ಮಂಗಳೂರು: ಪ್ರಜಾಪ್ರಭುತ್ವದ ಅಡಿಪಾಯವಾಗಿರುವ ಚುನಾವಣಾ ಆಯೋಗವು ತಾರತಮ್ಯ ಮತ್ತು ಪಕ್ಷಪಾತದಿಂದ ವರ್ತಿಸುತ್ತಿದ್ದು, ಸಂಸ್ಥೆಯ ವಿಶ್ವಾಸಾರ್ಹತೆ ಕುಸಿದಿದೆ ಎಂದು ಆರೋಪಿಸಿ ಸೆಪ್ಟೆಂಬರ್ 28ರ ಸೋಮವಾರದಂದು ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪದ್ಮರಾಜ್ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಕಾಂಗ್ರೆಸ್ ಹೈಕಮಾಂಡ್ ಹಾಗೂ ಕೆಪಿಸಿಸಿ ಸೂಚನೆಯಂತೆ ಅಂದು ಬೆಳಿಗ್ಗೆ 10:30ಕ್ಕೆ ಪಂಪ್‌ವೆಲ್‌ನ ಮಹಾವೀರ ಸರ್ಕಲ್‌ನಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಮೆರವಣಿಗೆ ನಡೆಯಲಿದೆ. ಈ ಪ್ರತಿಭಟನೆಯಲ್ಲಿ ಜಿಲ್ಲೆಯ ಉಸ್ತುವಾರಿ ಸಚಿವರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಸೇರಿದಂತೆ ಸಾರ್ವಜನಿಕರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಚುನಾವಣಾ ಆಯೋಗದಲ್ಲಿ ಮುಖ್ಯ ಆಯುಕ್ತರ ಜೊತೆಗಿರುವ ಇಬ್ಬರು ಸಹ-ಆಯುಕ್ತರ ಆಕ್ಷೇಪಣೆಗಳನ್ನು ಲೆಕ್ಕಿಸದೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ತಾರತಮ್ಯ ಎಸಗುತ್ತಿರುವುದು ಸ್ಪಷ್ಟವಾಗಿದೆ. ರಾಹುಲ್ ಗಾಂಧಿಯವರು ಈ ಹಿಂದೆ ವ್ಯಕ್ತಪಡಿಸಿದ್ದ ವೋಟ್ ಚೋರಿ ಆರೋಪಕ್ಕೆ ಈಗ ಸ್ವತಃ ಆಯುಕ್ತರ ಹೇಳಿಕೆಗಳೇ ಪುಷ್ಟಿ ನೀಡುತ್ತಿವೆ. ಈ ಹಿನ್ನೆಲೆಯಲ್ಲಿ ಮುಖ್ಯ ಚುನಾವಣಾ ಆಯುಕ್ತರು ತಕ್ಷಣ ರಾಜೀನಾಮೆ ನೀಡಬೇಕು ಮತ್ತು ಕೇಂದ್ರ ಸರ್ಕಾರ ಅವರ ವಿರುದ್ಧ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಇದೇ ವೇಳೆ, ತುಳು ಭಾಷೆಗೆ ರಾಜ್ಯದ ಎರಡನೇ ಆಡಳಿತ ಭಾಷೆಯ ಮಾನ್ಯತೆ ನೀಡಿದ ರಾಜ್ಯ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿದ ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಪದ್ಮರಾಜ್, ಅವರು ತುಳುನಾಡಿನ ಜನರ ಸ್ವಾಭಿಮಾನ ಹಾಗೂ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಈ ಕೂಡಲೇ ಅವರು ಈ ಭಾಗದ ಜನರ ಕ್ಷಮೆ ಕೇಳಬೇಕು ಹಾಗೂ ಬಿಜೆಪಿಯ ಸ್ಥಳೀಯ ನಾಯಕರು ಈ ಬಗ್ಗೆ ತಮ್ಮ ನಿಲುವು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.
ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ರಾಜ್ಯ ಸಂಪುಟ ಸಭೆಯು ಕರಾವಳಿಯ ಅಭಿವೃದ್ಧಿಗೆ ಹೊಸ ದಿಕ್ಸೂಚಿ ನೀಡಿದೆ. ಸುಮಾರು 16,000 ಕೋಟಿ ರೂಪಾಯಿ ವೆಚ್ಚದಲ್ಲಿ ಮೂಲಭೂತ ಸೌಕರ್ಯ, ಬಂದರು, ರಸ್ತೆ ಹಾಗೂ ಕುಡಿಯುವ ನೀರಿನ ಯೋಜನೆಗಳನ್ನು ಘೋಷಿಸಲಾಗಿದೆ. 1,000 ಚದರ ಮೀಟರ್‌ಗಿಂತ ಕಡಿಮೆ ವಿಸ್ತೀರ್ಣದ ಜಾಗಗಳಿಗೆ ಸ್ಥಳೀಯ ಸಂಸ್ಥೆಗಳು ಹಾಗೂ ಪಿಡಿಒ ಹಂತದಲ್ಲೇ 9/11 ನೀಡುವ ಅಧಿಕಾರ ನೀಡಿರುವುದು ಮತ್ತು ವೆನ್‌ಲಾಕ್ ಆಸ್ಪತ್ರೆಗೆ 400 ಹೆಚ್ಚುವರಿ ಹಾಸಿಗೆಗಳ ಸೌಲಭ್ಯ ಕಲ್ಪಿಸುತ್ತಿರುವುದು ಜನಪರ ಕಾಳಜಿಗೆ ಸಾಕ್ಷಿಯಾಗಿದೆ. ಕೇಂದ್ರ ಸರ್ಕಾರಕ್ಕೆ ತೆರಿಗೆ ಪಾವತಿಯಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದ್ದರೂ, ವಾಪಸ್ ಬರುವ ಅನುದಾನದಲ್ಲಿ ಅನ್ಯಾಯವಾಗುತ್ತಿರುವುದನ್ನು ಪ್ರಶ್ನಿಸಲು ಬಿಜೆಪಿ ಸಂಸದರು ವಿಫಲರಾಗಿದ್ದಾರೆ ಎಂದು ಅವರು ಟೀಕಿಸಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ನಾಯಕರಾದ ಐವನ್ ಡಿಸೋಜ, ಹರೀಶ್ ಕುಮಾರ್, ಶಶಿಧರ್ ಹೆಗ್ಡೆ, ಅಪ್ಪಿ, ಅನಿಲ್ ಕುಮಾರ್, ಮೋಹನ್ ಕೊಟ್ಯಾನ್, ಲ್ಯಾನ್ಸಿ ಪಿಂಟೋ, ಸುಭೋದಯ್ ಆಳ್ವ, ಸುಭಾಷ್ ಶೆಟ್ಟಿ, ಸಲೀಂ, ಪುರುಷೋತ್ತಮ್ ಚಿತ್ರಾಪುರ, ಅಶೋಕ್ ಡಿಕೆ, ಕೇಶವ್ ಮರೋಳಿ, ಯೋಗೀಶ್ ಕುಮಾರ್, ಕಿರಣ್ ಬುಡ್ಲೆಗುತ್ತು ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.