image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಪ್ರೆಸ್ ಕ್ಲಬ್ ಎದುರೇ ಕಾಂಗ್ರೆಸ್ ಗೂಂಡಾಗಿರಿ: ಕಿಸೆಯಲ್ಲಿ ಸಂವಿಧಾನ, ಕೃತ್ಯದಲ್ಲಿ ಸರ್ವಾಧಿಕಾರ–ಕಿಶೋರ್ ಕುಮಾರ್ ಪುತ್ತೂರು

ಪ್ರೆಸ್ ಕ್ಲಬ್ ಎದುರೇ ಕಾಂಗ್ರೆಸ್ ಗೂಂಡಾಗಿರಿ: ಕಿಸೆಯಲ್ಲಿ ಸಂವಿಧಾನ, ಕೃತ್ಯದಲ್ಲಿ ಸರ್ವಾಧಿಕಾರ–ಕಿಶೋರ್ ಕುಮಾರ್ ಪುತ್ತೂರು

ಮಂಗಳೂರು: ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಇರುವ ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಪುತ್ತೂರು ಪತ್ರಿಕಾ ಭವನದ ಎದುರೇ ಕಾಂಗ್ರೆಸ್ ಕಾರ್ಯಕರ್ತರು ಗೂಂಡಾಗಿರಿ ನಡೆಸಿದ್ದಾರೆ ಎಂದು ಉಡುಪಿ–ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಆರೋಪಿಸಿದ್ದಾರೆ.

ಈ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಅವರು, ಶಾಸಕ ಅಶೋಕ್ ಕುಮಾರ್ ರೈ ಅವರ ಬೆಂಬಲಿಗರ ರೌಡಿಸಂ ಹಾಗೂ ರಾಜ್ಯದಲ್ಲಿ ಕುಸಿಯುತ್ತಿರುವ ಕಾನೂನು ಸುವ್ಯವಸ್ಥೆಯ ವಿರುದ್ಧ ವಾಗ್ದಾಳಿ ನಡೆಸಿದರು.

ಪ್ರಜಾಪ್ರಭುತ್ವದಲ್ಲಿ ಯಾರನ್ನಾದರೂ ಟೀಕಿಸುವ ಹಾಗೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಶಾಸಕರನ್ನು ಟೀಕಿಸಲು ಬಂದ ಹಕೀಮ್ ಕೂರ್ನಡ್ಕ ಅವರ ಮೇಲೆ ಪತ್ರಿಕಾ ಪ್ರತಿನಿಧಿಗಳ ಸಮ್ಮುಖದಲ್ಲೇ ಹಲ್ಲೆಗೆ ಯತ್ನಿಸಿರುವುದು ಕಾಂಗ್ರೆಸ್‌ನ ಅಹಂಕಾರವನ್ನು ತೋರಿಸುತ್ತದೆ. ಸಾರ್ವಜನಿಕ ಜೀವನದಲ್ಲಿರುವವರಿಗೆ ಟೀಕೆಗಳು ಸಹಜ. ಟೀಕಿಸಿದವರ ಮೇಲೆ ಹಲ್ಲೆ ನಡೆಸುವುದು ಪ್ರಜಾಪ್ರಭುತ್ವವಲ್ಲ, ಸರ್ವಾಧಿಕಾರ ಎಂದು ಕಿಶೋರ್ ಕುಮಾರ್ ಪುತ್ತೂರು ಹೇಳಿದರು.

