image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್ ದಾಖಲಿಸಿರುವುದು ಖಂಡನೀಯ: ದಿನೇಶ್ ಮುಳೂರು

ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್ ದಾಖಲಿಸಿರುವುದು ಖಂಡನೀಯ: ದಿನೇಶ್ ಮುಳೂರು

ಮಂಗಳೂರು : ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ನಡೆದ ಅವಮಾನವನ್ನು ಪ್ರಶ್ನಿಸಿದ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧವೇ ಎಫ್‌ಐಆರ್ ದಾಖಲಿಸಿರುವುದನ್ನು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ದಿನೇಶ್ ಮುಳೂರು ತೀವ್ರವಾಗಿ ಖಂಡಿಸಿದ್ದಾರೆ.

ಮಂಗಳೂರಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರಾಖಂಡದ ಹಲ್ದ್ವಾನಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ್ದ ಸ್ಥಳದಲ್ಲಿ ಮರುದಿನ ಹೋಮ-ಹವನ ನಡೆಸಿ ಶುದ್ಧೀಕರಣ ಮಾಡಿರುವುದು ಸ್ಪಷ್ಟ ಜಾತಿ ತಾರತಮ್ಯವಾಗಿದೆ. ಈ ಅಸ್ಪೃಶ್ಯತೆ ಹಾಗೂ ಅವಮಾನವನ್ನು ಖಂಡಿಸಿ, ತಪ್ಪಿತಸ್ಥರ ವಿರುದ್ಧ ದೌರ್ಜನ್ಯ ತಡೆ ಕಾಯ್ದೆಯಡಿ ಕ್ರಮಕ್ಕೆ ಆಗ್ರಹಿಸಿದ್ದ ರಾಹುಲ್ ಗಾಂಧಿ ಅವರ ಮೇಲೆ ಪ್ರತಿಯಾಗಿ ಎಫ್‌ಐಆರ್ ದಾಖಲಿಸಿರುವುದು ಬಿಜೆಪಿ ಹಾಗೂ ಸಂಘ ಪರಿವಾರದ ದಲಿತ ವಿರೋಧಿ ಮನಸ್ಥಿತಿಯನ್ನು ಎತ್ತಿ ತೋರಿಸುತ್ತದೆ ಎಂದು ಟೀಕಿಸಿದರು.

ಅವಮಾನ ಎಸಗಿದವರ ವಿರುದ್ಧ ಪ್ರಕರಣ ದಾಖಲಿಸುವುದನ್ನು ಬಿಟ್ಟು ಧ್ವನಿ ಎತ್ತಿದ ನಾಯಕರ ವಿರುದ್ಧವೇ ಕ್ರಮ ಕೈಗೊಂಡಿರುವುದು ದೇಶದ ಸಮಸ್ತ ದಲಿತ ಸಮುದಾಯದ ವಿರುದ್ಧ ದಾಖಲಿಸಿದ ಎಫ್‌ಐಆರ್‌ನಂತೆ ಕಾಣುತ್ತಿದೆ. ಜವಾಹರಲಾಲ್ ನೆಹರು, ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿ ಅವರ ಕಾಲದಿಂದಲೂ ಗಾಂಧಿ ಕುಟುಂಬವು ದಲಿತರ, ಶೋಷಿತರ ಅಭಿವೃದ್ಧಿ ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ನಿರಂತರವಾಗಿ ಶ್ರಮಿಸಿದೆ. ಶಿಕ್ಷಣ, ಉದ್ಯೋಗಕ್ಕೆ ಒತ್ತು ನೀಡುವುದರ ಜೊತೆಗೆ ದೇವದಾಸಿ ಮತ್ತು ಮಲ ಹೊರುವ ಪದ್ಧತಿಯಂತಹ ಅನಿಷ್ಟ ಆಚರಣೆಗಳ ನಿರ್ಮೂಲನೆಗೆ ಕಾನೂನಾತ್ಮಕ ಕ್ರಮ ಕೈಗೊಂಡ ಇತಿಹಾಸ ಕಾಂಗ್ರೆಸ್‌ಗಿದೆ.

ಡಾ. ಬಿ.ಆರ್. ಅಂಬೇಡ್ಕರ್ ಅವರು ನೀಡಿದ ಸಂವಿಧಾನದ ಆಶಯಗಳಂತೆ ಕಾಂಗ್ರೆಸ್ ಕಾರ್ಯನಿರ್ವಹಿಸುತ್ತಿದ್ದರೂ, ಮನುವಾದಿ ಚಿಂತನೆಗಳು ಇಂದಿಗೂ ದಲಿತರ ಧ್ವನಿಯನ್ನು ಹತ್ತಿಕ್ಕಲು ಯತ್ನಿಸುತ್ತಿವೆ. ಉನ್ನಾವೋ ಪ್ರಕರಣದಿಂದ ಹಿಡಿದು ಪ್ರಸ್ತುತ ಖರ್ಗೆ ಅವರ ವಿಷಯದವರೆಗೂ ರಾಹುಲ್ ಗಾಂಧಿ ಶೋಷಿತರ ಪರವಾಗಿ ಗಟ್ಟಿಯಾಗಿ ನಿಂತಿದ್ದಾರೆ. ಇಂತಹ ಸುಳ್ಳು ಪ್ರಕರಣಗಳ ಮೂಲಕ ಅವರ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ ಹಾಗೂ ದೇಶದ ಸಮಸ್ತ ದಲಿತರು ಅವರೊಂದಿಗೆ ನಿಲ್ಲಲಿದ್ದಾರೆ ಎಂದು ಅವರು ಪ್ರತಿಪಾದಿಸಿದರು.

ಈ ಸುದ್ದಿಗೋಷ್ಠಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಫಾಯಿ ಕರ್ಮಚಾರಿ ಘಟಕದ ಅಧ್ಯಕ್ಷ ಪ್ರೇಮ್ ನಾಥ್ ಪಿ.ಬಿ. ಬಳ್ಳಾಲ್ ಬಾಗ್, ಉಪಾಧ್ಯಕ್ಷ ಟಿ. ಹೊನ್ನಯ್ಯ ಹಾಗೂ ಪರಿಶಿಷ್ಟ ಜಾತಿ ಘಟಕದ ಕಾರ್ಯದರ್ಶಿ ರವಿ ಸುಂಕದಕಟ್ಟೆ ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