ಸಿದ್ದು ಸರಕಾರ ರೈತಪರ ಅಲ್ಲ, ರೈತರಿಗೆ ಟೋಪಿ ಹಾಕಿದ ಸರಕಾರ: ಎಸ್.ಆರ್ ಪಾಟೀಲ್ ನಡಹಳ್ಳಿ
ಮಂಗಳೂರು:ರಾಜ್ಯದಲ್ಲಿ ಬಿಜೆಪಿ ಸರಕಾರ ಇದ್ದಾಗ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ, ಕೇಂದ್ರ ಸರಕಾರ ರೈತರಿಗಾಗಿ ನೀಡುತ್ತಿರುವ ರೈತ ಸಮ್ಮಾನ ನಿಧಿಗೆ ರಾಜ್ಯದ ವತಿಯಿಂದ 4,000 ರೂ.ಗಳನ್ನು ಸೇರಿಸಿ ಪ್ರತಿ ರೈತರ ಖಾತೆಗೆ 10,000 ರೂ.ಗಳನ್ನು ಕೊಡಲಾಗುತ್ತಿತ್ತು. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗಲೂ ಇದು ಮುಂದುವರಿದಿತ್ತು. ಆದರೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಬಂದ ಕೂಡಲೇ ರೈತರ ಖಾತೆಗೆ ನೇರ ವರ್ಗಾವಣೆಯಾಗುವ ಈ ಹಣವನ್ನು ನಿಲ್ಲಿಸಿ ಬಿಟ್ಟಿದ್ದಾರೆ ಎಂದು ರಾಜ್ಯ ರೈತ ಮೋರ್ಚಾದ ಅಧ್ಯಕ್ಷರಾದ ಎ.ಎಸ್ ಪಾಟೀಲ್ ನಡಹಳ್ಳಿ ಹೇಳಿದರು.
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಚುನಾವಣೆ ಕಾರ್ಯಾಲಯದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ರೈತರು ಮತ್ತು ವಿಶೇಷವಾಗಿ ರೈತ ಹೆಣ್ಣು ಮಕ್ಕಳು, ಹೈನುಗಾರಿಕೆಯನ್ನೇ ನಂಬಿಕೊಂಡಿರುವವರಿಗೆ ನೆರವಾಗಲೆಂದು ಯಡಿಯೂರಪ್ಪಅವರು 2008ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿ ಆದಾಗ ಹಾಲು ಉತ್ಪಾದಕ ರೈತ ಕುಟುಂಬಗಳಿಗೆ ಹಾಲಿನ ಪ್ರೋತ್ಸಾಹ ಧನ ಎಂದು ಲೀಟರಿಗೆ 2 ರೂ ಕೊಡುತ್ತಿದ್ದರು. ನಂತರ ಬೊಮ್ಮಾಯಿ ಸರಕಾರದಲ್ಲಿ ಅದಕ್ಕೆ 3 ರೂ.ಗಳನ್ನು ಸೇರಿಸಿ ಒಟ್ಟು 5 ರೂ ಪ್ರೋತ್ಸಾಹಧನ ಕೊಡಲಾಗುತ್ತಿತ್ತು. ನೇರ ವರ್ಗಾವಣೆ ಮೂಲಕ ಹೈನುಗಾರರ ಖಾತೆಗೆ ಪಾವತಿಯಾಗುತ್ತಿತ್ತು. ಆದರೆ ಯಾವಾಗ ಕಾಂಗ್ರೆಸ್ ಅಧಿಕಾರಕ್ಕೆ ಬಂತೋ ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅದನ್ನೂ ನಿಲ್ಲಿಸಿಬಿಟ್ಟರು ಎಂದು ನಡಹಳ್ಳಿ ಟೀಕಿಸಿದರು.
ಒಂದು ತಿಂಗಳ ಹಿಂದೆ ಬಿಜೆಪಿ ರೈತ ಮೋರ್ಚಾ ವತಿಯಿಂದ ಕರ್ನಾಟಕದಾದ್ಯಂತ ಹಾಲಿನ ಪ್ರೋತ್ಸಾಹ ಧನ ಬಿಡುಗಡೆಗಾಗಿ ಬೀದಿ ಹೋರಾಟ ಮಾಡಿದ್ದೆವು. ಮಂಗಳೂರು- ಉಡುಪಿ ಭಾಗದಲ್ಲಿ ಮೀನುಗಾರಿಕೆ ಮಾಡುವವರಿಗೆ ಬೋಟ್‌ಗಳಿಗೆ ಸಬ್ಸಿಡಿ ಕೊಡುತ್ತಿದ್ದೆವು. ಆದರೆ ಅದನ್ನೂ ಸಿದ್ದರಾಮಯ್ಯ ಸರಕಾರ ನಿಲ್ಲಿಸಿದೆ. ಯಾವುದೇ ಜಾತಿ ಧರ್ಮದವರಿಗೂ ಅನುಕೂಲವಾಗುವಂತೆ ಬಡ ಕುಟುಂಬದ ಮಕ್ಕಳಿಗೆ ಶಿಕ್ಷಣದ ಪ್ರೋತ್ಸಾಹಧನವಾಗಿ ವಿದ್ಯಾನಿಧಿ ಯೋಜನೆ ಜಾರಿಗೆ ತಂದಿದ್ದೆವು. ಕಾಂಗ್ರೆಸ್ ಬಂದ ಮೇಲೆ ಅದನ್ನೂ ನಿಲ್ಲಿಸಿದರು.
