ಮಂಗಳೂರು: "ನಮಗೆ ರಾಜಕೀಯಕ್ಕಿಂತ ಜನರ ಬದುಕು ಮುಖ್ಯ. ಹೀಗಾಗಿ ಯಾವುದೇ ಪಕ್ಷದ ನಾಯಕರು ಗಾಬರಿಯಾಗುವ ಅಗತ್ಯವಿಲ್ಲ" ಎಂದು ಡಿ. ಕೆ. ಶಿವಕುಮಾರ್ ತಿಳಿಸಿದ್ದಾರೆ.
ಮಂಗಳೂರಿನ ಸರ್ಕಿಟ್ ಹೌಸ್ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ತಮ್ಮ ಸರ್ಕಾರ ಎಂದಿಗೂ ಜನರ ಭಾವನೆಗಳ ಮೇಲೆ ರಾಜಕೀಯ ಮಾಡುವುದಿಲ್ಲ. "ನಾವು ಜನರ ಬದುಕನ್ನು ಕಟ್ಟಿಕೊಡುವ ನಿಟ್ಟಿನಲ್ಲಿ ರಾಜಕಾರಣ ಮಾಡುತ್ತೇವೆಯೇ ಹೊರತು, ಜನರ ಭಾವನೆಗಳನ್ನು ಬಳಸಿಕೊಳ್ಳುವುದಿಲ್ಲ. ಎಲ್ಲರ ಚಿಂತನೆ ಹಾಗೂ ಆಶಯಕ್ಕೆ ತಕ್ಕಂತೆ ನಮ್ಮ ಸರ್ಕಾರ ಕೆಲಸ ಮಾಡಲಿದೆ" ಎಂದು ಅವರು ಭರವಸೆ ನೀಡಿದರು.
ತಮ್ಮ ಮಂಗಳೂರು ಭೇಟಿಯ ಕುರಿತು ಮಾತನಾಡುತ್ತಾ, "ಮಹಾತ್ಮ ಗಾಂಧೀಜಿಯವರು ತಂಗಿದ್ದ ಐತಿಹಾಸಿಕ ಮನೆಗೆ ಭೇಟಿ ನೀಡಿ ಉಪಹಾರ ಸೇವಿಸಿದೆ. ಪ್ರಸಿದ್ಧ ಮಂಗಳೂರು ಬನ್ಸ್ ಮತ್ತು ದೋಸೆಯ ಸವಿ ಸವಿದಿದ್ದೇನೆ. ಜಿಲ್ಲಾ ಉಸ್ತುವಾರಿ ಸಚಿವರು ಎಲ್ಲಿಗೆ ಕರೆದುಕೊಂಡು ಹೋಗುತ್ತಾರೋ ಅಲ್ಲಿಗೆ ತೆರಳಿ ಜನರ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತೇನೆ" ಎಂದು ಹೇಳಿದರು.