image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

₹1,281 ಕೋಟಿ ವೆಚ್ಚದ ನೀರಾವರಿ ಯೋಜನೆ ಬಿಜೆಪಿ ಸರ್ಕಾರದ ಕೊಡುಗೆ: ಬೆಳವಾಡಿ ಕೆರೆಗೆ ಬಾಗಿನ ಅರ್ಪಿಸಿ ಡಾ. ಸಿ.ಟಿ. ರವಿ ಪ್ರತಿಪಾದನೆ

₹1,281 ಕೋಟಿ ವೆಚ್ಚದ ನೀರಾವರಿ ಯೋಜನೆ ಬಿಜೆಪಿ ಸರ್ಕಾರದ ಕೊಡುಗೆ: ಬೆಳವಾಡಿ ಕೆರೆಗೆ ಬಾಗಿನ ಅರ್ಪಿಸಿ ಡಾ. ಸಿ.ಟಿ. ರವಿ ಪ್ರತಿಪಾದನೆ

ಚಿಕ್ಕಮಗಳೂರು: ಬೆಳವಾಡಿಯ ಉದ್ಭವ ಗಣಪತಿ ಹಾಗೂ ವಿಘ್ನೇಶ್ವರನಿಗೆ ನಮಿಸಿ, ಬೆಳವಾಡಿ ಕೆರೆಗೆ ಬಾಗಿನ ಸಮರ್ಪಿಸಿದ ಬಳಿಕ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಡಾ. ಸಿ.ಟಿ. ರವಿ, ಕ್ಷೇತ್ರಕ್ಕೆ ಮಂಜೂರಾಗಿರುವ ₹1,281 ಕೋಟಿ ವೆಚ್ಚದ ಬೃಹತ್ ನೀರಾವರಿ ಯೋಜನೆಯು ಬಿಜೆಪಿ ಸರ್ಕಾರದ ಅವಧಿಯಲ್ಲೇ ಸಾಕಾರಗೊಂಡಿದೆ ಎಂದು ತಿಳಿಸಿದ್ದಾರೆ.

ಭಾರತೀಯ ಪರಂಪರೆಯಂತೆ ಜೀವಜಲದ ಪ್ರತೀಕವಾದ ಗಂಗಾಮಾತೆಗೆ ಕೃತಜ್ಞತೆ ಸಲ್ಲಿಸುವುದು ನಮ್ಮ ಸಂಸ್ಕೃತಿಯ ಭಾಗ ಎಂದ ಅವರು, ಧಾರ್ಮಿಕ ಕಾರ್ಯಕ್ರಮಗಳಲ್ಲಿ ರಾಜಕೀಯ ಮಾತನಾಡುವುದು ತಮ್ಮ ಉದ್ದೇಶವಲ್ಲದಿದ್ದರೂ, ಸತ್ಯ ಮೌನವಾಗಿದ್ದಾಗ ಸುಳ್ಳುಗಳು ಮೆರೆದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಹೀಗಾಗಿ ಸೂಕ್ತ ಸಮಯದಲ್ಲಿ ಸತ್ಯವನ್ನು ಜನರ ಮುಂದಿಡುವುದು ಕರ್ತವ್ಯ ಎಂದರು. ತಮ್ಮ 20 ವರ್ಷಗಳ ಶಾಸಕತ್ವದ ಅವಧಿಯಲ್ಲಿ ರಸ್ತೆಗಳ ಕಾಂಕ್ರೀಟೀಕರಣ, ಅಗಲೀಕರಣ, ಅಂಬೇಡ್ಕರ್ ಭವನ ಹಾಗೂ ವಿವಿಧ ದೇವಾಲಯಗಳ ಜೀರ್ಣೋದ್ಧಾರ ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ ಎಂದು ಸ್ಮರಿಸಿದರು.

