ಬೆಂಗಳೂರು: ಮಂಗಳೂರಿನಲ್ಲಿ ಸೆಪ್ಟೆಂಬರ್ 18ರಂದು ನಡೆಯಲಿರುವ ರಾಜ್ಯ ಸಚಿವ ಸಂಪುಟ ಸಭೆಯ ಹಿನ್ನೆಲೆಯಲ್ಲಿ, ಕರಾವಳಿ ಭಾಗದ ಸಮಗ್ರ ಮೂಲಸೌಕರ್ಯ ಅಭಿವೃದ್ಧಿ ಹಾಗೂ ದೀರ್ಘಕಾಲದ ಬೇಡಿಕೆಗಳನ್ನು ಈಡೇರಿಸುವಂತೆ ವಿಧಾನ ಪರಿಷತ್ ಶಾಸಕ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಸುದೀರ್ಘ ಮನವಿ ಪತ್ರ ಸಲ್ಲಿಸಿದ್ದಾರೆ.
ಕರಾವಳಿ ಜಿಲ್ಲೆಗಳ ಆರ್ಥಿಕತೆ, ಮೀನುಗಾರಿಕೆ, ಪ್ರವಾಸೋದ್ಯಮ, ಉನ್ನತ ಶಿಕ್ಷಣ ಮತ್ತು ಸಂಸ್ಕೃತಿಯ ರಕ್ಷಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ₹5,000 ಕೋಟಿ ಮೊತ್ತದ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಣೆ ಸೇರಿದಂತೆ ಹಲವು ಮಹತ್ವದ ಯೋಜನೆಗಳನ್ನು ಸಂಪುಟ ಸಭೆಯ ಕಾರ್ಯಸೂಚಿಯಲ್ಲಿ ಸೇರಿಸುವಂತೆ ಅವರು ಕೋರಿದ್ದಾರೆ. ಶಾಸಕರ ಮನವಿಗೆ ಸ್ಪಂದಿಸಿರುವ ಮುಖ್ಯಮಂತ್ರಿಗಳು, ಪತ್ರದಲ್ಲಿನ ಪ್ರಮುಖ ಅಂಶಗಳನ್ನು ಪರಿಶೀಲಿಸಿ ಸಂಪುಟ ಅಜೆಂಡಾದಲ್ಲಿ ಸೇರ್ಪಡೆಗೊಳಿಸಲು ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಆದೇಶಿಸಿದ್ದಾರೆ.
ಯುವಜನರಿಗೆ ಸ್ಥಳೀಯ ಉದ್ಯೋಗ ಒದಗಿಸಲು ಸುಧಾರಿತ ಕೌಶಲ್ಯಾಭಿವೃದ್ಧಿ ಕೇಂದ್ರ ಸ್ಥಾಪನೆ, ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ ಹಾಗೂ ರೈತರು-ಮೀನುಗಾರರ ಸಬಲೀಕರಣಕ್ಕೆ ಪೂರಕವಾದ ಯೋಜನೆಗಳಿಗೆ ತಕ್ಷಣವೇ ಆಡಳಿತಾತ್ಮಕ ಅನುಮೋದನೆ ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ. ಬ್ರಹ್ಮಾವರ ಕೃಷಿ ಡಿಪ್ಲೋಮಾ ಕಾಲೇಜನ್ನು 'ಕೃಷಿ ವಿಶ್ವವಿದ್ಯಾಲಯ'ವಾಗಿ ಮೇಲ್ದರ್ಜೆಗೇರಿಸುವುದು, ಬೆಳಪು ಗ್ರಾಮದಲ್ಲಿ ನೂತನ 'ಭಾರತ್ ಜೋಡೋ ಕ್ರೀಡಾ ವಿಶ್ವವಿದ್ಯಾಲಯ' ಆರಂಭಿಸುವುದು ಮತ್ತು ಉಡುಪಿ ಜಿಲ್ಲಾ ಕ್ರೀಡಾಂಗಣದಲ್ಲಿ ₹7 ಕೋಟಿ ವೆಚ್ಚದ 'ದಿ. ಆಸ್ಕರ್ ಫೆರ್ನಾಂಡಿಸ್ ಕಬಡ್ಡಿ ಕ್ರೀಡಾಂಗಣ'ದ ಯೋಜನೆಗೆ ಸಂಪುಟದಲ್ಲಿ ಅನುಮೋದನೆ ಕೋರಲಾಗಿದೆ.
ಜೊತೆಗೆ, ಮಂಗಳೂರು ಮೀನುಗಾರಿಕೆ ಕಾಲೇಜನ್ನು ಪ್ರತ್ಯೇಕ 'ಮೀನುಗಾರಿಕಾ ವಿಶ್ವವಿದ್ಯಾಲಯ'ವಾಗಿ ಮೇಲ್ದರ್ಜೆಗೇರಿಸುವುದು, ಆಧುನಿಕ ಅಕ್ವಾಪಾರ್ಕ್ ಸ್ಥಾಪಿಸುವುದು, ಮೀನುಗಾರಿಕೆ ವೇಳೆ ಮೃತಪಟ್ಟವರ ಕುಟುಂಬದ ಪರಿಹಾರವನ್ನು ₹10 ಲಕ್ಷಕ್ಕೆ ಹೆಚ್ಚಿಸುವುದು ಮತ್ತು ಡೀಸೆಲ್ ಸಬ್ಸಿಡಿ ಮೊತ್ತವನ್ನು ಪರಿಷ್ಕರಿಸಲು ಮನವಿ ಮಾಡಲಾಗಿದೆ. ಕಾರವಾರದಿಂದ ಬೈಂದೂರಿನವರೆಗೆ ಪ್ರಮುಖ ಧಾರ್ಮಿಕ ಕ್ಷೇತ್ರಗಳನ್ನು ಬೆಸೆಯುವ 'ಕರಾವಳಿ ಟೆಂಪಲ್ ಟೂರಿಸಂ' ಕಾರಿಡಾರ್ ಅಭಿವೃದ್ಧಿ, ಸಮುದ್ರ ತೀರಕ್ಕೆ ಸಮಾನಾಂತರವಾಗಿ ಸುಸಜ್ಜಿತ ರಸ್ತೆ ನಿರ್ಮಾಣ, ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರಕ್ಕೆ ಜಮೀನು ಮಂಜೂರು ಹಾಗೂ 'ಅರ್ಬನ್ ಇಕೋ ಪಾರ್ಕ್' ಯೋಜನೆಗೆ ₹12.60 ಕೋಟಿ ಅನುದಾನ ಬಿಡುಗಡೆಗೊಳಿಸಲು ವಿನಂತಿಸಲಾಗಿದೆ. ಇದರೊಂದಿಗೆ ಯಕ್ಷಗಾನ, ಕಂಬಳ ಹಾಗೂ ವಿವಿಧ ಜನಪದ ಕಲೆಗಳ ಸಂರಕ್ಷಣೆಗಾಗಿ ವಾರ್ಷಿಕ ಕನಿಷ್ಠ ₹10 ಕೋಟಿ ವಿಶೇಷ ಅನುದಾನ ಒದಗಿಸುವಂತೆಯೂ ಪ್ರಮುಖವಾಗಿ ಒತ್ತಾಯಿಸಲಾಗಿದೆ.