ಬೆಂಗಳೂರು : ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರಿಗೆ ಕಾಂಗ್ರೆಸ್ ಪಕ್ಷದಲ್ಲಿ ಸೂಕ್ತ ಗೌರವ ಸಿಗುತ್ತಿಲ್ಲ ಎಂಬ ಅಸಮಾಧಾನದ ನಡುವೆಯೇ, ಈಗ ರಾಜ್ಯಮಟ್ಟದ ಪ್ರಮುಖ ಹುದ್ದೆಯಾದ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನವೂ ಕೈತಪ್ಪಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಬೆಂಬಲ ಹಾಗೂ ಪ್ರಯತ್ನದ ಹೊರತಾಗಿಯೂ, ಈ ಹುದ್ದೆ ಎಂಎಲ್‌ಸಿ ಎಸ್. ರವಿ ಅವರ ಪಾಲಾಗಿದೆ. ಇದರಿಂದಾಗಿ ರಾಜಣ್ಣ ಹಾಗೂ ಅವರ ಬೆಂಬಲಿಗರಲ್ಲಿ ತೀವ್ರ ನಿರಾಸೆ ಮತ್ತು ಆಕ್ರೋಶ ವ್ಯಕ್ತವಾಗಿದೆ.
ಈ ಘಟನೆಯ ಬೆನ್ನಲ್ಲೇ ರಾಜಣ್ಣ ಅವರ ಪುತ್ರ, ವಿಧಾನ ಪರಿಷತ್ ಸದಸ್ಯ (ಎಂಎಲ್‌ಸಿ) ಆರ್. ರಾಜೇಂದ್ರ ಅವರು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರನ್ನು ಭೇಟಿಯಾಗಿ ಸುದೀರ್ಘ ಚರ್ಚೆ ನಡೆಸಿರುವುದು ರಾಜ್ಯ ರಾಜಕೀಯ ವಲಯದಲ್ಲಿ ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಈ ಹಿಂದೆ ರಾಜೇಂದ್ರ ಅವರು ಬಿಜೆಪಿ ನಾಯಕ ಅಮಿತ್ ಶಾ ಅವರನ್ನೂ ಭೇಟಿಯಾಗಿದ್ದರು. ಮುಂಬರುವ વિધાનસભા ಚುನಾವಣೆಯಲ್ಲಿ ತಂದೆ ಮತ್ತು ಮಗ ಮಧುಗಿರಿ ಹಾಗೂ ಶಿರಾ ಕ್ಷೇತ್ರಗಳಿಂದ ಜೆಡಿಎಸ್ ಬೆಂಬಲದೊಂದಿಗೆ ಅಥವಾ ಮೈತ್ರಿ ಅಭ್ಯರ್ಥಿಗಳಾಗಿ ಕಣಕ್ಕಿಳಿಯಲು ಯೋಜನೆ ರೂಪಿಸುತ್ತಿದ್ದಾರೆ ಎಂಬ ಚರ್ಚೆಗಳು ರಾಜಕೀಯ ತೆರಮರೆಯಲ್ಲಿ ಗರಿಗೆದರಿವೆ.
ತಮ್ಮ ತಂದೆಗೆ ಆದ ಅನ್ಯಾಯದ ಕುರಿತು ಬಹಿರಂಗವಾಗಿಯೇ ಆಕ್ರೋಶ ಹೊರಹಾಕಿರುವ ಎಂಎಲ್‌ಸಿ ಆರ್. ರಾಜೇಂದ್ರ, "ಯಾವುದೇ ಬಲವಾದ ಕಾರಣವಿಲ್ಲದೆ ತಂದೆಯವರನ್ನು ಸಚಿವ ಸ್ಥಾನದಿಂದ ಕೈಬಿಡಲಾಗಿತ್ತು. ಸಿದ್ದರಾಮಯ್ಯನವರು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನ ಕೊಡಿಸಲು ಪ್ರಯತ್ನಿಸಿದರೂ ಪಕ್ಷದೊಳಗಿನ ಕೆಲವರ ಪಿತೂರಿ ಹಾಗೂ ಸ್ವಜನಪಕ್ಷಪಾತದಿಂದ ಆ ಹುದ್ದೆಯೂ ತಪ್ಪಿಹೋಯಿತು" ಎಂದು ಕಾಂಗ್ರೆಸ್ ನಾಯಕರ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದಾರೆ. ರಾಜಣ್ಣ ಅವರ ಹಳೆಯ ಗರಡಿಯಾದ ಜೆಡಿಎಸ್‌ಗೆ ಮತ್ತೆ ಮರಳುವ ಇಂಗಿತವನ್ನು ಈ ಬೆಳವಣಿಗೆಗಳು ಸೂಚಿಸುತ್ತಿದ್ದು, ತುಮಕೂರು ಜಿಲ್ಲೆಯ ಕಾಂಗ್ರೆಸ್ ರಾಜಕಾರಣದಲ್ಲಿ ದೊಡ್ಡ ಸಂಚಲನ ಮೂಡಿಸಿದೆ.