ಮಂಗಳೂರು: ಕರಾವಳಿ ಭಾಗದ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವು ಪ್ರಮುಖ ಬೇಡಿಕೆಗಳನ್ನು ಈಗಾಗಲೇ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗಿದ್ದು, ಮುಂಬರುವ ಸಚಿವ ಸಂಪುಟ ಸಭೆಯಲ್ಲಿ ಇದಕ್ಕೆ ಸೂಕ್ತ ಸ್ಪಂದನೆ ದೊರೆಯಬೇಕು ಎಂದು ಸಂಸದ ಬ್ರಿಜೇಶ್ ಚೌಟ ಒತ್ತಾಯಿಸಿದ್ದಾರೆ.
ಕೊಂಕಣ್ ರೈಲ್ವೆಯನ್ನು ಸಂಪೂರ್ಣವಾಗಿ ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸಲು ರಾಜ್ಯ ಸರ್ಕಾರವು ತನ್ನ ಪಾಲಿನ ಷೇರುಗಳನ್ನು ಬಿಟ್ಟುಕೊಟ್ಟು ಮುಂಚೂಣಿ ವಹಿಸಬೇಕು ಎಂದು ಆಗ್ರಹಿಸಿರುವ ಅವರು, ಈ ನಿಟ್ಟಿನಲ್ಲಿ ಸಿಎಂ ಅವರಿಗೆ ಮನವಿ ಮಾಡಲಾಗಿದೆ ಎಂದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂದರುಗಳು, ಸಮುದ್ರ ಮೂಲಸೌಕರ್ಯ, ಕರಾವಳಿ ಆರ್ಥಿಕತೆ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿ ಚರ್ಚೆಗಳಲ್ಲಿ ಈ ಭಾಗದ ಸಂಸದರಿಗೆ ಕರ್ನಾಟಕ ರಾಜ್ಯ ಮೆರಿಟೈಮ್ ಬೋರ್ಡ್ ಮತ್ತು ವಿಶೇಷ ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ ಪ್ರಾಧಿಕಾರಗಳಲ್ಲಿ ಶಾಶ್ವತ ಆಹ್ವಾನಿತರಾಗಿ ಅಥವಾ ಸದಸ್ಯರಾಗಿ ಪ್ರಾತಿನಿಧ್ಯ ನೀಡಬೇಕು ಎಂದು ಕೋರಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯನ್ನು 'ಮಂಗಳೂರು ಜಿಲ್ಲೆ' ಎಂದು ಮರುನಾಮಕರಣ ಮಾಡಬೇಕೆಂಬ ಪ್ರಸ್ತಾವನೆಯನ್ನು ಸಂಪುಟ ಸಭೆಯಲ್ಲಿ ಪರಿಗಣಿಸಬೇಕು. ಅಲ್ಲದೆ, ಮಂಗಳೂರು-ಬೆಂಗಳೂರು ರಸ್ತೆ ಸಂಪರ್ಕ, ಶಿರಾಡಿ ಘಾಟ್ ಹಾಗೂ ಮಾರನಹಳ್ಳಿ-ಅಡ್ಡಹೊಳೆ ರಸ್ತೆ ವಿಭಾಗದ ಮೇಲ್ದರ್ಜೆಗೇರಿಸುವಿಕೆ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಲು ರಾಜ್ಯ ಸರ್ಕಾರವು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದೊಂದಿಗೆ ಸೂಕ್ತ ಸಮನ್ವಯ ಸಾಧಿಸಬೇಕು ಎಂದು ಅವರು ತಿಳಿಸಿದ್ದಾರೆ. ತುಳು ಭಾಷೆಗೆ ಕರ್ನಾಟಕದ ಅಧಿಕೃತ ಭಾಷಾ ಮಾನ್ಯತೆ ದೊರೆಯಬೇಕು ಹಾಗೂ ಕಸ್ತೂರಿರಂಗನ್ ವರದಿ ಹಾಗೂ ಅರಣ್ಯ-ಕಂದಾಯ ಭೂಮಿಯ ಸ್ಪಷ್ಟ ಗಡಿ ಗುರುತಿಸುವಿಕೆ ಕುರಿತಂತೆ ಸಚಿವ ಸಂಪುಟದಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳುವ ಅಗತ್ಯವಿದೆ ಎಂದು ಅವರು ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಪ್ರಮುಖ ಮುಖಂಡರಾದ ಪ್ರೇಮಾನಂದ ಶೆಟ್ಟಿ, ರಾಜ್ ಗೋಪಾಲ್ ರೈ, ಕದ್ರಿ ಮನೋಹರ ಶೆಟ್ಟಿ, ಸಂಧ್ಯಾ ವೆಂಕಟೇಶ್, ವಸಂತ ಪೂಜಾರಿ, ರಮೇಶ್ ಕಂಡೆಟ್ಟು, ಯತೀಶ್ ಆರ್ವರ್, ನಂದನ್ ಮಲ್ಯ ಹಾಗೂ ಕವಿತಾ ಸನಿಲ್ ಉಪಸ್ಥಿತರಿದ್ದರು.