ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿ ನಿರ್ಮಾಣಗೊಂಡು 9 ವರ್ಷಗಳು ಕಳೆದಿದ್ದರೂ ಒಮ್ಮೆಯೂ ಕಾಲಿಡದಿದ್ದ ಪಕ್ಷದ ಹಿರಿಯ ನಾಯಕ ಹಾಗೂ ಕೇಂದ್ರ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಅವರು ಕಾಂಗ್ರೆಸ್ ಭವನಕ್ಕೆ ಆಗಮಿಸಿ ಗಮನ ಸೆಳೆದಿದ್ದಾರೆ. ತಮ್ಮ ಪಟ್ಟಶಿಷ್ಯ ಪದ್ಮರಾಜ್ ಆರ್. ಪೂಜಾರಿ ಅವರು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ (ಡಿಸಿಸಿ) ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಾದ ಮಾಡಿದ್ದು, ಜಿಲ್ಲಾ ಕಾಂಗ್ರೆಸ್ ಅಂಗಳದಲ್ಲಿ ಹೊಸ ಸಂಚಲನ ಮೂಡಿಸಿದೆ.
ಅಧಿಕಾರ ವಹಿಸಿಕೊಂಡು ಮಾತನಾಡಿದ ನೂತನ ಅಧ್ಯಕ್ಷ ಪದ್ಮರಾಜ್ ಆರ್. ಪೂಜಾರಿ, "ಪಕ್ಷಕ್ಕಾಗಿ ತಳಮಟ್ಟದಲ್ಲಿ ಶ್ರಮಿಸುವ ಕಟ್ಟಕಡೆಯ ಕಾರ್ಯಕರ್ತನಿಗೂ ಸೂಕ್ತ ಗೌರವ ನೀಡಿ, ಅವರನ್ನು ಸಶಕ್ತಗೊಳಿಸುವ ಮೂಲಕ ಬೂತ್ ಮಟ್ಟದಿಂದ ಪಕ್ಷ ಸಂಘಟನೆಗೆ ಆದ್ಯತೆ ನೀಡಲಾಗುವುದು. ಹಿರಿಯ ನಾಯಕರ ಮಾರ್ಗದರ್ಶನ ಹಾಗೂ ಕಾರ್ಯಕರ್ತರ ಬೆಂಬಲದೊಂದಿಗೆ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಗತವೈಭವವನ್ನು ಮರುಕಳಿಸುವ ನಿಟ್ಟಿನಲ್ಲಿ ಶ್ರಮಿಸುತ್ತೇನೆ" ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ನಿರ್ಗಮಿತ ಅಧ್ಯಕ್ಷ ಹರೀಶ್ ಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ, ರಾಜ್ಯ ಕಾರ್ಯದರ್ಶಿ ಮಿಥುನ್ ರೈ, ಮಾಜಿ ಸಚಿವ ಅಭಯಚಂದ್ರ ಜೈನ್ ಸೇರಿದಂತೆ ಪ್ರಮುಖ ನಾಯಕರು ಉಪಸ್ಥಿತರಿದ್ದರು.