image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಲಡಾಖ್‌ನಲ್ಲಿ ಪ್ರಜಾಸತ್ತಾತ್ಮಕ ಮಂಡಳಿ ರಚನೆಗೂ ಮುನ್ನ ನಿರ್ಧಾರ ಕೈಗೊಂಡರೆ ಬೃಹತ್ ಆಂದೋಲನ: ಕೇಂದ್ರಕ್ಕೆ ಸೋನಮ್ ವಾಂಗ್‌ಚುಕ್ ಎಚ್ಚರಿಕೆ

ಲಡಾಖ್‌ನಲ್ಲಿ ಪ್ರಜಾಸತ್ತಾತ್ಮಕ ಮಂಡಳಿ ರಚನೆಗೂ ಮುನ್ನ ನಿರ್ಧಾರ ಕೈಗೊಂಡರೆ ಬೃಹತ್ ಆಂದೋಲನ: ಕೇಂದ್ರಕ್ಕೆ ಸೋನಮ್ ವಾಂಗ್‌ಚುಕ್ ಎಚ್ಚರಿಕೆ

ಲಡಾಖ್ : ಕೇಂದ್ರ ಸರ್ಕಾರವು ಲಡಾಖ್‌ನಲ್ಲಿ ಪ್ರಜಾಸತ್ತಾತ್ಮಕವಾಗಿ ಚುನಾಯಿತ ಸರ್ಕಾರ ಅಥವಾ ಮಂಡಳಿಯನ್ನು ಅಸ್ತಿತ್ವಕ್ಕೆ ತರುವ ಮುನ್ನ ಯಾವುದೇ ಮಹತ್ವದ ನಿರ್ಧಾರಗಳನ್ನು ಕೈಗೊಂಡರೆ ಮತ್ತೆ ಬೀದಿಗಿಳಿದು ಬೃಹತ್ ಆಂದೋಲನ ಆರಂಭಿಸಬೇಕಾಗುತ್ತದೆ ಎಂದು ಖ್ಯಾತ ಪರಿಸರ ಹೋರಾಟಗಾರ ಸೋನಮ್ ವಾಂಗ್‌ಚುಕ್ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವಾಲಯದ ಉನ್ನತ ಮಟ್ಟದ ಉಪ ಸಮಿತಿ ಜೊತೆ ಲಡಾಖ್ ಮುಖಂಡರ ಸಭೆ ನಡೆದ ಬಳಿಕ ಮಾತನಾಡಿದ ಅವರು, ಈ ಸಭೆಯ ಫಲಿತಾಂಶ ತಮಗೆ ತೀವ್ರ ನಿರಾಶೆ ತಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಲಡಾಖ್‌ಗೆ ಚುನಾಯಿತ ಕೇಂದ್ರಾಡಳಿತ ಪ್ರದೇಶದ (UT) ಮಂಡಳಿ, ಅದರ ಅಧಿಕಾರ ವ್ಯಾಪ್ತಿ ಹಾಗೂ ಚೌಕಟ್ಟನ್ನು ಒಳಗೊಂಡ ಅಧಿಕೃತ ಕರಡು ಪ್ರತಿಯನ್ನು ಗೃಹ ಸಚಿವಾಲಯ ಸಭೆಯಲ್ಲಿ ನೀಡಲಿದೆ ಎಂಬ ಭಾರೀ ನಿರೀಕ್ಷೆಯೊಂದಿಗೆ ಲೇಹ್ ಅಪೆಕ್ಸ್ ಬಾಡಿ (LAB) ಮತ್ತು ಕಾರ್ಗಿಲ್ ಡೆಮಾಕ್ರಟಿಕ್ ಅಲಯನ್ಸ್ (KDA) ಒಕ್ಕೂಟದ ನಿಯೋಗ ದೆಹಲಿಗೆ ಬಂದಿತ್ತು. ಆದರೆ ಕಳೆದ ಮೇ ತಿಂಗಳಲ್ಲಿ ಸಭೆ ನಡೆದು ನಾಲ್ಕು ತಿಂಗಳು ಕಳೆದಿದ್ದರೂ ಗೃಹ ಸಚಿವಾಲಯ ಯಾವುದೇ ಕರಡು ನೀಡಿಲ್ಲ, ಬದಲಾಗಿ ಮುಂದಿನ ಸಭೆಯಲ್ಲಿ ಚರ್ಚಿಸಬೇಕಾದ ಪ್ರಶ್ನೆಗಳ ಪಟ್ಟಿಯನ್ನು ಕೈಗಿಟ್ಟಿದೆ. ಇದನ್ನು 'ಒಂದು ರೀತಿಯ ಜೋಕ್' ಎಂದು ಬಣ್ಣಿಸಿದ ವಾಂಗ್‌ಚುಕ್, ಮೇ 22ರ ಸಭೆಯಲ್ಲಿ ಆದ ತೀರ್ಮಾನಗಳನ್ನೇ ಪುನರಾವರ್ತಿಸಲಾಗಿದೆಯೇ ಹೊರತು ಯಾವುದೇ ಹೊಸ ಪ್ರಗತಿಯಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಲಡಾಖ್‌ಗೆ ಶಾಸನಸಭೆ, ಸ್ವತಂತ್ರ ಕ್ಷೇತ್ರ ಮರುವಿಂಗಡಣೆ ಮತ್ತು ನೇರ ಚುನಾವಣೆಗಳು ಶೀಘ್ರವೇ ನಡೆಯಬೇಕು ಹಾಗೂ ಮುಂಬರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲೇ ಇದಕ್ಕೆ ಪೂರಕವಾದ ಮಸೂದೆ ಮಂಡಿಸಬೇಕು ಎಂದು ನಿಯೋಗ ಪಟ್ಟು ಹಿಡಿದಿದೆ. ಅಲ್ಲದೆ ಸ್ಥಳೀಯ ಭೂಮಿ, ಗಣಿಗಾರಿಕೆ, ಸಂಸ್ಕೃತಿ, ಉದ್ಯೋಗ ಮತ್ತು ಪ್ರಾದೇಶಿಕ ಭಾಷೆಗಳಿಗೆ ಸಾಂವಿಧಾನಿಕ ಭದ್ರತೆ ನೀಡಬೇಕು ಎಂದು ಆಗ್ರಹಿಸಲಾಗಿದೆ. ಚುನಾಯಿತ ಮಂಡಳಿ ಅಸ್ತಿತ್ವಕ್ಕೆ ಬರುವವರೆಗೂ ಲಡಾಖ್‌ನ ಭೂಮಿ ಹಂಚಿಕೆ ಅಥವಾ ಆಡಳಿತ ವ್ಯವಸ್ಥೆಯನ್ನು ಶಾಶ್ವತವಾಗಿ ಬದಲಾಯಿಸುವ ಯಾವುದೇ ನಿರ್ಧಾರಗಳನ್ನು ಕೇಂದ್ರ ಕೈಗೊಳ್ಳಬಾರದು ಎಂದು ನಿಯೋಗ ಲಿಖಿತವಾಗಿ ತಿಳಿಸಿದ್ದು, ಹೋರಾಟಗಾರರ ಮೇಲಿರುವ ಎಲ್ಲಾ ಕೇಸ್‌ಗಳನ್ನು ಏಕಕಾಲಕ್ಕೆ ವಾಪಸ್ ಪಡೆಯಬೇಕು ಎಂದು ಪಟ್ಟು ಹಿಡಿದಿದೆ.

