image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಂಗಳೂರಿಗೆ ಪ್ರತ್ಯೇಕ ರೈಲ್ವೇ ವಿಭಾಗವೇ ಅಂತಿಮ ಗುರಿ: ಎಐಸಿಸಿ ಕಾರ್ಯದರ್ಶಿ ಪಿ.ವಿ. ಮೋಹನ್ ಆಗ್ರಹ

ಮಂಗಳೂರಿಗೆ ಪ್ರತ್ಯೇಕ ರೈಲ್ವೇ ವಿಭಾಗವೇ ಅಂತಿಮ ಗುರಿ: ಎಐಸಿಸಿ ಕಾರ್ಯದರ್ಶಿ ಪಿ.ವಿ. ಮೋಹನ್ ಆಗ್ರಹ

ಮಂಗಳೂರು : ಮಂಗಳೂರಿನ ರೈಲ್ವೇ ಆಡಳಿತವನ್ನು ಪಾಲಕ್ಕಾಡ್ ವಿಭಾಗದಿಂದ ಮೈಸೂರು ವಿಭಾಗಕ್ಕೆ ಸೇರಿಸಿರುವುದು ಕರಾವಳಿ ಕರ್ನಾಟಕದ ರೈಲ್ವೇ ಸಮಸ್ಯೆಗೆ ಸಂಪೂರ್ಣ ಪರಿಹಾರವಲ್ಲ; ಮಂಗಳೂರಿಗೆ ಪ್ರತ್ಯೇಕ ರೈಲ್ವೇ ವಿಭಾಗ ಬೇಕು ಎಂಬುದೇ ದಶಕಗಳ ಹೋರಾಟದ ಅಂತಿಮ ಗುರಿಯಾಗಿದೆ ಎಂದು ಎಐಸಿಸಿ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ಪಿ.ವಿ. ಮೋಹನ್ ಅಭಿಪ್ರಾಯಪಟ್ಟಿದ್ದಾರೆ. ಶನಿವಾರ ನಗರದ ಮಲ್ಲಿಕಟ್ಟೆಯಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಪಾಲಕ್ಕಾಡ್‌ನಿಂದ ಮಂಗಳೂರನ್ನು ಬೇರ್ಪಡಿಸಿರುವ ರೈಲ್ವೇ ಮಂಡಳಿಯ ನಿರ್ಧಾರ ಸ್ವಾಗತಾರ್ಹವಾಗಿದ್ದರೂ, ಇದನ್ನು ಮೈಸೂರು ವಿಭಾಗಕ್ಕೆ ಸೇರಿಸಿರುವುದು ಕರಾವಳಿ ಕರ್ನಾಟಕದ ರೈಲ್ವೇ ಸಮಸ್ಯೆಗೆ ಅಂತಿಮ ಪರಿಹಾರವಲ್ಲ ಹಾಗೂ ಇದು ಸಮಸ್ತ ಕರಾವಳಿ ಜನತೆಗೆ ಮಾಡಿದ ಮಹಾದ್ರೋಹವಾಗಿದೆ ಎಂದು ಬಣ್ಣಿಸಿದರು.

