ಪುತ್ತೂರು: ಕರ್ನಾಟಕ ನಗರಾಭಿವೃದ್ಧಿ ಇಲಾಖೆಯ ಮೂಲಕ ಪುತ್ತೂರು ನಗರಸಭೆ ವ್ಯಾಪ್ತಿಗೆ 6.5 ಕೋಟಿ ರೂ. ಹಾಗೂ ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಗೆ 3.5 ಕೋಟಿ ರೂ. ಸೇರಿದಂತೆ ಒಟ್ಟು 10 ಕೋಟಿ ರೂಪಾಯಿಗಳ ವಿಶೇಷ ಅನುದಾನವನ್ನು ಮುಖ್ಯಮಂತ್ರಿಗಳು ಮಂಜೂರು ಮಾಡಿದ್ದಾರೆ ಎಂದು ಶಾಸಕ ಅಶೋಕ್ ರೈ ಅಧಿಕೃತವಾಗಿ ತಿಳಿಸಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದ ಶಾಸಕರು, ಕ್ಷೇತ್ರದ ಪ್ರಮುಖ ನಗರಾಭಿವೃದ್ಧಿ ಹಾಗೂ ಮೂಲಭೂತ ಸೌಕರ್ಯಗಳ ಕೊರತೆಯನ್ನು ಅವರ ಗಮನಕ್ಕೆ ತಂದಿದ್ದರು. ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ಇಂದಿಗೂ ಅನೇಕ ಒಳರಸ್ತೆಗಳು ಅಭಿವೃದ್ಧಿಯಾಗದೆ ಸಾರ್ವಜನಿಕರ ದೀರ್ಘಕಾಲದ ಬೇಡಿಕೆಗಳು ಈಡೇರದೆ ಉಳಿದುಕೊಂಡಿವೆ. ಅಲ್ಲದೆ, ಕೆಲವು ಪ್ರಮುಖ ಪ್ರದೇಶಗಳಲ್ಲಿ ಒಳಚರಂಡಿ ವ್ಯವಸ್ಥೆ ಮತ್ತು ಇತರ ಅಭಿವೃದ್ಧಿ ಕಾಮಗಾರಿಗಳನ್ನು ತುರ್ತಾಗಿ ಕೈಗೊಳ್ಳಬೇಕಾದ ಅನಿವಾರ್ಯತೆ ಇರುವುದನ್ನು ಅವರು ವಿವರಿಸಿದ್ದರು.
ಇದೇ ವೇಳೆ ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯ ಸಮಸ್ಯೆಗಳ ಬಗ್ಗೆಯೂ ಚರ್ಚಿಸಿದ ಶಾಸಕರು, ವಿಟ್ಲದಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಈಗಾಗಲೇ ಹೆಚ್ಚುವರಿ ಅನುದಾನ ನೀಡಲಾಗಿದ್ದು, ಮುಂಬರುವ ಜನವರಿ ಅಥವಾ ಫೆಬ್ರವರಿ ಒಳಗಾಗಿ ಶಾಶ್ವತ ಪರಿಹಾರ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದ್ದರು. ಇದರೊಂದಿಗೆ ವಿಟ್ಲ ಪಟ್ಟಣದ ವಿವಿಧ ರಸ್ತೆಗಳ ಅಭಿವೃದ್ಧಿಗೂ ವಿಶೇಷ ಅನುದಾನದ ಅಗತ್ಯವಿರುವುದನ್ನು ಮನವರಿಕೆ ಮಾಡಿಕೊಟ್ಟಿದ್ದರು.
ಶಾಸಕರ ಈ ದಿಟ್ಟ ಹಾಗೂ ಸಕಾಲಿಕ ಪ್ರಯತ್ನಕ್ಕೆ ಸ್ಪಂದಿಸಿರುವ ಸರಕಾರ, ಪುತ್ತೂರು ಮತ್ತು ವಿಟ್ಲ ಭಾಗದ ಅಭಿವೃದ್ಧಿಗೆ ಮುತುವರ್ಜಿ ವಹಿಸಿ ಒಟ್ಟು 10 ಕೋಟಿ ರೂ.ಗಳ ಅನುದಾನವನ್ನು ಬಿಡುಗಡೆಗೊಳಿಸಿದೆ. ಸರ್ಕಾರದ ಈ ವಿಶೇಷ ಅನುದಾನದಿಂದ ಕ್ಷೇತ್ರದ ರಸ್ತೆಗಳು, ಮೂಲಭೂತ ಸೌಕರ್ಯಗಳು ಮತ್ತು ನಗರಾಭಿವೃದ್ಧি ಕಾಮಗಾರಿಗಳಿಗೆ ಹೆಚ್ಚಿನ ವೇಗ ಸಿಗಲಿದ್ದು, ಪುತ್ತೂರು ಹಾಗೂ ವಿಟ್ಲ ಜನತೆಗೆ ದೊಡ್ಡ ಮಟ್ಟದ ನೆರವಾಗಲಿದೆ.