರ್ಕಾರಗಳ ಅವಧಿಯಲ್ಲಿ ರಾಜ್ಯದ ಒಟ್ಟು ಸಾಲ 2.25 ಲಕ್ಷ ಕೋಟಿ ರೂಪಾಯಿ ಇತ್ತು. ಆದರೆ, ಸಿದ್ದರಾಮಯ್ಯನವರ ಆಡಳಿತಾವಧಿಯಲ್ಲಿ (2013-18 ಮತ್ತು 2023 ರಿಂದ ಇಂದಿನವರೆಗೆ) ಬರೋಬ್ಬರಿ 6 ಲಕ್ಷ ಕೋಟಿ ರೂಪಾಯಿ ಹೆಚ್ಚುವರಿ ಸಾಲ ಮಾಡಲಾಗಿದ್ದು, ಪ್ರಸ್ತುತ ರಾಜ್ಯದ ಒಟ್ಟು ಸಾಲ 8.25 ಲಕ್ಷ ಕೋಟಿ ರೂಪಾಯಿಗೆ ತಲುಪಿದೆ. ಇದರಿಂದಾಗಿ ರಾಜ್ಯದ ಪ್ರತಿಯೊಬ್ಬ ಪ್ರಜೆಯ ಮೇಲಿದ್ದ 25,000 ದಿಂದ 30,000 ರೂಪಾಯಿ ಸಾಲದ ಹೊರೆ, ಇಂದು 1.5 ದಿಂದ 2 ಲಕ್ಷ ರೂಪಾಯಿಗೆ ಏರಿಕೆಯಾಗಿದೆ. ಇಷ್ಟೆಲ್ಲಾ ಸಾಲ ಮಾಡಿ, ಬೆಲೆ ಏರಿಕೆಯ ಬಿಸಿ ತಟ್ಟಿಸಿದರೂ ಅಭಿವೃದ್ಧಿ ಕಾಮಗಾರಿಗಳಿಗೆ ಹಣ ಸಿಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೀನುಗಾರರಿಗಾಗಿ ಬಜೆಟ್‌ನಲ್ಲಿ ಘೋಷಿಸಿದ್ದ 'ಸೀ ಆಂಬ್ಯುಲೆನ್ಸ್' ಯೋಜನೆ ಇಂದಿಗೂ ಅನುಷ್ಠಾನಗೊಂಡಿಲ್ಲ. ಪಕ್ಕದ ಗೋವಾ ರಾಜ್ಯದಲ್ಲಿ ಡ್ರೆಡ್ಜಿಂಗ್ ಯಂತ್ರಗಳಿದ್ದರೆ ನಮ್ಮಲ್ಲ ಇಲ್ಲವಾಗಿದೆ. ಗೃಹಲಕ್ಷ್ಮಿ ಯೋಜನೆಯಲ್ಲಿ ಪರಿಷ್ಕರಣೆಯ ನೆಪವೊಡ್ಡಿ ಕಳೆದ 5 ತಿಂಗಳಿಂದ 12,500 ಕೋಟಿ ರೂಪಾಯಿಗಳನ್ನು ಬಾಕಿ ಉಳಿಸಿಕೊಳ್ಳಲಾಗಿದ್ದು, ಹಣ ಉಳಿಸುವ ತಂತ್ರ ಅನುಸರಿಸಲಾಗುತ್ತಿದೆ. ಸಾರಿಗೆ ನಿಗಮಗಳು 8,000 ಕೋಟಿ ರೂಪಾಯಿ ನಷ್ಟದಲ್ಲಿವೆ ಎಂದು ಸಚಿವರೇ ವಿಧಾನಸೌಧದಲ್ಲಿ ಒಪ್ಪಿಕೊಂಡಿದ್ದಾರೆ. ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ-2 ರಡಿಯಲ್ಲಿ 200 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗಳಿಗೆ ವೆಲೆನ್ಸಿಯಾ ಸೇರಿದಂತೆ ವಿವಿಧೆಡೆ ಗುದ್ದಲಿ ಪೂಜೆ ನೆರವೇರಿಸಿದ್ದರೂ ಒಂದೇ ಒಂದು ರಸ್ತೆ ಅಥವಾ ಅಭಿವೃದ್ಧಿ ಕೆಲಸ ಪ್ರಗತಿಯಲ್ಲಿಲ್ಲ ಎಂದು ದೂರಿದರು.