ರೈಲ್ವೇ ಮಂಡಳಿಯ ಆಗಸ್ಟ್ 21, 2026ರ ಅಧಿಸೂಚನೆಯಂತೆ 2026ರ ಅಕ್ಟೋಬರ್ 1ರಿಂದ ಕಾರ್ಯಾಚರಣೆಯ ಅನುಕೂಲಕ್ಕಾಗಿ ಮೈಸೂರು ವಿಭಾಗ, ಪಾಲಕ್ಕಾಡ್ ವಿಭಾಗ ಮತ್ತು ಕೊಂಕಣ ರೈಲ್ವೇಯ ವ್ಯಾಪ್ತಿಯಲ್ಲಿ ಬದಲಾವಣೆ ಮಾಡಲಾಗಿದೆ. ಮೈಸೂರು - ಪಾಲಕ್ಕಾಡ್ ವಿಭಾಗೀಯ ಅಥವಾ ವಲಯ ಗಡಿ ಶೋನೂರ್ - ಮಂಗಳೂರು ಸೆಂಟ್ರಲ್ ಮಾರ್ಗದಲ್ಲಿ ಕಿ.ಮೀ 872.900ಕ್ಕೆ ನಿಗದಿಯಾಗಿದೆ. ಪಾಲಕ್ಕಾಡ್ - ಕೊಂಕಣ ರೈಲ್ವೇಯಲ್ಲಿದ್ದ ತೋಕೂರು ಇಂಟರ್‌ಚೇಂಜ್, ಕೊಂಕಣ ರೈಲ್ವೇ - ಮೈಸೂರು ಡಿವಿಜನ್ ಇಂಟರ್‌ಚೇಂಜ್ ಆಗಲಿದ್ದು, ಮೈಸೂರು - ಪಾಲಕ್ಕಾಡ್ ಇಂಟರ್‌ಚೇಂಜ್ ಪಡೀಲ್‌ನಿಂದ ಉಳ್ಳಾಲಕ್ಕೆ ಬದಲಾಗಲಿದೆ. ಆದರೆ ಮಂಗಳೂರಿನ ರೈಲ್ವೇ ವಿಳಾಸ ಬದಲಾಯಿಸುವುದಷ್ಟೇ ಸಾಲದು, ಕರಾವಳಿ ಕರ್ನಾಟಕಕ್ಕೆ ಅರ್ಧ ಪರಿಹಾರ ನೀಡದೆ ಪ್ರತ್ಯೇಕ, ಸಮಗ್ರ ಮತ್ತು ಕೇಂದ್ರೀಕೃತ ರೈಲ್ವೇ ಆಡಳಿತ ಹಾಗೂ ಮಂಗಳೂರಿಗೆ ತನ್ನದೇ ಆದ ರೈಲ್ವೇ ಗುರುತು ನೀಡಬೇಕು ಎಂದು ರೈಲ್ವೇ ಇಲಾಖೆಯನ್ನು ಆಗ್ರಹಿಸಿದರು.

119 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಮಂಗಳೂರು ಸೆಂಟ್ರಲ್ ಹಾಗೂ ಮಂಗಳೂರು ಜಂಕ್ಷನ್ ರೈಲು ನಿಲ್ದಾಣಗಳು ಪ್ರದೇಶದ ಸಾರಿಗೆ ಮತ್ತು ಆರ್ಥಿಕತೆಗೆ ಪ್ರಮುಖ ಕೊಂಡಿಯಾಗಿವೆ. ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾಗಿ ಸಾಕಷ್ಟು ಬೆಳವಣಿಗೆ ಕಂಡಿರುವ ಮಂಗಳೂರಿಗೆ ಪ್ರತ್ಯೇಕ ವಿಭಾಗ ಮಾತ್ರವಲ್ಲದೆ, ವಲಯವಾಗುವ ಸಾಮರ್ಥ್ಯವೂ ಇದೆ. ಇಂತಹ ಪರಿಸ್ಥಿತಿ ಇದ್ದರೂ ಮಂಗಳೂರಿನ ಸಂಸದರು ಯಾಕೆ ಇಷ್ಟಕ್ಕೆ ಸುಮ್ಮನಾದರು ಎಂದು ಅವರು ಪ್ರಶ್ನಿಸಿದರು. ಮಂಗಳೂರಿಗೆ ಪ್ರತ್ಯೇಕ ರೈಲ್ವೇ ವಿಭಾಗ ಬೇಕೆನ್ನುವುದು ಹೊಸ ಬೇಡಿಕೆಯಲ್ಲ, ಇದು ದಶಕಗಳ ಹೋರಾಟ, ಸಾರ್ವಜನಿಕ ಒತ್ತಾಯ ಮತ್ತು ಸಂಸತ್ತಿನ ದಾಖಲೆಗಳಲ್ಲಿ ಅನೇಕ ಬಾರಿ ವ್ಯಕ್ತವಾಗಿರುವ ಬೇಡಿಕೆಯಾಗಿದ್ದು, ಇದನ್ನು ಕೇಂದ್ರ ಸರ್ಕಾರವು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.

Category
ಕರಾವಳಿ ತರಂಗಿಣಿ