ನವದೆಹಲಿ : ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರಿಗೆ 2028ರ ಕರ್ನಾಟಕ ವಿಧಾನಸಭಾ ಚುನಾವಣೆಯನ್ನು ಗುರಿಯಾಗಿಸಿಕೊಂಡು ವಿಶೇಷ ಟಾಸ್ಕ್ ನೀಡಲಾಗಿದೆ. ರಾಜ್ಯದಲ್ಲಿ 1997ರ ನಂತರ ಜನಿಸಿದ ನವ ಮತದಾರರಾದ 'ಜೆನ್ ಝೀ' (Gen Z) ಯುವ ಸಮೂಹವನ್ನು ತಲುಪಲು ಮತ್ತು ಬಿಜೆಪಿ-ಜೆಡಿಎಸ್ ಮಿತ್ರಕೂಟದ ಪರವಾಗಿ ಸೆಳೆಯಲು ಪ್ರಧಾನಿಗಳು ಸಲಹೆ ನೀಡಿದ್ದಾರೆ. ಯುವಕರ ಬೇಡಿಕೆಗಳನ್ನು ಗುರುತಿಸಿ, ತಕ್ಷಣದ ಹಾಗೂ ದೂರದೃಷ್ಟಿಯ ಕಾರ್ಯಕ್ರಮಗಳನ್ನು ರೂಪಿಸಲು ಜೆಡಿಎಸ್ ಯುವ ಘಟಕದ ಮೂಲಕ ತಂತ್ರಗಾರಿಕೆ ನಡೆಸುವಂತೆ ಸೂಚಿಸಿದ್ದು, ಪಕ್ಷವು ಇದನ್ನು ಸವಾಲಾಗಿ ಸ್ವೀಕರಿಸಿ ಮಾರ್ಗಸೂಚಿ ಸಿದ್ಧಪಡಿಸುತ್ತಿದೆ.
ಈ ಭೇಟಿಯ ಬೆನ್ನಲ್ಲೇ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಎಚ್.ಡಿ. ಕುಮಾರಸ್ವಾಮಿ, ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಕೆಪಿಎಸ್‌ಸಿ ನೇಮಕಾತಿ ಅಕ್ರಮ, 75 ಸಾವಿರ ಹುದ್ದೆಗಳ ಭರ್ತಿ ಪ್ರಕ್ರಿಯೆಯಲ್ಲಿನ ಗೊಂದಲ ಹಾಗೂ ಗೃಹ ಇಲಾಖೆಯ ಲೋಪಗಳನ್ನು ಪ್ರಸ್ತಾಪಿಸಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಆಕ್ರೋಶ ಹೊರಹಾಕಿದರು. ರಾಜ್ಯದ ನಿರುದ್ಯೋಗಿ ಯುವಕರು ಮೌನವಾಗಿರದೆ, ನೀಟ್ ಪರೀಕ್ಷೆ ಅಕ್ರಮದ ಮಾದರಿಯಲ್ಲೇ ಅನ್ಯಾಯದ ವಿರುದ್ಧ ಬೀದಿಗಿಳಿದು ಹೋರಾಟ ನಡೆಸಬೇಕು ಎಂದು ಕುಮಾರಸ್ವಾಮಿ ಕರೆ ನೀಡಿದ್ದಾರೆ.