image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಸಾಂವಿಧಾನಿಕ ಸಂಸ್ಥೆಗಳ ತೇಜೋವಧೆ ಪ್ರಜಾಪ್ರಭುತ್ವಕ್ಕೆ ಕಂಟಕ: ಸಂಸದ ಕ್ಯಾ. ಬ್ರಿಜೇಶ್ ಚೌಟ

ಸಾಂವಿಧಾನಿಕ ಸಂಸ್ಥೆಗಳ ತೇಜೋವಧೆ ಪ್ರಜಾಪ್ರಭುತ್ವಕ್ಕೆ ಕಂಟಕ: ಸಂಸದ ಕ್ಯಾ. ಬ್ರಿಜೇಶ್ ಚೌಟ

ನವದೆಹಲಿ: ಸಾಲು ಸಾಲು ಚುನಾವಣಾ ಸೋಲುಗಳನ್ನು ಜೀರ್ಣಿಸಿಕೊಳ್ಳಲಾಗದೇ ಚುನಾವಣಾ ಆಯೋಗ ಸೇರಿದಂತೆ ದೇಶದ ಸಾಂವಿಧಾನಿಕ ಸಂಸ್ಥೆಗಳನ್ನು ತೇಜೋವಧೆ ಮಾಡುವುದನ್ನೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರಾಜಕೀಯ ಅಸ್ತ್ರವನ್ನಾಗಿ ಮಾಡಿಕೊಂಡಿದ್ದು, ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ತೀವ್ರ ಧಕ್ಕೆ ತರಲಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ವಾಗ್ದಾಳಿ ನಡೆಸಿದ್ದಾರೆ. ಚುನಾವಣಾ ಆಯೋಗ ನೀಡಿರುವ ಇತ್ತೀಚಿನ ಸ್ಪಷ್ಟನೆಯು ಕಾಂಗ್ರೆಸ್ ಪಕ್ಷದ ಪಿತೂರಿಯನ್ನು ಮತ್ತು ರಾಹುಲ್ ಗಾಂಧಿಯವರ ಬೇಜವಾಬ್ದಾರಿ ಧೋರಣೆಯನ್ನು ದೇಶದ ಮುಂದೆ ಮತ್ತೊಮ್ಮೆ ಬೆತ್ತಲೆಗೊಳಿಸಿದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಂಗ್ರೆಸ್ ಪಕ್ಷವು ಕರ್ನಾಟಕ, ಕೇರಳ, ತೆಲಂಗಾಣ ಹಾಗೂ ಹಿಮಾಚಲ ಪ್ರದೇಶಗಳಲ್ಲಿ ಗೆದ್ದಾಗ ಚುನಾವಣಾ ಆಯೋಗ ಮತ್ತು ಇವಿಎಂ ಸರಿಯಾಗಿರುತ್ತವೆ; ಆದರೆ ಉಳಿದೆಡೆ ಸೋತಾಗ ಸಾಂವಿಧಾನಿಕ ಸಂಸ್ಥೆಗಳ ಮೇಲೆ ಗೂಬೆ ಕೂರಿಸುವುದು ಅವರ ರಾಜಕೀಯ ತಂತ್ರಗಾರಿಕೆಯಾಗಿದೆ ಎಂದು ಚೌಟ ಆರೋಪಿಸಿದ್ದಾರೆ. ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಸುತ್ತ ಎಬ್ಬಿಸಲಾದ ವಿವಾದವನ್ನು 'ಸಾಂವಿಧಾನಿಕ ಬಿಕ್ಕಟ್ಟು' ಎಂದು ಬಿಂಬಿಸಲು ಯತ್ನಿಸಲಾಗಿತ್ತು. ಆದರೆ ಎಸ್‌ಐಆರ್‌ಗೆ ಸಂಬಂಧಿಸಿದ ನಿರ್ಧಾರಗಳನ್ನು ಮೂವರೂ ಆಯುಕ್ತರು ಸರ್ವಾನುಮತದಿಂದ ತೆಗೆದುಕೊಂಡಿದ್ದಾರೆ ಹಾಗೂ ಸುಪ್ರೀಂ ಕೋರ್ಟ್ ಕೂಡ ಅರ್ಜಿ ನಮೂನೆ 6 ಅನ್ನು ಎತ್ತಿಹಿಡಿದಿದೆ.

ಕೇರಳದಲ್ಲಿ ನಕಲಿ ಮತದಾರರನ್ನು ತೆಗೆದುಹಾಕಲು ಎಸ್‌ಐಆರ್ ನೆರವಾಗಿದೆ ಎಂದು ಸ್ವತಃ ಕಾಂಗ್ರೆಸ್ ನಾಯಕ ಶಶಿ ತರೂರ್ ಒಪ್ಪಿಕೊಂಡಿದ್ದಾರೆ. ಮೃತಪಟ್ಟವರ ಹಾಗೂ ಸ್ಥಳಾಂತರಗೊಂಡವರ ನಕಲಿ ಹೆಸರುಗಳನ್ನು ತೆಗೆದುಹಾಕಿ ಮತದಾರರ ಪಟ್ಟಿಯನ್ನು ಶುದ್ಧೀಕರಿಸುವುದೇ ಈ ಪ್ರಕ್ರಿಯೆಯ ಮೂಲ ಉದ್ದೇಶವಾಗಿದೆ. ಅಕ್ರಮ ನಡೆದಿದೆ ಎನ್ನಲು ಸೂಕ್ತ ಸಾಕ್ಷ್ಯಗಳಿದ್ದರೆ ಆಯೋಗದ ಮುಂದಿಡಲಿ. ಅದನ್ನು ಬಿಟ್ಟು ಸೋಲಿಗೆ ನೆಪ ಹುಡುಕುತ್ತಾ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ಜನರ ನಂಬಿಕೆ ಕೆಡಿಸುವುದನ್ನು ತಕ್ಷಣವೇ ನಿಲ್ಲಿಸಿ, ರಾಹುಲ್ ಗಾಂಧಿ ಜವಾಬ್ದಾರಿಯುತ ವಿರೋಧ ಪಕ್ಷದ ನಾಯಕನಾಗಿ ವರ್ತಿಸಬೇಕು ಎಂದು ಕ್ಯಾ. ಬ್ರಿಜೇಶ್ ಚೌಟ ಆಗ್ರಹಿಸಿದ್ದಾರೆ.

Category
ಕರಾವಳಿ ತರಂಗಿಣಿ