image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

​ಮಲೇಷ್ಯಾ ಪ್ರಧಾನಿ ಜೊತೆ ರಾಹುಲ್-ಪ್ರಿಯಾಂಕಾ ಉಪಹಾರ ಸಭೆ: ರಾಜಕೀಯ ವಲಯದಲ್ಲಿ ತೀವ್ರ ಚರ್ಚೆ

​ಮಲೇಷ್ಯಾ ಪ್ರಧಾನಿ ಜೊತೆ ರಾಹುಲ್-ಪ್ರಿಯಾಂಕಾ ಉಪಹಾರ ಸಭೆ: ರಾಜಕೀಯ ವಲಯದಲ್ಲಿ ತೀವ್ರ ಚರ್ಚೆ

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆಯುತ್ತಿರುವ ಬ್ರಿಕ್ಸ್ ಶೃಂಗಸಭೆಯ ನಡುವೆಯೇ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಅವರನ್ನು ಭಾನುವಾರ ಬೆಳಗಿನ ಉಪಹಾರಕೂಟದಲ್ಲಿ ಭೇಟಿಯಾಗಿದ್ದಾರೆ. ಈ ಸೌಹಾರ್ದಯುತ ಸಭೆಯಲ್ಲಿ ಭಾರತ ಹಾಗೂ ಮಲೇಷ್ಯಾ ನಡುವಿನ ಬಾಂಧವ್ಯ, ಪ್ರಾದೇಶಿಕ ಹಾಗೂ ಜಾಗತಿಕ ವಿದ್ಯಮಾನಗಳು ಮತ್ತು ದ್ವಿಪಕ್ಷೀಯ ಸಂಬಂಧಗಳ ವೃದ್ಧಿಯ ಕುರಿತು ಪ್ರಮುಖವಾಗಿ ಚರ್ಚಿಸಲಾಯಿತು.  

​ಈ ಭೇಟಿಯ ಚಿತ್ರಗಳನ್ನು ಕಾಂಗ್ರೆಸ್ ಪಕ್ಷವು ತನ್ನ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ. ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಅವರು ಸಹ ರಾಹುಲ್ ಗಾಂಧಿ ಅವರನ್ನು ತಮ್ಮ 'ಆತ್ಮೀಯ ಸ್ನೇಹಿತ' ಎಂದು ಬಣ್ಣಿಸಿ, ಪ್ರಸ್ತುತ ಅಂತಾರಾಷ್ಟ್ರೀಯ ವಿದ್ಯಮಾನಗಳ ಕುರಿತು ವಿಚಾರ ವಿನಿಮಯ ಮಾಡಿಕೊಂಡಿದ್ದಾಗಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

​ಕಾಂಗ್ರೆಸ್ ನಾಯಕರ ಭೇಟಿಗೂ ಒಂದು ದಿನ ಮುಂಚಿತವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಲೇಷ್ಯಾ ಪ್ರಧಾನಿಯವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದರು. ಆ ಭೇಟಿಯ ವೇಳೆ ವ್ಯಾಪಾರ, ಸೆಮಿಕಂಡಕ್ಟರ್, ಮೂಲಸೌಕರ್ಯ ಮತ್ತು ರಕ್ಷಣಾ ವಲಯಗಳಲ್ಲಿ ಉಭಯ ದೇಶಗಳ ಸಹಕಾರವನ್ನು ಹೆಚ್ಚಿಸುವ ಕುರಿತು ಮಹತ್ವದ ಚರ್ಚೆಗಳು ನಡೆದಿದ್ದವು. ಆಸಿಯಾನ್ ವಲಯದ ಜೊತೆಗೆ ಬ್ರಿಕ್ಸ್ ಒಕ್ಕೂಟದಲ್ಲೂ ಮಲೇಷ್ಯಾ ಭಾರತಕ್ಕೆ ಪ್ರಮುಖ ಸಹಭಾಗಿ ರಾಷ್ಟ್ರವಾಗಿ ಕಾರ್ಯನಿರ್ವಹಿಸುತ್ತಿದೆ.  

​ಆದರೆ, ಶೃಂಗಸಭೆಯ ಮಾತುಕತೆಯ ವೇಳೆ ಪಾಕಿಸ್ತಾನ ಹಾಗೂ ಭಯೋತ್ಪಾದನೆಯ ವಿಚಾರದಲ್ಲಿ ಮಲೇಷ್ಯಾ ಪ್ರಧಾನಿ ನೀಡಿರುವ ಹೇಳಿಕೆ ರಾಜಕೀಯ ಹಾಗೂ ರಾಜತಾಂತ್ರಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಭಾರತದಲ್ಲಿ ಭಯೋತ್ಪಾದಕ ಕೃತ್ಯಗಳು ನಡೆದಿರುವುದನ್ನು ತಾವು ನಿರಾಕರಿಸುವುದಿಲ್ಲ ಎಂದಿದ್ದ ಇಬ್ರಾಹಿಂ, ತಮ್ಮ ದೇಶದ ಗೂಢಚಾರಿ ಸಂಸ್ಥೆಗಳಿಂದ ಸ್ಪಷ್ಟ ವರದಿ ಇಲ್ಲದೆ ಆಧಾರರಹಿತವಾಗಿ ಪಾಕಿಸ್ತಾನವನ್ನು ಭಯೋತ್ಪಾದನಾ ದೇಶ ಎಂದು ಘೋಷಿಸಲು ಸಾಧ್ಯವಿಲ್ಲ ಎಂದು ಸಮಜಾಯಿಷಿ ನೀಡಿದ್ದರು. ಈ ಬೆನ್ನಲ್ಲೇ ಭಾರತದ ಪ್ರತಿಪಕ್ಷದ ನಾಯಕರು ಮಲೇಷ್ಯಾ ಪ್ರಧಾನಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವುದು ರಾಜಕೀಯ ವಲಯದಲ್ಲಿ ತೀವ್ರ ಗಮನ ಸೆಳೆದಿದೆ.

Category
ಕರಾವಳಿ ತರಂಗಿಣಿ