ಆರಂಭದಲ್ಲಿ ಕರಗಡ ಯೋಜನೆಯಿಂದ ಗುರುತ್ವಾಕರ್ಷಣೆ ಆಧಾರದಲ್ಲಿ ನೀರು ತರಲು ಯತ್ನಿಸಿ ವಿಫಲವಾದಾಗ, ಪಂಪ್‌ ಹಾಗೂ ಮೋಟರ್‌ಗಳನ್ನು ಬಳಸಿ ಗಾಳಿಹಳ್ಳಿ, ಈಶ್ವರಹಳ್ಳಿ, ಬೆಳವಾಡಿ ಸೇರಿದಂತೆ ಹಲವು ಕೆರೆಗಳಿಗೆ ನೀರು ತಲುಪಿಸಲಾಗಿತ್ತು. ಆದರೆ ಇದು ಶಾಶ್ವತ ಪರಿಹಾರವಲ್ಲದ ಕಾರಣ, ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕೋವಿಡ್‌ ಹಣಕಾಸಿನ ಸವಾಲಿನ ಮಧ್ಯೆಯೂ ತರೀಕೆರೆ, ಕಡೂರು ಮತ್ತು ಚಿಕ್ಕಮಗಳೂರು ತಾಲೂಕುಗಳ 245 ಕೆರೆಗಳಿಗೆ ಭದ್ರಾ ಉಪಜಲಾನಯನ ಪ್ರದೇಶದಿಂದ ನೀರು ತುಂಬಿಸುವ ₹1,281 ಕೋಟಿ ವೆಚ್ಚದ ಶಾಶ್ವತ ಯೋಜನೆಯನ್ನು ಮಂಜೂರು ಮಾಡಿಸಲಾಯಿತು. ಈ ಯೋಜನೆಗೆ 2020ರ ನವೆಂಬರ್‌ನಲ್ಲಿ ಅನುಮೋದನೆ ದೊರೆತಿದ್ದು, ನಾಲ್ಕು ಹಂತಗಳಲ್ಲಿ ಅನುದಾನ ಹಂಚಿಕೆಯಾಗಿದೆ. ಪ್ರಸ್ತುತ ಮೂರನೇ ಹಂತದ ಕಾಮಗಾರಿಗಳು ಪ್ರಗತಿಯಲ್ಲಿವೆ. ಇದರ ಜೊತೆಗೆ, ₹125.46 ಕೋಟಿ ವೆಚ್ಚದ ರಣಘಟ್ಟ ಯೋಜನೆಯಲ್ಲೂ ಬೆಳವಾಡಿ ಕೆರೆಯನ್ನು ಸೇರ್ಪಡೆಗೊಳಿಸಿ ಆಡಳಿತಾತ್ಮಕ ಅನುಮೋದನೆ ಕೊಡಿಸಲಾಗಿದೆ ಎಂದು ವಿವರಿಸಿದರು.

ತಾವು ಅಧಿಕಾರಕ್ಕಾಗಿ ಬಂದವನಲ್ಲ, ಸಿದ್ಧಾಂತಕ್ಕೆ ಬದ್ಧರಾಗಿ ರಾಜಕಾರಣ ಮಾಡುತ್ತಿರುವವನು. ಬಿಜೆಪಿಯಲ್ಲೇ ಹುಟ್ಟಿ ಬಿಜೆಪಿಯಲ್ಲೇ ಸಾಯುವುದಾಗಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ ಡಾ. ರವಿ, ರಾಜ್ಯದಲ್ಲಿ ಕಳೆದ ಆರೇಳು ತಿಂಗಳಿಂದ ಪಿಂಚಣಿ ತಡೆಹಿಡಿಯಲಾಗಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಹಬ್ಬದ ಮುನ್ನವೇ ಬಾಕಿ ಪಿಂಚಣಿ ಬಿಡುಗಡೆ ಮಾಡಬೇಕು, ಗ್ರಾಮೀಣ ಭಾಗದ ತ್ರಿಫೇಸ್ ವಿದ್ಯುತ್ ಅಭಾವ, ಬಿಪಿಎಲ್ ಕಾರ್ಡ್ ಮತ್ತು ಅಕ್ಕಿ ಸರಬರಾಜು ಸಮಸ್ಯೆಗಳನ್ನು ಸರ್ಕಾರ ಕೂಡಲೇ ಪರಿಹರಿಸಬೇಕು. ಜನರು ಸಂಕಷ್ಟದಲ್ಲಿರುವಾಗ ಸರ್ಕಾರ ಜಾಹೀರಾತು ಹಾಗೂ ಸಂಭ್ರಮಾಚರಣೆಗೆ ಒತ್ತು ನೀಡಬಾರದು ಎಂದು ಎಚ್ಚರಿಸಿದರು.

Category
ಕರಾವಳಿ ತರಂಗಿಣಿ