ಮಂಗಳೂರು: ಇ-ಸ್ವತ್ತು 2.0 ತಂತ್ರಾಂಶ ಜಾರಿಗೆ ಬಂದ ಬಳಿಕ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಅಗತ್ಯವಾಗಿರುವ ನಮೂನೆ 11ಎ ಹಾಗೂ 11ಬಿ ಪ್ರಕ್ರಿಯೆಗಳು ವಿಳಂಬವಾಗುತ್ತಿದ್ದು, ಜನರು ಕಚೇರಿಗಳಿಗೆ ಪದೇಪದೇ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಗಂಭೀರ ಸಮಸ್ಯೆಯನ್ನು ವಿಧಾನ ಪರಿಷತ್ ಅಧಿವೇಶನದಲ್ಲಿ ಪ್ರಶ್ನೆಗಳ ಮೂಲಕ ಸರ್ಕಾರದ ಗಮನಕ್ಕೆ ತರಲಾಗಿದೆ. 2025ರ ಡಿಸೆಂಬರ್ 1ರಿಂದ ನಮೂನೆ 11ಎಗೆ ಸಂಬಂಧಿಸಿದಂತೆ ಒಟ್ಟು 1,84,222 ಅರ್ಜಿಗಳು ಸ್ವೀಕೃತವಾಗಿದ್ದು, 1,53,795 ಅರ್ಜಿಗಳಿಗೆ ಮಾತ್ರ ಅನುಮೋದನೆ ನೀಡಲಾಗಿದೆ. 23,802 ಅರ್ಜಿಗಳು ಇನ್ನೂ ಅನುಮೋದನೆಗೆ ಬಾಕಿ ಉಳಿದಿವೆ ಎಂದು ಸರ್ಕಾರವೇ ವಿಧಾನ ಪರಿಷತ್‌ನಲ್ಲಿ ಮಾಹಿತಿ ನೀಡಿದೆ ಎಂದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 253 ಹಾಗೂ ಉಡುಪಿ ಜಿಲ್ಲೆಯಲ್ಲಿ 55 ಅರ್ಜಿಗಳು ತಿರಸ್ಕೃತವಾಗಿವೆ. ನಮೂನೆ 11ಬಿಗೆ ಸಲ್ಲಿಕೆಯಾದ 15,936 ಅರ್ಜಿಗಳ ಪೈಕಿ 5,151 ಅರ್ಜಿಗಳಿಗೆ ಅನುಮೋದನೆ ದೊರೆತಿದ್ದು, 8,892 ಅರ್ಜಿಗಳು ಬಾಕಿ ಉಳಿದಿವೆ. ದಕ್ಷಿಣ ಕನ್ನಡದಲ್ಲಿ 65 ಹಾಗೂ ಉಡುಪಿ ಜಿಲ್ಲೆಯಲ್ಲಿ 436 ಅರ್ಜಿಗಳು ಅನುಮೋದನೆಗೆ ಬಾಕಿ ಇವೆ ಎಂದು ಕಿಶೋರ್ ಕುಮಾರ್ ತಿಳಿಸಿದರು.
ಈ ಹಿಂದೆ ನಮೂನೆ 9 ಮತ್ತು 11ಎಗೆ ಗ್ರಾಮ ಪಂಚಾಯಿತಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO) ಅವರ ಅನುಮೋದನೆಯೇ ಅಂತಿಮವಾಗಿತ್ತು. ಆದರೆ ಇ-ಸ್ವತ್ತು 2.0 ಬಳಿಕ ಕಾರ್ಯನಿರ್ವಾಹಕ ಅಧಿಕಾರಿ (EO) ಅವರ ಹೆಚ್ಚುವರಿ ಅನುಮೋದನೆಯನ್ನು ಕಡ್ಡಾಯಗೊಳಿಸಿರುವುದರಿಂದ ಪ್ರಕ್ರಿಯೆ ಮತ್ತಷ್ಟು ಸಂಕೀರ್ಣವಾಗಿದೆ. ಅದೇ ರೀತಿ ನಮೂನೆ 11ಬಿ ಅನುಮೋದನಾ ಅಧಿಕಾರವನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಮಟ್ಟಕ್ಕೆ ವರ್ಗಾಯಿಸಿರುವುದರಿಂದ ಸಾರ್ವಜನಿಕರಿಗೆ ಅನಗತ್ಯ ವಿಳಂಬವಾಗುತ್ತಿದೆ ಎಂದರು.
ಹೆಚ್ಚುವರಿ ಅನುಮೋದನಾ ಹಂತಗಳನ್ನು ಕೈಬಿಟ್ಟು, ಹಿಂದೆ ಇದ್ದಂತೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೇ PDO ಮೂಲಕ ಪರಿಶೀಲನೆ ಹಾಗೂ ಅನುಮೋದನೆ ನೀಡುವ ವ್ಯವಸ್ಥೆಯನ್ನು ಮರುಸ್ಥಾಪಿಸಬೇಕು ಎಂದು ಅವರು ಒತ್ತಾಯಿಸಿದರು.
ಅರ್ಜಿದಾರರು ತಮ್ಮ ಅರ್ಜಿ ಯಾವ ಹಂತದಲ್ಲಿದೆ ಹಾಗೂ ತಿರಸ್ಕೃತವಾಗಿದ್ದರೆ ಕಾರಣವೇನು ಎಂಬುದನ್ನು ಆನ್‌ಲೈನ್‌ನಲ್ಲಿ ತಿಳಿದುಕೊಳ್ಳಲು ಸೂಕ್ತ ಟ್ರ್ಯಾಕಿಂಗ್ ವ್ಯವಸ್ಥೆ ಕಲ್ಪಿಸಬೇಕು. ಈ ಮೂಲಕ ಸಾರ್ವಜನಿಕರ ಕಚೇರಿ ಸುತ್ತಾಟವನ್ನು ತಪ್ಪಿಸಿ, ಇ-ಸ್ವತ್ತು ವ್ಯವಸ್ಥೆಯನ್ನು ಸರಳ ಮತ್ತು ಪರಿಣಾಮಕಾರಿಯಾಗಿಸಬೇಕು ಎಂದು ಕಿಶೋರ್ ಕುಮಾರ್ ಆಗ್ರಹಿಸಿದರು.