image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ವಿಜಯೇಂದ್ರ ಬದಲಾಗದಿದ್ದರೆ ಬಿಜೆಪಿ ಉದ್ದಾರವಿಲ್ಲ : ಶಾಸಕ ಯತ್ನಾಳ್ ತೀವ್ರ ವಾಗ್ದಾಳಿ

ವಿಜಯೇಂದ್ರ ಬದಲಾಗದಿದ್ದರೆ ಬಿಜೆಪಿ ಉದ್ದಾರವಿಲ್ಲ : ಶಾಸಕ ಯತ್ನಾಳ್ ತೀವ್ರ ವಾಗ್ದಾಳಿ

ಬಾಗಲಕೋಟೆ: ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷ ಉದ್ದಾರವಾಗಬೇಕಾದರೆ ತಕ್ಷಣವೇ ರಾಜ್ಯಾಧ್ಯಕ್ಷರ ಬದಲಾವಣೆಯಾಗಬೇಕು. ಪ್ರಸ್ತುತ ರಾಜ್ಯಾಧ್ಯಕ್ಷರ ಅವಧಿ ನವೆಂಬರ್ ಅಂತ್ಯಕ್ಕೆ ಮುಕ್ತಾಯಗೊಳ್ಳಲಿದ್ದು, ಇಂತಹ ಅಸಫಲ ನಾಯಕರನ್ನು ಮುಂದುವರಿಸಿದರೆ ಪಕ್ಷ ಉಳಿಯುವುದಿಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬಾಗಲಕೋಟೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯಾಧ್ಯಕ್ಷರ ಬದಲಾವಣೆಯಾದರೆ ತಮಗೆ ಬಿಜೆಪಿಯಲ್ಲಿ ಸಕ್ರಿಯರಾಗುವ ಸಮಯ ಬರಲಿದ್ದು, ಈ ವಿಷಯದ ಕುರಿತು ಇನ್ನೆರಡು ತಿಂಗಳ ಬಳಿಕ ಸೂಕ್ತವಾಗಿ ಮಾತನಾಡುವುದಾಗಿ ಹೇಳಿದರು.

ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸದ ಮೇಲಿನ ಇ.ಡಿ (ED) ದಾಳಿ ಪ್ರಸಂಗಕ್ಕೆ ಸಂಬಂಧಿಸಿದಂತೆ ಮಾತನಾಡಿದ ಯತ್ನಾಳ್, ಈ ದಾಳಿಯನ್ನು ಕಾಂಗ್ರೆಸ್ ಪಕ್ಷದವರೇ ಮಾಡಿಸಿದ್ದು, ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಶಾಪವೇ ಕಾರಣ ಎಂದರು. ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದರೆ ತಮ್ಮ ಅಭ್ಯಂತರವಿಲ್ಲ ಎಂದು ಕಾಂಗ್ರೆಸ್‌ನ ಎಂ.ಬಿ. ಪಾಟೀಲ್, ಜಮೀರ್ ಅಹಮದ್ ಹಾಗೂ ಸತೀಶ್ ಜಾರಕಿಹೊಳಿ ಹೇಳಿದ್ದರು. ಈ ಕುರಿತು ಸತೀಶ್ ಜಾರಕಿಹೊಳಿ ಅವರು 36 ಶಾಸಕರ ಸಹಿಯನ್ನೂ ಮಾಡಿಸಿಕೊಟ್ಟಿದ್ದರು. ವಾಲ್ಮೀಕಿ ಸಮುದಾಯದಲ್ಲಿ ಸತೀಶ್ ಜಾರಕಿಹೊಳಿ ಅವರು ಉತ್ತಮ ನಾಯಕನಾಗಿ ಬೆಳೆಯುತ್ತಿದ್ದಾರೆ ಎನ್ನುವ ಕಾರಣಕ್ಕೆ ಕಾಂಗ್ರೆಸ್‌ನಲ್ಲೇ ಅವರ ವಿರುದ್ಧ ದ್ವೇಷ ಸಾಧಿಸಲಾಗುತ್ತಿದೆ ಹೊರತು, ಬಿಜೆಪಿಯಲ್ಲಿ ಇಂತಹ ಕೆಲಸಗಳನ್ನು ಮಾಡುವವರು ಯಾರೂ ಇಲ್ಲ ಎಂದು ಹೇಳಿದರು.

ಇದೇ ವೇಳೆ, ಕೆಪಿಎಸ್‌ಸಿ ಹಗರಣದ ಹಣದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೂ ಪಾಲು ಹೋಗಿದ್ದು, ಅದೇ ಹಣದಿಂದ ಅವರು ಬಳ್ಳಾರಿಯಲ್ಲಿ ಪಾದಯಾತ್ರೆ ನಡೆಸಿದ್ದಾರೆ ಎಂದು ಯತ್ನಾಳ್ ಗಂಭೀರ ಆರೋಪ ಮಾಡಿದರು. ವಾಲ್ಮೀಕಿ ಅಭಿವೃದ್ಧಿ ನಿಗಮದ ಪ್ರಕರಣದಲ್ಲಿ ಮಾಜಿ ಸಚಿವ ಬಿ. ನಾಗೇಂದ್ರ ಅವರು ರಾಜೀನಾಮೆ ನೀಡಿದ ಬಳಿಕ ಪಾದಯಾತ್ರೆ ಮಾಡುವ ಯಾವುದೇ ಅವಶ್ಯಕತೆ ಇರಲಿಲ್ಲ. ವಿಜಯೇಂದ್ರ ಅವರು ಸಂಪೂರ್ಣವಾಗಿ 'ಜೀರೋ' ಆಗಿದ್ದು, ಹೈಕಮಾಂಡ್ ತಮ್ಮನ್ನು ಹುದ್ದೆಯಿಂದ ಬದಲಾಯಿಸಲಿದೆ ಎಂಬ ಭೀತಿಯಿಂದ ಹೈಕಮಾಂಡ್ ಗಮನ ಸೆಳೆಯಲು ಈ ಪಾದಯಾತ್ರೆ ಮಾಡಿದ್ದಾರೆ. ಅಲ್ಲೂ ತಮ್ಮ ಫೋಟೋ ಬರಬೇಕು ಎನ್ನುವ ಕಾರಣಕ್ಕೆ ಹೊಸ ಬಟ್ಟೆ ಧರಿಸಿ ಹೊಲದಲ್ಲಿ ನಾಟಿ ಮಾಡುವ ನಾಟಕ ಮಾಡಿದ್ದಾರೆ. ಬಿ.ವೈ. ವಿಜಯೇಂದ್ರ ತಮ್ಮ ಜೀವನದಲ್ಲಿ ಒಂದು ದಿನವಾದರೂ ಹೊಲಕ್ಕೆ ಹೋಗಿದ್ದಾರೆಯೇ ಎಂದು ಪ್ರಶ್ನಿಸಿ ಯತ್ನಾಳ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

Category
ಕರಾವಳಿ ತರಂಗಿಣಿ