image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಲಂಚಕ್ಕೆ 'ಧರ್ಮ'ದ ಹೆಸರಿಡಬೇಡಿ, ರೇಟ್ ಕಾರ್ಡ್ ಪ್ರಕಟಿಸಿ: ಸರ್ಕಾರದ ವಿರುದ್ಧ ಸಿ.ಟಿ. ರವಿ ವಾಗ್ದಾಳಿ

ಲಂಚಕ್ಕೆ 'ಧರ್ಮ'ದ ಹೆಸರಿಡಬೇಡಿ, ರೇಟ್ ಕಾರ್ಡ್ ಪ್ರಕಟಿಸಿ: ಸರ್ಕಾರದ ವಿರುದ್ಧ ಸಿ.ಟಿ. ರವಿ ವಾಗ್ದಾಳಿ

ಬೆಂಗಳೂರು: ಸಚಿವ ಕೆ.ಎಂ. ಶಿವಲಿಂಗೇಗೌಡ ಅವರು 'ಗೌರವಯುತವಾಗಿ ಲಂಚ ಕೊಡುವುದು' ಎಂಬರ್ಥದಲ್ಲಿ ನೀಡಿರುವ ಹೇಳಿಕೆಯನ್ನು ಕಟುವಾಗಿ ಖಂಡಿಸಿರುವ ಬಿಜೆಪಿ ವಿಧಾನ ಪರಿಷತ್ ಸದಸ್ಯ ಡಾ. ಸಿ.ಟಿ. ರವಿ, ಈ ವಿಚಾರದಲ್ಲಿ ರಾಜ್ಯ ಸರ್ಕಾರದ ನಿಲುವೇನು ಎಂದು ಪ್ರಶ್ನಿಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಲಂಚಕ್ಕೆ 'ಧರ್ಮ'ದ ಲೇಪ ಹಚ್ಚದೆ ನೇರವಾಗಿ ಲಂಚ ಎಂದೇ ಕರೆಯಿರಿ. ಸಚಿವರ ಈ ಹೇಳಿಕೆಯನ್ನು ಸರ್ಕಾರ ಒಪ್ಪಿಕೊಳ್ಳುವುದಾದರೆ, ಪ್ರತಿಯೊಂದು ಇಲಾಖೆಯಲ್ಲಿ ಯಾವ ಕೆಲಸಕ್ಕೆ ಎಷ್ಟು ಲಂಚ ನೀಡಬೇಕು ಎಂಬ 'ರೇಟ್ ಕಾರ್ಡ್' ಅನ್ನೇ ಅಧಿಕೃತವಾಗಿ ಪ್ರಕಟಿಸಲಿ ಎಂದು ವ್ಯಂಗ್ಯವಾಡಿದರು. ಭ್ರಷ್ಟಾಚಾರಕ್ಕೆ ಧರ್ಮದ ಹೆಸರಿಟ್ಟು ಅಧರ್ಮದ ಕೆಲಸ ಮಾಡುವುದು ಪ್ರಜಾಸೇವೆಯಲ್ಲ ಎಂದು ಕಿಡಿಕಾರಿದರು.

ಇದೇ ವೇಳೆ ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ ಸರ್ಕಾರ ವಿಧಾನಮಂಡಲ ಅಧಿವೇಶನ ಕರೆದು ಚರ್ಚಿಸುತ್ತಿರುವ ಹಿನ್ನೆಲೆಯಲ್ಲಿ ಮಾತನಾಡಿದ ರವಿ, ಈ ವಿಷಯವನ್ನು ರಾಜಕೀಯಗೊಳಿಸದಂತೆ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಪಶ್ಚಿಮಘಟ್ಟ ಸಂರಕ್ಷಣೆಗೆ ಸಂಬಂಧಿಸಿದಂತೆ ಮಾಧವ ಗಾಡ್ಗೀಳ್ ಹಾಗೂ ಕಸ್ತೂರಿ ರಂಗನ್ ಸಮಿತಿಗಳನ್ನು ರಚಿಸಿದ್ದು ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ. ಜಯರಾಮ್ ರಮೇಶ್ ಹಾಗೂ ಜಯಂತಿ ನಟರಾಜನ್ ಪರಿಸರ ಸಚಿವರಾಗಿದ್ದಾಗ ಮತ್ತು ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಮೊದಲ ಕರಡು ಅಧಿಸೂಚನೆ ಹೊರಬಿದ್ದಿತ್ತು. ಹೀಗಾಗಿ ಈ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ರಾಜಕೀಯ ಮಾಡಲು ಹೊರಟರೆ ಅದು ಕಾಂಗ್ರೆಸ್‌ಗೆ ತಿರುಗುಬಾಣವಾಗಲಿದೆ ಎಂದರು.

