image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಜೆಪಿಗೆ ಒಟ್ಟು ಮುನ್ನಡೆ, ಝಾಲಾವಾರ್ ಹಾಗೂ ಬಾರಾನ್‌ನಲ್ಲಿ ಕಾಂಗ್ರೆಸ್‌, ಎಎಪಿಗೆ ಅಚ್ಚರಿಯ ಜಯ

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಜೆಪಿಗೆ ಒಟ್ಟು ಮುನ್ನಡೆ, ಝಾಲಾವಾರ್ ಹಾಗೂ ಬಾರಾನ್‌ನಲ್ಲಿ ಕಾಂಗ್ರೆಸ್‌, ಎಎಪಿಗೆ ಅಚ್ಚರಿಯ ಜಯ

ರಾಜಸ್ಥಾನ : ರಾಜಸ್ಥಾನದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಆಡಳಿತಾರೂಢ ಬಿಜೆಪಿ ಪಕ್ಷವು ಕಾಂಗ್ರೆಸ್‌ಗಿಂತ ಸ್ಪಷ್ಟ ಮುನ್ನಡೆ ಸಾಧಿಸಿದೆ. ಒಟ್ಟು ಮತ ಎಣಿಕೆ ನಡೆದ 10,244 ವಾರ್ಡ್‌ಗಳ ಪೈಕಿ 10,204 ವಾರ್ಡ್‌ಗಳ ಫಲಿತಾಂಶ ಪ್ರಕಟವಾಗಿದ್ದು, ಬಿಜೆಪಿ 4,179 ವಾರ್ಡ್‌ಗಳಲ್ಲಿ ಗೆಲುವು ಸಾಧಿಸಿದರೆ, ವಿರೋಧ ಪಕ್ಷವಾದ ಕಾಂಗ್ರೆಸ್ 3,613 ವಾರ್ಡ್‌ಗಳನ್ನು ತನ್ನದಾಗಿಸಿಕೊಂಡಿದೆ. ರಾಜ್ಯದ 10 ಮಹಾನಗರ ಪಾಲಿಕೆಗಳ ಪೈಕಿ ನಾಲ್ಕರಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆದುಕೊಂಡಿದೆ. ಇನ್ನುಳಿದಂತೆ ಪಕ್ಷೇತರ ಅಭ್ಯರ್ಥಿಗಳು 2,273 ವಾರ್ಡ್‌ಗಳಲ್ಲಿ ಗೆದ್ದು ಪ್ರಮುಖ ಶಕ್ತಿಯಾಗಿ ಹೊರಹೊಮ್ಮಿದ್ದಾರೆ. ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷ (ಆರ್‌ಎಲ್‌ಪಿ) 63, ಆಮ್ ಆದ್ಮಿ ಪಕ್ಷ (ಎಎಪಿ) 42, ಸಿಪಿಐ(ಎಂ) 38, ಬಿಎಸ್‌ಪಿ 19 ಹಾಗೂ ಭಾರತ್ ಆದಿವಾಸಿ ಪಕ್ಷ 8 ವಾರ್ಡ್‌ಗಳಲ್ಲಿ ಜಯಗಳಿಸಿವೆ.