ಮಂಗಳೂರು ಮಹಾನಗರ ಪಾಲಿಕೆಯ ಪ್ರಸ್ತುತ ಸ್ಥಿತಿಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಶಾಸಕರು, ಸ್ಥಳೀಯ ಸಂಸ್ಥೆಗಳು, ಗ್ರಾಮ ಪಂಚಾಯತ್ ಹಾಗೂ ಬಿಬಿಎಂಪಿಗಳಿಗೆ ಚುನಾವಣೆ ನಡೆಸದ ಕಾರಣ 15ನೇ ಮತ್ತು 16ನೇ ಹಣಕಾಸು ಆಯೋಗದಿಂದ ಬರಬೇಕಿದ್ದ ವರ್ಷಕ್ಕೆ 25-30 ಕೋಟಿ ರೂಪಾಯಿ ಅನುದಾನ ಬಂದಿಲ್ಲ. ಇದರಿಂದ ಇಡೀ ರಾಜ್ಯಕ್ಕೆ ಬರುವ ಸುಮಾರು 1 ಲಕ್ಷ ಕೋಟಿ ರೂಪಾಯಿ ಕೇಂದ್ರ ಅನುದಾನ ನಿಂತುಹೋಗಿದೆ. ಬಿಜೆಪಿ ಆಡಳಿತದಲ್ಲಿದ್ದಾಗ ಪಾಲಿಕೆಗೆ ಪ್ರತಿವರ್ಷ 20 ರಿಂದ 25 ಕೋಟಿ ರೂಪಾಯಿ ಎಸ್‌ಎಫ್‌ಸಿ ವಿಶೇಷ ಅನುದಾನ ಸಿಗುತ್ತಿತ್ತು, ಆದರೆ ಕಳೆದ ಮೂರೂವರೆ ವರ್ಷಗಳಲ್ಲಿ ಒಂದೇ ಒಂದು ರೂಪಾಯಿ ಬಂದಿಲ್ಲ. ಇಂದಿರಾ ಕ್ಯಾಂಟಿನ್ ನಿರ್ವಹಣೆಗೆ ರಾಜ್ಯ ಸರ್ಕಾರ ನೀಡಬೇಕಿದ್ದ ಶೇ. 70ರಷ್ಟು ಪಾಲು ನೀಡದೆ, ಶೇ. 100ರಷ್ಟು ಹೊರೆಯನ್ನು ಪಾಲಿಕೆಯ ಹೆಗಲಿಗೇರಿಸಲಾಗಿದೆ. ಹೀಗಾಗಿ ಇದನ್ನು 'ಮಂಗಳೂರು ಮಹಾನಗರ ಪಾಲಿಕೆ ಕ್ಯಾಂಟಿನ್' ಎಂದು ಹೆಸರು ಬದಲಾಯಿಸುವುದೇ ಸೂಕ್ತ ಎಂದು ಕುಚೋದ್ಯ ಮಾಡಿದರು.
ಎರಡು ದಶಕಗಳ ಹಿಂದೆ ನಗರದ ನೀರು ಸರಬರಾಜು ಮತ್ತು ಒಳಚರಂಡಿ ಸುಧಾರಣೆಗೆ ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ (ADB) ನಿಂದ ಪಡೆದಿದ್ದ 380 ಕೋಟಿ ರೂಪಾಯಿ ಸಾಲವು, ಬಡ್ಡಿ ಸಮೇತ ಇಂದು 1,375.17 ಕೋಟಿ ರೂಪಾಯಿಗೆ ತಲುಪಿದ್ದು, ಬ್ಯಾಂಕ್‌ನಿಂದ ನೋಟೀಸ್ ಬರುವಂತಾಗಿದೆ. ಪಾಲಿಕೆಯಲ್ಲಿ ಗುತ್ತಿಗೆದಾರರಿಗೆ 300 ಕೋಟಿ ರೂಪಾಯಿಗೂ ಹೆಚ್ಚು ಬಾಕಿ ಸೇರಿ ಒಟ್ಟು ಎರಡೂವರೆ ಸಾವಿರ ಕೋಟಿ ರೂಪಾಯಿ ಸಾಲದ ಸುಳಿಯಲ್ಲಿ ಪಾಲಿಕೆ ಸಿಲುಕಿದೆ. ಪರಿಸ್ಥಿತಿ ಹೀಗಿರುವಾಗ, ಕಾಂಗ್ರೆಸ್ ಸರ್ಕಾರ 'ಭಾರತ ಜೋಡೋ' ಯೋಜನೆಯಡಿ 60 ವಾರ್ಡ್‌ಗಳಿಗೆ ತಲಾ 10 ಲಕ್ಷ ರೂಪಾಯಿಯಂತೆ 6 ಕೋಟಿ ರೂಪಾಯಿ ವೆಚ್ಚ ಮಾಡಲು ಪಾಲಿಕೆಯನ್ನೇ ಒತ್ತಾಯಿಸುತ್ತಿರುವುದು ಅಹಂಕಾರದ ಪರಮಾವಧಿ. ಕ್ರಾಮ್ಟನ್ ಗ್ರೀವ್ಸ್ ಕಂಪನಿಯೊಂದಿಗಿನ ಒಪ್ಪಂದದ ಎಡವಟ್ಟಿನಿಂದಾಗಿ ನಗರದಲ್ಲಿ ಹಾಳಾದ ಬೀದಿ ದೀಪಗಳನ್ನು ಬದಲಾಯಿಸಲೂ ಪಾಲಿಕೆಗೆ ಸಾಧ್ಯವಾಗುತ್ತಿಲ್ಲ ಎಂದು ಆಡಳಿತ ವ್ಯವಸ್ಥೆಯ ವಿರುದ್ಧ ಕೆಂಡಕಾರಿದರು.