ಕಸ್ತೂರಿ ರಂಗನ್ ವರದಿ ಕುರಿತು ಬಿಜೆಪಿಯದ್ದು 'ಮಧ್ಯಮ ಮಾರ್ಗ'ದ ನಿಲುವಾಗಿದೆ ಎಂದು ಸ್ಪಷ್ಟಪಡಿಸಿದ ರವಿ, ಪರಿಸರ ಮತ್ತು ಜನರ ಬದುಕು ಒಂದೇ ನಾಣ್ಯದ ಎರಡು ಮುಖಗಳು ಎಂದು ಪ್ರತಿಪಾದಿಸಿದರು. ಕೇವಲ ಸ್ಯಾಟಲೈಟ್ ಹಾಗೂ ವೈಮಾನಿಕ ಸಮೀಕ್ಷೆಗಳನ್ನು ನೆಚ್ಚಿಕೊಳ್ಳದೆ, ನೆಲಮಟ್ಟದಲ್ಲಿ ಪ್ರತಿಯೊಂದು ಗ್ರಾಮ ಹಾಗೂ ಸರ್ವೆ ನಂಬರ್ ಆಧಾರಿತ ಸಮೀಕ್ಷೆ ನಡೆಸಬೇಕು. ಪ್ರದೇಶವನ್ನು 'ಕಲ್ಚರಲ್ ಲ್ಯಾಂಡ್‌ಸ್ಕೇಪ್' ಮತ್ತು 'ನ್ಯಾಚುರಲ್ ಲ್ಯಾಂಡ್‌ಸ್ಕೇಪ್' ಎಂದು ಪ್ರತ್ಯೇಕಿಸಿ ಗುರುತಿಸಿ, ಜೈವಿಕ ಅರಣ್ಯದ ಜೊತೆಗೆ ಜನರ ಜೀವನಾಧಾರವನ್ನೂ ರಕ್ಷಿಸಬೇಕು ಎಂದು ಆಗ್ರಹಿಸಿದರು.

ಪಶ್ಚಿಮಘಟ್ಟ ಪ್ರದೇಶದ ಪರಿಸರ ಸಂರಕ್ಷಣೆಗೆ ಮತ್ತು ಅಲ್ಲಿನ ಜನರ ಬದುಕಿಗೆ ನೆರವಾಗಲು 'ಹಸಿರು ತೆರಿಗೆ' (ಗ್ರೀನ್ ಟ್ಯಾಕ್ಸ್) ಸಂಗ್ರಹಿಸುವ ಪ್ರಸ್ತಾಪವನ್ನು ಅವರು ಮುಂದಿಟ್ಟರು. ಕಾವೇರಿ, ತುಂಗಭದ್ರಾ ಹಾಗೂ ಹೇಮಾವತಿ ನದಿಗಳ ನೀರು ಬಳಸುವ ಬೆಂಗಳೂರು ಸೇರಿದಂತೆ ವಿವಿಧ ಪ್ರದೇಶಗಳ ಬಳಕೆದಾರರ ಮೇಲೆ ಸೆಸ್ ವಿಧಿಸಿ, ಅದರಿಂದ ಬರುವ ಹಣವನ್ನು ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಹಾಸನ ಭಾಗದ ಪಶ್ಚಿಮಘಟ್ಟದ ಜನರಿಗೆ ಆರ್ಥಿಕ ಪ್ರೋತ್ಸಾಹಕವಾಗಿ ನೀಡಬಹುದು ಎಂದರು. ಅಲ್ಲದೆ, ಸ್ಥಳೀಯ ಜನರ ಸಮಸ್ಯೆಗಳಿಗೆ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲೇ ಪರಿಹಾರ ಸಿಗುವಂತೆ 'ವಿಶೇಷ ಅದಾಲತ್' ರೂಪಿಸಬೇಕು; ಪ್ರತಿಯೊಂದು ವಿಚಾರಕ್ಕೂ ಸಾಮಾನ್ಯ ಜನರು ಹೈಕೋರ್ಟ್, ಸುಪ್ರೀಂ ಕೋರ್ಟ್ ಅಥವಾ ಗ್ರೀನ್ ಬೆಂಚ್‌ಗೆ ಅಲೆಯುವ ಪರಿಸ್ಥಿತಿ ನಿರ್ಮಾಣವಾಗಬಾರದು ಎಂದು ಆಗ್ರಹಿಸಿದರು.

Category
ಕರಾವಳಿ ತರಂಗಿಣಿ