ಮಂಗಳೂರು: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ಕ್ರೈಸ್ತ ಸಮುದಾಯದವರ ಮರಿಯ ಜಯಂತಿ/ತೆನೆ ಹಬ್ಬದ ಅಂಗವಾಗಿ ಸಾರ್ವತ್ರಿಕ ರಜೆ ಘೋಷಿಸುವಂತೆ ಶಾಸಕ ವೇದವ್ಯಾಸ ಕಾಮತ್ ಅವರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ನಾಡಿನೆಲ್ಲೆಡೆ ಹಬ್ಬಗಳ ಸಂಭ್ರಮ ಆರಂಭವಾಗಿದ್ದು, ಸೆಪ್ಟೆಂಬರ್ 4ರಂದು ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ಅಸಂಖ್ಯಾತ ಭಕ್ತರು ಶ್ರದ್ಧಾ-ಭಕ್ತಿ ಹಾಗೂ ಸಂಭ್ರಮದಿಂದ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಿದ್ದಾರೆ. ಇದು ಕೇವಲ ಧಾರ್ಮಿಕ ಆಚರಣೆಯಾಗಿರದೆ, ಭಾರತೀಯ ಸಂಸ್ಕೃತಿ, ಕುಟುಂಬ ಮೌಲ್ಯಗಳು ಹಾಗೂ ನೈತಿಕ ಶಿಕ್ಷಣವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಮಹತ್ವದ ಸಾಂಸ್ಕೃತಿಕ ಪರಂಪರೆಯಾಗಿದೆ ಎಂದು ಶಾಸಕರು ಪತ್ರದಲ್ಲಿ ತಿಳಿಸಿದ್ದಾರೆ.
ಅದೇ ರೀತಿ, ಸೆಪ್ಟೆಂಬರ್ 8ರಂದು ಕರಾವಳಿ ಭಾಗದಲ್ಲಿ ಕ್ರೈಸ್ತ ಸಮುದಾಯದವರು ಮರಿಯ ಜಯಂತಿ/ತೆನೆ ಹಬ್ಬವನ್ನು ಅತ್ಯಂತ ವಿಶೇಷವಾಗಿ ಆಚರಿಸಲಿದ್ದಾರೆ. ಹಬ್ಬದ ಆಚರಣೆಗೆ ಅನುಕೂಲವಾಗುವಂತೆ ರಜೆ ಘೋಷಿಸಬೇಕೆಂದು ಕ್ರೈಸ್ತ ಸಮುದಾಯದ ಹಲವಾರು ಮುಖಂಡರು ಹಾಗೂ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಪ್ರಮುಖರು ತಮ್ಮಲ್ಲಿ ಮನವಿ ಮಾಡಿರುವುದಾಗಿ ಶಾಸಕರು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ವಿವೇಚನೆಯಡಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಸೆಪ್ಟೆಂಬರ್ 4ರಂದು ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ಸೆಪ್ಟೆಂಬರ್ 8ರಂದು ಕ್ರೈಸ್ತ ಸಮುದಾಯದವರ ಮರಿಯ ಜಯಂತಿ/ತೆನೆ ಹಬ್ಬದ ಅಂಗವಾಗಿ ಸ್ಥಳೀಯ ರಜೆ ಘೋಷಿಸುವಂತೆ ಶಾಸಕ ವೇದವ್ಯಾಸ ಕಾಮತ್ ಅವರು ಜಿಲ್ಲಾಧಿಕಾರಿಗಳನ್ನು ಕೋರಿದ್ದಾರೆ.