ಇಂದಿರಾ ಗಾಂಧಿಯವರ ಆಡಳಿತದ ಅವಧಿಯ ತುರ್ತು ಪರಿಸ್ಥಿತಿಯನ್ನು ಉಲ್ಲೇಖಿಸಿದ ಅವರು, ಆಗ ಮಾಧ್ಯಮಗಳ ಮೇಲೆ ನಿರ್ಬಂಧ ಹೇರಲಾಗಿತ್ತು. ಇದೀಗ ಕಾಂಗ್ರೆಸ್ ಪಕ್ಷದವರು ಪತ್ರಿಕಾಗೋಷ್ಠಿಯಲ್ಲಿ ಸತ್ಯ ಮಾತನಾಡಲು ಬರುವವರ ಬಾಯಿ ಮುಚ್ಚಿಸಲು ಗೂಂಡಾಗಿರಿ ಮಾಡುತ್ತಿದ್ದಾರೆ. ಇದು ಅಘೋಷಿತ ತುರ್ತು ಪರಿಸ್ಥಿತಿಯಲ್ಲದೇ ಮತ್ತೇನು ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ನಾಯಕರು ಕಿಸೆಯಲ್ಲಿ ಸಂವಿಧಾನದ ಸಣ್ಣ ಪುಸ್ತಕ ಇಟ್ಟುಕೊಂಡು ಪ್ರದರ್ಶಿಸುತ್ತಾರೆ. ಆದರೆ ಅದೇ ಸಂವಿಧಾನ ನೀಡಿರುವ ವಾಕ್ ಸ್ವಾತಂತ್ರ್ಯದ ಹಕ್ಕನ್ನು ಕಸಿದುಕೊಳ್ಳುತ್ತಿದ್ದಾರೆ ಎಂದು ಟೀಕಿಸಿದ ಅವರು, ಬೆಂಗಳೂರಿನಲ್ಲಿ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಪೊಲೀಸ್ ಅಧಿಕಾರಿಯ ಮೇಲೆ ಹಲ್ಲೆ ನಡೆಸಿದರೂ ದೂರು ದಾಖಲಾಗದಿರುವುದು ಹಾಗೂ ಪುತ್ತೂರಿನಲ್ಲಿ ಪೊಲೀಸ್ ಜೀಪಿಗೆ ಹೊಡೆಯಲು ಮುಂದಾಗಿರುವ ಘಟನೆಗಳು ಕಾನೂನು ಸುವ್ಯವಸ್ಥೆಯ ಬಗ್ಗೆ ಪ್ರಶ್ನೆ ಮೂಡಿಸುತ್ತವೆ ಎಂದರು.

ಪುತ್ತೂರಿನಲ್ಲಿ ದಶಕಗಳ ಬಳಿಕ ಗೂಂಡಾ ಸಂಸ್ಕೃತಿ ಮರುಕಳಿಸುತ್ತಿದೆ ಎಂದು ಆರೋಪಿಸಿದ ಕಿಶೋರ್ ಕುಮಾರ್, ಶಾಸಕರು ಅಭಿವೃದ್ಧಿಯ ಹೆಸರಿನಲ್ಲಿ ಫೋಟೋ ಮತ್ತು ವಿಡಿಯೋ ರೀಲ್ಸ್‌ಗಳಿಗೆ ಸೀಮಿತವಾಗಿದ್ದಾರೆ. ಕ್ಷೇತ್ರದಲ್ಲಿ ನೈಜ ಅಭಿವೃದ್ಧಿ ಕಾಣುತ್ತಿಲ್ಲ ಎಂದು ಟೀಕಿಸಿದರು.

ಪೊಲೀಸರ ಸಮ್ಮುಖದಲ್ಲೇ ದಾಂಧಲೆ ನಡೆದರೂ ಪೊಲೀಸರು ಮೂಕಪ್ರೇಕ್ಷಕರಾಗಿರುವುದು ಆತಂಕಕಾರಿ. ಪೊಲೀಸ್ ಇಲಾಖೆ ಕೂಡಲೇ ಕ್ರಮ ಕೈಗೊಂಡು ಪ್ರೆಸ್ ಕ್ಲಬ್ ಎದುರು ದಾಂಧಲೆ ನಡೆಸಿದವರನ್ನು ಬಂಧಿಸಬೇಕು. ವಾಕ್ ಸ್ವಾತಂತ್ರ್ಯದ ಹರಣ ಹಾಗೂ ಪೊಲೀಸ್ ಅಧಿಕಾರಿಗಳ ಮೇಲಿನ ದಬ್ಬಾಳಿಕೆಯನ್ನು ಜನತೆ ಸಹಿಸುವುದಿಲ್ಲ. ಈ ಸರ್ವಾಧಿಕಾರಿ ಧೋರಣೆಯ ವಿರುದ್ಧ ಮುಂದಿನ ದಿನಗಳಲ್ಲಿ ಭಾರತೀಯ ಜನತಾ ಪಾರ್ಟಿ ಬೀದಿಗಿಳಿದು ಹೋರಾಟ ನಡೆಸಲಿದೆ ಎಂದು ಕಿಶೋರ್ ಕುಮಾರ್ ಪುತ್ತೂರು ಎಚ್ಚರಿಸಿದರು.

Category
ಕರಾವಳಿ ತರಂಗಿಣಿ