image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ತುಳು ಭಾಷೆಗೆ ಅಧಿಕೃತ ಸ್ಥಾನಮಾನ ಹಾಗೂ ಜನಪರ ಯೋಜನೆಗಳು ಶೀಘ್ರ ಅನುಷ್ಠಾನ: ಆರೋಗ್ಯ ಸಚಿವ ಯು.ಟಿ. ಖಾದರ್

ತುಳು ಭಾಷೆಗೆ ಅಧಿಕೃತ ಸ್ಥಾನಮಾನ ಹಾಗೂ ಜನಪರ ಯೋಜನೆಗಳು ಶೀಘ್ರ ಅನುಷ್ಠಾನ: ಆರೋಗ್ಯ ಸಚಿವ ಯು.ಟಿ. ಖಾದರ್

ಮಂಗಳೂರು: ತುಳು ಭಾಷೆಗೆ ರಾಜ್ಯದ ಅಧಿಕೃತ ಭಾಷೆಯ ಸ್ಥಾನಮಾನ ಕಲ್ಪಿಸುವುದು ಸೇರಿದಂತೆ ಇತ್ತೀಚಿನ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡಿರುವ ಪ್ರಮುಖ ನಿರ್ಧಾರಗಳನ್ನು ಆದಷ್ಟು ಶೀಘ್ರವಾಗಿ ಅನುಷ್ಠಾನಗೊಳಿಸಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಸ್ಪಷ್ಟಪಡಿಸಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಿವಿಧ ಅಭಿವೃದ್ಧಿ ಕಾರ್ಯಗಳು ಮತ್ತು ನೀತಿ ನಿರೂಪಣೆಗಳ ಕುರಿತು ಪ್ರಮುಖ ವಿವರಗಳನ್ನು ಹಂಚಿಕೊಂಡಿದ್ದಾರೆ.

ಕರಾವಳಿಯ ಬಹುದಿನಗಳ ಬೇಡಿಕೆಯಾದ ತುಳು ಭಾಷೆಗೆ ಅಧಿಕೃತ ಸ್ಥಾನಮಾನ ನೀಡುವ ಸಂಬಂಧ ಈಗಾಗಲೇ ಸಚಿವ ಸಂಪುಟದಲ್ಲಿ ಸಕಾರಾತ್ಮಕ ಚರ್ಚೆ ನಡೆದಿದೆ. ಈ ಕುರಿತು ನಾಲ್ಕು ತಿಂಗಳ ಕಾಲಾವಕಾಶದೊಂದಿಗೆ ಪ್ರಸ್ತಾವನೆ ಸಿದ್ಧಪಡಿಸಲಾಗಿದ್ದು, ಸಾಹಿತಿಗಳು, ಕಲಾವಿಗಳು, ಮಾಧ್ಯಮದವರು ಹಾಗೂ ವಿವಿಧ ಸಂಘ-ಸಂಸ್ಥೆಗಳ ನಿರಂತರ ಹೋರಾಟಕ್ಕೆ ಸ್ಪಂದಿಸಿ ಸರ್ಕಾರದ ಮಟ್ಟದಲ್ಲಿ ಅಗತ್ಯ ಕಾನೂನು ಪ್ರಕ್ರಿಯೆಗಳು ಹಾಗೂ ನೀತಿ ರೂಪಿಸುವ ಕೆಲಸಗಳು ಮುಂದುರಿತಿವೆ. ಈ ಕುರಿತು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಸಿ, ತ್ವರಿತಗತಿಯಲ್ಲಿ ಕ್ರಿಯಾ ಯೋಜನೆ ರೂಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.

