image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಸೆ. 18ರಂದು ಮಂಗಳೂರಿನಲ್ಲಿ ರಾಜ್ಯ ಸಂಪುಟ ಸಭೆ: ಕರಾವಳಿ ಅಭಿವೃದ್ಧಿಗೆ ಶಾಸಕ ಭರತ್ ಶೆಟ್ಟಿ ಒತ್ತಾಯ

ಸೆ. 18ರಂದು ಮಂಗಳೂರಿನಲ್ಲಿ ರಾಜ್ಯ ಸಂಪುಟ ಸಭೆ: ಕರಾವಳಿ ಅಭಿವೃದ್ಧಿಗೆ ಶಾಸಕ ಭರತ್ ಶೆಟ್ಟಿ ಒತ್ತಾಯ

ಮಂಗಳೂರು: ಕರ್ನಾಟಕ ಸರ್ಕಾರದ ಮಹತ್ವದ ಸಚಿವ ಸಂಪುಟ ಸಭೆಯನ್ನು ಬರುವ ಸೆಪ್ಟೆಂಬರ್ 18 ರಂದು ಮಂಗಳೂರಿನಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರು ಈ ಕುರಿತು ಅಧಿಕೃತ ಟಿಪ್ಪಣಿ ಹೊರಡಿಸಿದ್ದು, ಕರಾವಳಿ ಭಾಗದ ಜಿಲ್ಲೆಗಳ ಪ್ರಮುಖ ಬೇಡಿಕೆಗಳು ಹಾಗೂ ಅಭಿವೃದ್ಧಿ ಪ್ರಸ್ತಾವನೆಗಳಿಗೆ ಸಭೆಯಲ್ಲಿ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಎಲ್ಲಾ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಮತ್ತು ಕಾರ್ಯದರ್ಶಿಗಳು ಕರಾವಳಿ ಜಿಲ್ಲೆಗಳಿಗೆ ಸಂಬಂಧಿಸಿದ ಪ್ರಸ್ತಾವನೆಗಳನ್ನು ತುರ್ತಾಗಿ ಸಿದ್ಧಪಡಿಸಿ ಸಲ್ಲಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಸರ್ಕಾರದ ಈ ನಿರ್ಧಾರದ ಬೆನ್ನಲ್ಲೇ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ವೈ. ಭರತ್ ಶೆಟ್ಟಿ ಅವರು ಪ್ರತಿಕ್ರಿಯಿಸಿದ್ದು, ಮಂಗಳೂರಿನಲ್ಲಿ ಮೂಲಸೌಕರ್ಯ, ಪ್ರವಾಸೋದ್ಯಮ ಮತ್ತು ಐಟಿ ವಲಯಗಳಿಗೆ ಹೆಚ್ಚಿನ ಒತ್ತು ನೀಡುವಂತೆ ಆಗ್ರಹಿಸಿದ್ದಾರೆ. ಮಂಗಳೂರಿನಲ್ಲಿ ಇದುವರೆಗೆ ಆಗಿರುವ ಬಹುತೇಕ ಅಭಿವೃದ್ಧಿಯು ಖಾಸಗಿ ಉದ್ಯಮಿಗಳ ಕೊಡುಗೆಯಾಗಿದೆ. ಶಿಕ್ಷಣ ಸಂಸ್ಥೆಗಳು, ಕಾರ್ಖಾನೆಗಳು ಖಾಸಗಿಯವರಿಂದಲೇ ಬಂದಿದ್ದು, ಸರ್ಕಾರದಿಂದ ಎಂಆರ್‌ಪಿಎಲ್ ಮತ್ತು ಎನ್‌ಎಂಪಿಟಿಯಂತಹ ಬೆರಳೆಣಿಕೆಯ ಕೇಂದ್ರ ಸರ್ಕಾರದ ಸಂಸ್ಥೆಗಳು ಮಾತ್ರ ಇವೆ ಎಂದು ಅವರು ಹೇಳಿದ್ದಾರೆ. ಪ್ರವಾಸೋದ್ಯಮ ಅಭಿವೃದ್ಧಿಗಾಗಿ ವಿಶ್ವದರ್ಜೆಯ ಸುಸಜ್ಜಿತ ರಸ್ತೆಗಳು, ದೀಪಗಳು, ಒಳಚರಂಡಿ ಮತ್ತು ಕುಡಿಯುವ ನೀರಿನ ವ್ಯವಸ್ಥೆಯಂತಹ ಮೂಲಸೌಕರ್ಯಗಳನ್ನು ಸರ್ಕಾರ ಆದ್ಯತೆಯ ಮೇಲೆ ಕಲ್ಪಿಸಬೇಕಿದೆ.

ಪ್ರತಿ ವರ್ಷ ಕಾರ್ಯದರ್ಶಿಗಳು ಬದಲಾದಾಗ ಹೊಸ ನೀತಿ ತರುವುದನ್ನು ಬಿಟ್ಟು ಸ್ಪಷ್ಟ ಹಾಗೂ ಸ್ಥಿರ ನೀತಿಯನ್ನು ರೂಪಿಸಬೇಕು ಮತ್ತು ಪಿಪಿಪಿ ಮಾದರಿಯಲ್ಲಿ ಬರುವ ಖಾಸಗಿ ಹೂಡಿಕೆದಾರರಿಗೆ ಅನುಕೂಲ ಮಾಡಿಕೊಡಬೇಕು ಎಂದು ಶೆಟ್ಟಿ ಒತ್ತಾಯಿಸಿದ್ದಾರೆ. ಕಿಯೋನಿಕ್ಸ್ ಐಟಿ ಪಾರ್ಕ್ ಯೋಜನೆಯ ಟೆಂಡರ್ ದಾಖಲೆಗಳಲ್ಲಿರುವ ಲೋಪಗಳನ್ನು ಸರಿಪಡಿಸಿ, ಸ್ಥಳೀಯ ಅಗತ್ಯಗಳಿಗೆ ಹೊಂದಿಕೆಯಾಗುವಂತೆ ಪರಿಷ್ಕರಿಸಬೇಕಿದೆ. ಏಕಗವಾಕ್ಷಿ (ಸಿಂಗಲ್ ವಿಂಡೋ) ವ್ಯವಸ್ಥೆಯು ಕೇವಲ ಮಾತಿಗೆ ಸೀಮಿತವಾಗದೆ ನಿಯಮಗಳನ್ನು ಸರಳೀಕರಿಸಿ ಉದ್ಯಮಿಗಳಿಗೆ ಕಿರುಕುಳ ತಪ್ಪಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ, ಈ ಎಲ್ಲಾ ಅಭಿವೃದ್ಧಿ ಪ್ರಕ್ರಿಯೆಗಳಲ್ಲಿ ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸಬೇಕು ಮತ್ತು ಕರಾವಳಿಯ ವಿಶಿಷ್ಟ ಸಂಸ್ಕೃತಿಯನ್ನು ಉಳಿಸಿಕೊಂಡೇ ಅಭಿವೃದ್ಧಿ ಕೈಗೊಳ್ಳಬೇಕು. ಈ ಕ್ಯಾಬಿನೆಟ್ ಸಭೆ ಕುರಿತು ಶಾಸಕರೊಂದಿಗೆ ಸೂಕ್ತ ಚರ್ಚೆ ನಡೆಸಿ, ಜಿಲ್ಲೆಯ ನಿಜವಾದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ಕೈಗೊಳ್ಳಬೇಕೆಂದು ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

Category
ಕರಾವಳಿ ತರಂಗಿಣಿ