ಕಳೆದ ವರ್ಷ ಸೆಪ್ಟೆಂಬರ್ 24ರಂದು ಲೇಹ್‌ನಲ್ಲಿ ನಡೆದ ಹಿಂಸಾಚಾರದಲ್ಲಿ ಗಾಯಗೊಂಡವರಿಗೆ ಮತ್ತು ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ನೀಡಲು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ ಎಂದು ವಾಂಗ್‌ಚುಕ್ ಹೇಳಿದ್ದಾರೆ. ಮತ್ತೊಂದೆಡೆ, ಲಡಾಖ್ ಮುಖ್ಯ ಕಾರ್ಯದರ್ಶಿ ಆಶಿಶ್ ಕುಂದ್ರಾ ಅವರು ಸಂವಿಧಾನದ 371ನೇ ವಿಧಿಯಡಿಯಲ್ಲಿ ವಿಶೇಷ ಆಡಳಿತ ಮಾದರಿ ರೂಪಿಸುವ ನಿಟ್ಟಿನಲ್ಲಿ ಸಭೆಯಲ್ಲಿ ಸಕಾರಾತ್ಮಕ ವಾತಾವರಣದಲ್ಲಿ ಚರ್ಚೆ ನಡೆದಿದೆ ಎಂದಿದ್ದಾರೆ. ಮುಂದಿನ ಸುತ್ತಿನ ಮಾತುಕತೆ ಅಕ್ಟೋಬರ್ ಮೊದಲ ವಾರದಲ್ಲಿ ಕಾರ್ಗಿಲ್‌ನಲ್ಲಿ ನಡೆಯುವ ನಿರೀಕ್ಷೆಯಿದ್ದು, ಚುನಾಯಿತ ಮಂಡಳಿ ರಚನೆಯಾಗುವ ಮುನ್ನ ಕೇಂದ್ರವೇನಾದರೂ ಅತಿರೇಕದ ನಿರ್ಧಾರ ಕೈಗೊಂಡರೆ ಲಡಾಖ್‌ನಲ್ಲಿ ಮತ್ತೆ ಬೃಹತ್ ಪ್ರತಿಭಟನೆ ಭುಗಿಲೇಳುವುದು ಖಚಿತ ಎಂಬ ಎಚ್ಚರಿಕೆಯನ್ನು ನೀಡಲಾಗಿದೆ.

Category
ಕರಾವಳಿ ತರಂಗಿಣಿ