image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ವಿಧಾನ ಪರಿಷತ್‌ನಲ್ಲಿ ಹರಿಪ್ರಸಾದ್ ಹೇಳಿಕೆಗೆ ಭಾರಿ ಗದ್ದಲ: ಬಿಜೆಪಿ, ಜೆಡಿಎಸ್ ಸಭಾತ್ಯಾಗ

ವಿಧಾನ ಪರಿಷತ್‌ನಲ್ಲಿ ಹರಿಪ್ರಸಾದ್ ಹೇಳಿಕೆಗೆ ಭಾರಿ ಗದ್ದಲ: ಬಿಜೆಪಿ, ಜೆಡಿಎಸ್ ಸಭಾತ್ಯಾಗ

ಬೆಂಗಳೂರು: ವಿಧಾನ ಪರಿಷತ್​​ನ ಎರಡನೇ ದಿನದ ಅಧಿವೇಶನದಲ್ಲಿ ಆಡಳಿತ ಹಾಗೂ ವಿಪಕ್ಷ ಸದಸ್ಯರ ನಡುವೆ ತೀವ್ರ ವಾಗ್ವಾದ ನಡೆದು ಭಾರಿ ಹೈಡ್ರಾಮಾ ಸೃಷ್ಟಿಯಾಗಿದೆ. ಸಾಲಮನ್ನಾ ವಿಚಾರವಾಗಿ ಚರ್ಚೆ ನಡೆಯುತ್ತಿದ್ದ ವೇಳೆ ಕೆಪಿಸಿಸಿ ಅಧ್ಯಕ್ಷ ಹಾಗೂ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರು, "ನರೇಂದ್ರ ಮೋದಿ ಅವರು 800 ರೈತರ ಪ್ರಾಣ ತೆಗೆದುಕೊಂಡಿದ್ದಾರೆ" ಎಂದು ನೀಡಿದ ಹೇಳಿಕೆ ಸದನದಲ್ಲಿ ಬೆಂಕಿ ಹೊತ್ತಿಸಿತು. ಹರಿಪ್ರಸಾದ್ ಹೇಳಿಕೆಗೆ ಕಮಲ ಪಡೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, 'ಆಚಾರವಿಲ್ಲದ ನಾಲಗೆ' ಎಂದು ಕಿಡಿಕಾರಿತು.

ಇದೇ ವೇಳೆ ಕಾಂಗ್ರೆಸ್ ಸದಸ್ಯ ಸುನೀಲ್, "ಜನರ ಅಕೌಂಟ್‌ಗೆ 15 ಲಕ್ಷ ರೂಪಾಯಿ ಹಾಕುತ್ತೇವೆ ಎಂದವರು ಎಲ್ಲಿದ್ದಾರೆ?" ಎಂದು ಪ್ರಶ್ನಿಸಿದ್ದು ಗದ್ದಲವನ್ನು ಮತ್ತಷ್ಟು ಹೆಚ್ಚಿಸಿತು. ಉಭಯ ಪಕ್ಷಗಳ ಗಲಾಟೆ ವಿಕೋಪಕ್ಕೆ ಹೋದಾಗ ಪೀಠದಲ್ಲಿದ್ದ ಸಭಾಪತಿ ಸಲೀಂ ಅಹ್ಮದ್ ಎದ್ದುನಿಂತು, "ಇದೇನು ಮೀನು ಮಾರುಕಟ್ಟೆಯಾ?" ಎಂದು ಸದಸ್ಯರ ವರ್ತನೆಗೆ ಬೇಸರ ವ್ಯಕ್ತಪಡಿಸಿದರು. ಇದಕ್ಕೆ ತಿರುಗೇಟು ನೀಡಿದ ಬಿಜೆಪಿಯ ಕೇಶವ ಪ್ರಸಾದ್, "ಫಿಶ್ ಮಾರ್ಕೆಟ್ ವ್ಯವಸ್ಥೆ ಮಾಡಿದ್ದೇ ನೀವು, ಮಾತನಾಡಲು ಅವಕಾಶ ಕೊಟ್ಟಿದ್ದಕ್ಕೆ ಹೀಗೆ ಮಾತನಾಡುತ್ತಿದ್ದಾರೆ" ಎಂದು ವಾಗ್ದಾಳಿ ನಡೆಸಿದರು. ಬಳಿಕ ಜನ ನಮ್ಮನ್ನು ನೋಡುತ್ತಿದ್ದಾರೆ, ಗೌರವದಿಂದ ಚರ್ಚೆ ಮಾಡಿ ಎಂದು ಸಭಾಪತಿಗಳು ಮನವಿ ಮಾಡಿದ ನಂತರ ಚರ್ಚೆ ಮುಂದುವರೆಯಿತು.

ನಂತರ ಬರ ಪರಿಹಾರ ವಿಚಾರದ ಚರ್ಚೆ ವೇಳೆ, "ಡಿಬಿಟಿ (DBT) ಮೂಲಕ ರೈತರಿಗೆ ಹಣ ಪಾವತಿ ಸರಿಯಾಗಿ ತಲುಪುತ್ತಿದೆ" ಎಂದು ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಕ್ಕೆ ಸಚಿವ ಸಂತೋಷ್ ಲಾಡ್ ಆಕ್ಷೇಪ ವ್ಯಕ್ತಪಡಿಸಿ ಸ್ಪಷ್ಟನೆಗೆ ಪಟ್ಟುಹಿಡಿದರು. ಈ ವೇಳೆ ಬಿಜೆಪಿ ನಾಯಕ ಸಿ.ಟಿ. ರವಿ ಮಾತನಾಡಿ, "ವಿಪಕ್ಷ ನಾಯಕರ ಮಾತಿಗೆ ಪದೇಪದೆ ಅಡ್ಡಿಪಡಿಸಲಾಗುತ್ತಿದೆ. ವಿಶೇಷ ಸದನ ಕರೆದಿದ್ದು ಇದಕ್ಕೇನಾ?" ಎಂದು ಆಡಳಿತ ಪಕ್ಷದ ನಡೆಯನ್ನು ಖಂಡಿಸಿದರು. ಆಡಳಿತ ಪಕ್ಷದ ಧೋರಣೆಯನ್ನು ಪ್ರತಿಭಟಿಸಿ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಸದನದಿಂದ ಸಭಾತ್ಯಾಗ ಮಾಡಿದ್ದರಿಂದ, ಸಭಾಪತಿಗಳು ಕಲಾಪವನ್ನು ಕೆಲ ಕಾಲ ಮುಂದೂಡಿದರು.

Category
ಕರಾವಳಿ ತರಂಗಿಣಿ