ಈ ಹಿಂದೆ ರಾಜ್ಯ ಸರಕಾರ ಕೊಡುತ್ತಿದ್ದ ಎಲ್ಲವನ್ನು ಸಹಾಯಧನಗಳನ್ನು ಒಟ್ಟು ಸೇರಿಸಿದರೆ ಒಂದು ಕುಟುಂಬಕ್ಕೆ ಪ್ರತಿ ತಿಂಗಳೂ 4-5 ಸಾವಿರ ಪ್ರೋತ್ಸಾಹಧನ ಸಿಗುತ್ತಿತ್ತು. ಆದರೆ ಇಂದು ಅದನ್ನು ಸಂಪೂರ್ಣ ನಿಲ್ಲಿಸಿ ಕೇವಲ 2,000 ರೂ ಕೊಟ್ಟಿದ್ದನ್ನೇ ದೊಡ್ಡ ಗ್ಯಾರಂಟಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಂಬಿಸಿಕೊಳ್ಳುತ್ತಿದ್ದಾರೆ. ಐದು ಗ್ಯಾರಂಟಿ ಕೊಟ್ಟಿದ್ದೇನೆ ಎಂದು ಭಾಷಣ ಮಾಡುತ್ತಾರೆ. ವಾಸ್ತವ ನೋಡಿದರೆ, ಸಿದ್ದರಾಮಯ್ಯ ಸರಕಾರದಿಂದ ಒಂದು ಕೆಜಿ ಅಕ್ಕಿಯನ್ನೂ ರಾಜ್ಯದ ಕಡೆಯಿಂದ ಕೊಡ್ತಾ ಇಲ್ಲ. ಪ್ರಧಾನಿ ಮೋದಿ ಅವರು ಕೇಂದ್ರ ಸರಕಾರದ ಖಾತೆಯಿಂದ ಕೊಡುವ ಅಕ್ಕಿಯನ್ನೇ ನಮ್ಮದೆಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಗ್ಯಾರಂಟಿಗಾಗಿ ಹಣ- 52,000 ಕೋಟಿ ರೂ ತೆರಿಗೆ ಹಣವನ್ನು ದುರ್ವಿನಿಯೋಗ ಮಾಡುತ್ತಿದ್ದಾರೆ ಎಂದು ಎಸ್.ಆರ್ ಪಾಟೀಲ್ ನಡಹಳ್ಳಿ ಆರೋಪಿಸಿದರು. ವಾಸ್ತವದಲ್ಲಿ ರೈತ ವಿರೋಧಿ ನೀತಿ ಅನುಸರಿಸುತ್ತ, ತನ್ನದು ರೈತಪರ ಸರಕಾರ ಎಂದು ಹೇಳಿಕೊಳ್ಳುವ ಟೋಪಿ ಸರಕಾರವಿದು ಎಂದು ನಡಹಳ್ಳಿ ವಾಗ್ದಾಳಿ ನಡೆಸಿದರು.
2013ರಲ್ಲಿ ಕರ್ನಾಟಕದ ಬಜೆಟ್- 1,16,000 ಕೋಟಿ ಗಾತ್ರದ್ದಾಗಿತ್ತು. ಇಂದು ಕರ್ನಾಟಕದ ಬಜೆಟ್ ಗಾತ್ರ 2,75000 ಕೋಟಿಗೆ ತಲುಪಿದೆ. ಈ ಪ್ರಗತಿಗೆ ನರೇಂದ್ರ ಮೋದಿಯವರ ಆರ್ಥಿಕ ನೀತಿ ಮತ್ತು ಯೋಜನೆಗಳು ಕಾರಣವಾಗಿವೆ. ಆದರೆ ಸಿದ್ದರಾಮಯ್ಯ ಸರಕಾರ ಕರ್ನಾಟಕದಲ್ಲಿ ಸಂಗ್ರಹವಾಗುವ ತೆರಿಗೆ ಹಂದಿಂದ ಕೊಟ್ಟಿದ್ದನ್ನೇ ಪುಕ್ಕಟೆ ಕೊಟ್ಟಿದ್ದೇವೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಅವರು ವಿವರಿಸಿದರು.
ಈ ಎಲ್ಲ ವಿಷಯಗಳನ್ನು ಬಿಜೆಪಿ ಕಾರ್ಯಕರ್ತರು ರೈತರ ಮನೆ ಮನೆಗೆ ತಲುಪಿಸಬೇಕು. ವಿಶೇಷವಾಗಿ ಮಂಗಳೂರು, ಉಡುಪಿ ಭಾಗದ ಪ್ರತಿಯೊಬ್ಬ ವ್ಯಕ್ತಿಗೂ ತಲುಪಿಸಬೇಕು ಎಂದು ನಡಹಳ್ಳಿ ಅವರು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ನವೀನ್ ಬಿ.ಸಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿಶೋರ್ ಕೊಟ್ಯಾಡಿ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಗಣೇಶ್, ಜಿಲ್ಲಾ ಕಾರ್ಯದರ್ಶಿ ಪೂರ್ಣಿಮಾ, ನಾಗರಾಜ ಮೂಡುಬಿದ್ರೆ, ರಾಧಾಕೃಷ್ಣ ಬೋರ್ಕರ್ ಪುತ್ತೂರು ಉಪಸ್ಥಿತರಿದ್ದರು.