ಜಿಲ್ಲೆಯ ಸರ್ಕಾರಿ ಆರೋಗ್ಯ ವ್ಯವಸ್ಥೆಯೂ ಕುಸಿದುಬಿದ್ದಿದ್ದು, ವೆನ್ಲಾಕ್ ಆಸ್ಪತ್ರೆಯಲ್ಲಿ ಸಾಮಾನ್ಯ ಹಾಸಿಗೆಯೂ (Normal Bed) ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಎಂಆರ್‌ಪಿಎಲ್ ಮತ್ತು ಕೇಂದ್ರ ಸರ್ಕಾರದ ಅನುದಾನದಲ್ಲಿ ನಿರ್ಮಿಸಲಾದ ಕಟ್ಟಡಗಳು ಸರಿಯಾದ ಸಮಯಕ್ಕೆ ಸಾರ್ವಜನಿಕ ಸೇವೆಗೆ ಲಭ್ಯವಾಗುತ್ತಿಲ್ಲ. ಕೇಂದ್ರ ಸರ್ಕಾರ ಶೇ. 60ರಷ್ಟು ಆರೋಗ್ಯ ಅನುದಾನ ನೀಡುತ್ತಿದ್ದರೂ ರಾಜ್ಯ ಸರ್ಕಾರ ಅದನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ಈ ಎಲ್ಲಾ ವೈಫಲ್ಯಗಳನ್ನು ಮುಚ್ಚಿಹಾಕಲು ಸರ್ಕಾರ ಸುಳ್ಳು ಭರವಸೆಗಳನ್ನು ನೀಡುತ್ತಿದೆ. ಶಟಲ್ ಬ್ಯಾಡ್ಮಿಂಟನ್ ಕೋರ್ಟ್, ಈಜುಕೊಳ, ಕದ್ರಿ ಪಾರ್ಕ್ ಅಭಿವೃದ್ಧಿ, ಜರ್ಮನ್ ತಂತ್ರಜ್ಞಾನ ಯೋಜನೆ, ಐಟಿಐ ಮೇಲ್ದರ್ಜೆಗೇರಿಸುವಿಕೆ ಸೇರಿದಂತೆ ಇಂದು ಉದ್ಘಾಟನೆಯಾಗುತ್ತಿರುವ ಎಲ್ಲಾ ಯೋಜನೆಗಳಿಗೂ ಬಿಜೆಪಿ ಸರ್ಕಾರದ ಅವಧಿಯಲ್ಲೇ ಭೂಮಿಪೂಜೆ ಮತ್ತು ಅನುದಾನ ಮಂಜೂರಾಗಿತ್ತು. ಪ್ರಸ್ತುತ ಕಾಂಗ್ರೆಸ್ ಸರ್ಕಾರ ಮೂರೂವರೆ ವರ್ಷದಲ್ಲಿ ತಂದ ಒಂದೇ ಒಂದು ಹೊಸ ಯೋಜನೆಯನ್ನು ತೋರಿಸಲಿ ಎಂದು ಸವಾಲೆಸೆದ ವೇದವ್ಯಾಸ ಕಾಮತ್, ಮುಂಬರುವ ಅಧಿವೇಶನದಲ್ಲಿ ಸರ್ಕಾರದ ಈ ಜನವಿರೋಧಿ ಧೋರಣೆಯನ್ನು ಖಂಡಿಸಿ ಸದನದ ಒಳಗೆ ಮತ್ತು ಹೊರಗೆ ಉಗ್ರ ಹೋರಾಟ ರೂಪಿಸುವುದಾಗಿ ಎಚ್ಚರಿಸಿದರು.