ಈ ಚುನಾವಣೆಯಲ್ಲಿ ಹಲವು ಅಚ್ಚರಿಯ ಫಲಿತಾಂಶಗಳು ದಾಖಲಾಗಿವೆ. ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಅವರ ಭದ್ರಕೋಟೆ ಎಂದೇ ಪರಿಗಣಿಸಲ್ಪಟ್ಟಿದ್ದ ಝಾಲಾವಾರ್ ನಗರ ಪರಿಷತ್‌ನ 45 ಸ್ಥಾನಗಳ ಪೈಕಿ ಕಾಂಗ್ರೆಸ್ 29 ಸ್ಥಾನಗಳನ್ನು ಗೆದ್ದು ಭರ್ಜರಿ ಜಯ ಸಾಧಿಸಿದ್ದರೆ, ಬಿಜೆಪಿ 13 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ. ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಅವರ ಕ್ಷೇತ್ರವಾದ ಟೋಂಕ್‌ನಲ್ಲಿ ಕಾಂಗ್ರೆಸ್ 60 ವಾರ್ಡ್‌ಗಳ ಪೈಕಿ 32 ಸ್ಥಾನಗಳನ್ನು ಗೆದ್ದು ಆಡಳಿತ ಹಿಡಿದಿದೆ. ಜೊತೆಗೆ ಬಿಕಾನೇರ್ ಮಹಾನಗರ ಪಾಲಿಕೆಯಲ್ಲೂ ಕಾಂಗ್ರೆಸ್ ಬಹುಮತ ಗಳಿಸಿದೆ. ಮತ್ತೊಂದೆಡೆ ಬಾರಾನ್‌ನಲ್ಲಿ ಆಮ್ ಆದ್ಮಿ ಪಕ್ಷವು 60 ಸ್ಥಾನಗಳಲ್ಲಿ 31 ಸ್ಥಾನಗಳನ್ನು ಪಡೆಯುವ ಮೂಲಕ ಸ್ಪಷ್ಟ ಬಹುಮತ ಸಾಧಿಸಿ ಎಲ್ಲರ ಗಮನ ಸೆಳೆದಿದೆ.

ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ ಅವರ ತವರು ಕ್ಷೇತ್ರವಾದ ಭರತ್‌ಪುರ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಹಿನ್ನಡೆಯಾಗಿದ್ದು, ಪಕ್ಷೇತರರು 65 ವಾರ್ಡ್‌ಗಳ ಪೈಕಿ 36ರಲ್ಲಿ ಗೆದ್ದು ಪ್ರಾಬಲ್ಯ ಮೆರೆದಿದ್ದಾರೆ. ಇಲ್ಲಿ ಬಿಜೆಪಿ 20 ಮತ್ತು ಕಾಂಗ್ರೆಸ್ 7 ಸ್ಥಾನಗಳನ್ನಷ್ಟೇ ಗಳಿಸಿವೆ. ಯಾವುದೇ ಪಕ್ಷಕ್ಕೆ ಬಹುಮತವಿಲ್ಲದ ಕಾರಣ ಮೇಯರ್ ಆಯ್ಕೆಯಲ್ಲಿ ಪಕ್ಷೇತರರೇ ನಿರ್ಣಾಯಕರಾಗಲಿದ್ದಾರೆ. ಇದೇ ವೇಳೆ ಜೋಧ್‌ಪುರದಲ್ಲಿ ಕುತೂಹಲಕಾರಿ ಚಿತ್ರಣ ಕಂಡುಬಂದಿದ್ದು, ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಸ್ವಂತ ವಾರ್ಡ್‌ನಲ್ಲಿ ಬಿಜೆಪಿ ಗೆಲುವು ಸಾಧಿಸಿದರೆ, ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರ ಸ್ವಂತ ವಾರ್ಡ್‌ನಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ.

ಮತ ಎಣಿಕೆ ಪ್ರಕ್ರಿಯೆಯಲ್ಲಿ ಎಲೆಕ್ಟ್ರಾನಿಕ್ ಮತಯಂತ್ರಗಳ (ಇವಿಎಂ) ತಾಂತ್ರಿಕ ದೋಷಗಳು ಎದುರಾದ ಹಿನ್ನೆಲೆಯಲ್ಲಿ ಜೋಧ್‌ಪುರ, ಕೋಟಾ ಮತ್ತು ಜೈಪುರ ಮಹಾನಗರ ಪಾಲಿಕೆಗಳು ಹಾಗೂ ಸುಕೇತ್ ಪುರಸಭೆಯ ಮೇಯರ್ ಮತ್ತು ಉಪ ಮೇಯರ್ ಚುನಾವಣೆಗಳನ್ನು ರಾಜ್ಯ ಚುನಾವಣಾ ಆಯೋಗವು ಸದ್ಯಕ್ಕೆ ಮುಂದೂಡಿದೆ.

Category
ಕರಾವಳಿ ತರಂಗಿಣಿ