ಮೂಡಾ (MUDA) ಹಾಗೂ ನಗರ ಯೋಜನೆ ವ್ಯಾಪ್ತಿಗೆ ಸಂಬಂಧಿಸಿದಂತೆ ಸಾರ್ವಜನಿಕರು ಎದುರಿಸುತ್ತಿದ್ದ ತೊಂದರೆಗಳನ್ನು ಮನಗಂಡು ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. ಬಿ-ಖಾತೆ ಆಸ್ತಿ ಹೊಂದಿರುವವರಿಗೆ ನಿರ್ದಿಷ್ಟ ವಿನಾಯಿತಿಯಡಿ ಸಿಂಗಲ್ ಪ್ಲಾಟ್ ಲೇಔಟ್ ಪ್ಲಾನ್ ಅನುಮೋದನೆ ಅಧಿಕಾರವನ್ನು ಸ್ಥಳೀಯ ಸಂಸ್ಥೆಗಳಾದ ಗ್ರಾಮ ಪಂಚಾಯತ್ ಪಿಡಿಒಗಳು, ಟೌನ್ ಮುನ್ಸಿಪಾಲಿಟಿ ಹಾಗೂ ಸಿಟಿ ಮುನ್ಸಿಪಾಲಿಟಿ ಮುಖ್ಯಸ್ಥರಿಗೆ ವಿಕೇಂದ್ರೀಕರಿಸಲಾಗಿದೆ. ಇದರಿಂದ ಸಾರ್ವಜನಿಕರು ಸಣ್ಣಪುಟ್ಟ ಕೆಲಸಗಳಿಗೂ ನಗರಾಭಿವೃದ್ಧಿ ಪ್ರಾಧಿಕಾರಗಳಿಗೆ ಅಲೆಯುವುದು ತಪ್ಪಲಿದೆ ಎಂದರು.

ಮಂಗಳೂರಿನ ಸರ್ಕಾರಿ ಆಸ್ಪತ್ರೆಗಳಿಗೆ ರೋಗಿಗಳ ಒಳಹರಿವು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಗೂ ಜಿಲ್ಲಾ ಮಟ್ಟದ ಆಸ್ಪತ್ರೆಗಳಿಗೆ ಬರುವುದನ್ನು ತಪ್ಪಿಸಲು ತಾಲೂಕು ಆಸ್ಪತ್ರೆಗಳನ್ನು ಬಲಪಡಿಸಲಾಗುತ್ತಿದೆ. ಮಡಿಕೇರಿ, ಮೂಡುಬಿದ್ರೆ ಸೇರಿದಂತೆ ವಿವಿಧ ತಾಲೂಕು ಆಸ್ಪತ್ರೆಗಳಲ್ಲಿಯೂ ಅಗತ್ಯ ವೈದ್ಯಕೀಯ ಸೌಲಭ್ಯಗಳು ಹಾಗೂ ಐಸಿಯು (ICU) ವ್ಯವಸ್ಥೆಯನ್ನು ಕಲ್ಪಿಸುವ ಮೂಲಕ ರೋಗಿಗಳಿಗೆ ಸ್ಥಳೀಯ ಮಟ್ಟದಲ್ಲೇ ಉತ್ತಮ ಚಿಕಿತ್ಸೆ ಸಿಗುವಂತೆ ಕ್ರಮ ವಹಿಸಲಾಗುತ್ತಿದೆ ಎಂದರು.

ಅತಿಯಾದ ಉಪ್ಪು ಮತ್ತು ಸಕ್ಕರೆ ಬಳಕೆಯಿಂದ ಬರುವ ಎನ್‌ಸಿಡಿ (NCD) ಕಾಯಿಲೆಗಳ ಕುರಿತು ಸಾರ್ವಜನಿಕರಲ್ಲಿ ಆರೋಗ್ಯ ಜಾಗೃತಿ ಮೂಡಿಸುವ ಅವಶ್ಯಕತೆಯಿದ್ದು, ದೈನಂದಿನ ಆಹಾರದಲ್ಲಿ ಸೋಡಿಯಂ ಅಂಶದ ಮಿತಿಯ ಬಗ್ಗೆ ಗಮನ ಹರಿಸುವಂತೆ ಸಚಿವರು ಸಲಹೆ ನೀಡಿದರು.

Category
ಕರಾವಳಿ ತರಂಗಿಣಿ