ಮಂಗಳೂರು : ಕರಾವಳಿಯ ಶೈಕ್ಷಣಿಕ ಕೇಂದ್ರ ಮಂಗಳೂರಿನ ಐತಿಹಾಸಿಕ ವಿಶ್ವವಿದ್ಯಾಲಯ ಕಾಲೇಜು ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಬೆಂಬಲಿತ ಅಭ್ಯರ್ಥಿಗಳು ಅಭೂತಪೂರ್ವ ಜಯಭೇರಿ ಬಾರಿಸಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರದ ಕೊನೆ ಕ್ಷಣದ ಆದೇಶ ಮತ್ತು ರಾಜಕೀಯ ಒತ್ತಡವನ್ನು ಮೆಟ್ಟಿ ನಿಂತು ಎಬಿವಿಪಿ ಈ ಗೆಲುವು ಸಾಧಿಸಿದ್ದು, ಪ್ರಸ್ತುತ ಈ ವಿದ್ಯಮಾನವು ರಾಜ್ಯ ರಾಜಕೀಯ ಹಾಗೂ ಶೈಕ್ಷಣಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಹಂಪನಕಟ್ಟೆಯಲ್ಲಿರುವ ಮಂಗಳೂರು ವಿವಿ ಕಾಲೇಜಿನಲ್ಲಿ ತರಗತಿ ಪ್ರತಿನಿಧಿಗಳು ಮತ ಚಲಾಯಿಸುವ 'ಪರೋಕ್ಷ ಮತದಾನ' ಪದ್ಧತಿಯಂತೆ ಚುನಾವಣೆ ನಡೆಸಲು ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿದ್ದವು. ಆದರೆ ಪರೋಕ್ಷ ಚುನಾವಣೆ ನಡೆದರೆ ಎಬಿವಿಪಿ ಗೆಲುವು ಸಾಧಿಸಲಿದೆ ಎಂಬ ಸುಳಿವು ಸಿಗುತ್ತಿದ್ದಂತೆ, ಆಡಳಿತಾರೂಢ ಸರ್ಕಾರ ಹಾಗೂ ಸಚಿವರು ಚುನಾವಣೆಯನ್ನು ಮುಂದೂಡಲು ತೀವ್ರ ಯತ್ನ ನಡೆಸಿದ್ದರೆನ್ನಲಾಗಿದೆ. ಇದರ ಭಾಗವಾಗಿ ರಾತ್ರೋರಾತ್ರಿ ನಿಯಮ ಬದಲಾಯಿಸಿ, ರಾಜ್ಯದ ಕಾಲೇಜುಗಳಲ್ಲಿ ಇನ್ಮುಂದೆ 'ನೇರ ಚುನಾವಣೆ' ಮಾತ್ರ ನಡೆಸಬೇಕೆಂದು ಸರ್ಕಾರ ತರಾತುರಿಯಲ್ಲಿ ಆದೇಶ ಹೊರಡಿಸಿತ್ತು.
ಸರ್ಕಾರದ ಈ ನೂತನ ಆದೇಶ ಹಾಗೂ ಸಚಿವರ ರಾಜಕೀಯ ಒತ್ತಡಕ್ಕೆ ಮಣಿಯದ ಕಾಲೇಜು ಆಡಳಿತ ಮಂಡಳಿಯು ಕಾನೂನುಬದ್ಧವಾಗಿ ಪ್ರಬಲ ವಾದ ಮಂಡಿಸಿತು. ಸೆಪ್ಟೆಂಬರ್ 10ರ ಸರ್ಕಾರಿ ಆದೇಶ ಹೊರಬೀಳುವ ಮೊದಲೇ ಚುನಾವಣಾ ವೇಳಾಪಟ್ಟಿ ಪ್ರಕಟವಾಗಿದ್ದರಿಂದ, ಒಮ್ಮೆ ಪ್ರಕ್ರಿಯೆ ಆರಂಭಗೊಂಡ ಮೇಲೆ ಹೊಸ ನಿಯಮಗಳನ್ನು ಮಧ್ಯದಲ್ಲಿ ಅನ್ವಯಿಸಲು ಬರುವುದಿಲ್ಲ ಎಂದು ಖಡಕ್ ಆಗಿ ಸ್ಪಷ್ಟಪಡಿಸಿತು. ಅಂತಿಮವಾಗಿ ವಿಶ್ವವಿದ್ಯಾಲಯವು ನಿಗದಿತ ವೇಳಾಪಟ್ಟಿಯಂತೆಯೇ ಪರೋಕ್ಷ ಮತದಾನ ಪ್ರಕ್ರಿಯೆಯನ್ನು ನಡೆಸಿಕೊಟ್ಟಿತು.
ಈ ರೋಚಕ ಚುನಾವಣೆಯಲ್ಲಿ ಎಬಿವಿಪಿ ಬೆಂಬಲಿತ ಪದಾಧಿಕಾರಿಗಳ ತಂಡವು ಭರ್ಜರಿ ಬಹುಮತದೊಂದಿಗೆ ಜಯಗಳಿಸಿತು. ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಹಂಪನಕಟ್ಟೆಯ ಕಾಲೇಜು ಆವರಣದಲ್ಲಿ ಎಬಿವಿಪಿ ಕಾರ್ಯಕರ್ತರು ಭಗವಾ ಧ್ವಜ ಹಿಡಿದು, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ವಿಜಯೋತ್ಸವ ಆಚರಿಸಿದರು. ತರಾತುರಿಯ ಆದೇಶದ ಮೂಲಕ ರಾಜಕೀಯ ಮಾಡಲು ಹೊರಟ ಕಾಂಗ್ರೆಸ್ ಸರ್ಕಾರಕ್ಕೆ ವಿದ್ಯಾರ್ಥಿ ಶಕ್ತಿ ತಕ್ಕ ಉತ್ತರ ನೀಡಿದೆ ಎಂದು ಎಬಿವಿಪಿ ನಾಯಕರು ಹರಿಹಾಯ್ದಿದ್ದು, ಈ ಬೆಳವಣಿಗೆಯು ರಾಜ್ಯ ಸರ್ಕಾರಕ್ಕೆ ತೀವ್ರ ಮುಜುಗರ ಉಂಟುಮಾಡಿದೆ.