image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ರಾಹುಲ್‌ ಕ್ಷಮೆ ಕೇಳಿದರೆ 'ವಂಚಕ' ಎನ್ನುವುದನ್ನು ನಿಲ್ಲಿಸುವೆ: ರಾಜೀವ್‌ ಚಂದ್ರಶೇಖರ್‌

ರಾಹುಲ್‌ ಕ್ಷಮೆ ಕೇಳಿದರೆ 'ವಂಚಕ' ಎನ್ನುವುದನ್ನು ನಿಲ್ಲಿಸುವೆ: ರಾಜೀವ್‌ ಚಂದ್ರಶೇಖರ್‌

ಕೇರಳಮ್ : ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಚುನಾವಣಾ ಆಯೋಗದ ವಿರುದ್ಧ ನೀಡಿರುವ ಹೇಳಿಕೆಗಳಿಗೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಕ್ಷಮೆಯಾಚಿಸಿದರೆ ಮಾತ್ರ ಅವರನ್ನು 'ವಂಚಕ' ಎಂದು ಕರೆಯುವುದನ್ನು ನಿಲ್ಲಿಸುವುದಾಗಿ ಕೇರಳ ಬಿಜೆಪಿ ಅಧ್ಯಕ್ಷ ರಾಜೀವ್‌ ಚಂದ್ರಶೇಖರ್‌ ಸ್ಪಷ್ಟಪಡಿಸಿದ್ದಾರೆ. ರಾಹುಲ್ ಗಾಂಧಿ ವಿರುದ್ಧ ರಾಜೀವ್ ಚಂದ್ರಶೇಖರ್ ನಡೆಸಿದ್ದ ವೈಯಕ್ತಿಕ ದಾಳಿಯನ್ನು ಖಂಡಿಸಿದ್ದ ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್‌ ಅವರಿಗೆ ತಿರುಗೇಟು ನೀಡುವ ಮೂಲಕ ಅವರು ಈ ಸವಾಲೆಸೆದಿದ್ದಾರೆ.

ಚುನಾವಣಾ ಆಯೋಗದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಕುರಿತು ಉಂಟಾಗಿರುವ ವಿವಾದದ ಹಿನ್ನೆಲೆಯಲ್ಲಿ ರಾಜೀವ್ ಚಂದ್ರಶೇಖರ್ ಅವರು ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದನ್ನು ಸತೀಶನ್ ಖಂಡಿಸಿದ್ದಕ್ಕೆ ಎಕ್ಸ್ (X) ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿರುವ ಚಂದ್ರಶೇಖರ್, "ನಾನು ಸಾಮಾನ್ಯವಾಗಿ ರಾಜಕೀಯ ವಿರೋಧಿಗಳ ವಿರುದ್ಧ ವೈಯಕ್ತಿಕ ದಾಳಿ ನಡೆಸುವುದಿಲ್ಲ. ಆದರೆ ರಾಹುಲ್ ಗಾಂಧಿ ಅವರ ವಿಚಾರದಲ್ಲಿ ದೇಶದ ಬಹುತೇಕ ಜನರಂತೆ ನಾನೂ ಹಾಗೆ ಮಾಡಲು ಅನಿವಾರ್ಯ ಪರಿಸ್ಥಿತಿಯಲ್ಲಿದ್ದೇನೆ" ಎಂದು ವಿವರಿಸಿದ್ದಾರೆ.

2014ರಲ್ಲಿ ದೇಶದ ಮತದಾರರಿಂದ ಕಾಂಗ್ರೆಸ್‌ ತಿರಸ್ಕೃತಗೊಂಡ ಬಳಿಕ ರಾಹುಲ್‌ ಅವರ ರಾಜಕೀಯವು ಸುಳ್ಳು, ಅವಮಾನ ಮತ್ತು ವಿಭಜನೆಯ ಮೇಲೆಯೇ ನಿರ್ಮಿತವಾಗಿದೆ ಎಂದು ಚಂದ್ರಶೇಖರ್ ಆರೋಪಿಸಿದ್ದಾರೆ. ಪ್ರಧಾನಿ ಮೋದಿ ಹಾಗೂ ಸರ್ಕಾರದ ವಿರುದ್ಧ ರಾಹುಲ್‌ ನಿರಂತರವಾಗಿ ಸುಳ್ಳು ಮಾಹಿತಿ ಹರಡುತ್ತಿದ್ದು, ದೇಶದ ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಲಗೊಳಿಸುತ್ತಿದ್ದಾರೆ. ಹೀಗಾಗಿ ವಂಚನೆ ಮತ್ತು ಭ್ರಷ್ಟಾಚಾರದ ಮೇಲೆ ನಿಂತಿರುವ ರಾಜಕೀಯ ನಡೆಸುತ್ತಿರುವ ರಾಹುಲ್‌ ಗಾಂಧಿಯನ್ನು 'ವಂಚಕ' ಎಂದು ಕರೆಯಲು ತಮಗೆ ಯಾವುದೇ ಹಿಂಜರಿಕೆ ಇಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.

ಇದೇ ವೇಳೆ ಮತದಾರರ ಪಟ್ಟಿಯಲ್ಲಿರುವ ನಕಲಿ ಹಾಗೂ ಅಕ್ರಮ ಮತದಾರರನ್ನು ಹೊರಹಾಕಲು ಎಸ್‌ಐಆರ್ ಪ್ರಕ್ರಿಯೆ ಅಗತ್ಯ ಎಂದಿರುವ ಅವರು, "ರಾಹುಲ್ ಗಾಂಧಿ ಅವರಿಂದ ಪ್ರಧಾನಿ ಮೋದಿ ಹಾಗೂ ಚುನಾವಣಾ ಆಯೋಗಕ್ಕೆ ಕ್ಷಮೆ ಕೇಳಿಸಿದರೆ, ನಾನು ಅವರನ್ನು 'ವಂಚಕ' ಎಂದು ಕರೆಯುವುದನ್ನು ನಿಲ್ಲಿಸುತ್ತೇನೆ. ಇಲ್ಲವಾದಲ್ಲಿ ಈ ರೀತಿ ಕರೆಯುವುದಕ್ಕೆ ಸಿದ್ಧರಾಗಿರಿ" ಎಂದು ಸತೀಶನ್ ಅವರಿಗೆ ನೇರ ಸವಾಲು ಹಾಕಿದ್ದಾರೆ.

Category
ಕರಾವಳಿ ತರಂಗಿಣಿ