image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಖರ್ಗೆ ಸಮಾವೇಶದ ಸ್ಥಳ ‘ಶುದ್ಧೀಕರಣ’ ಸಮರ್ಥಿಸಿಕೊಂಡ ಉತ್ತರಾಖಂಡ ಬಿಜೆಪಿ ಅಧ್ಯಕ್ಷ

ಖರ್ಗೆ ಸಮಾವೇಶದ ಸ್ಥಳ ‘ಶುದ್ಧೀಕರಣ’ ಸಮರ್ಥಿಸಿಕೊಂಡ ಉತ್ತರಾಖಂಡ ಬಿಜೆಪಿ ಅಧ್ಯಕ್ಷ

ಉತ್ತರಾಖಂಡ : ಹಲ್ದ್ವಾನಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾಗವಹಿಸಿದ್ದ ಕಾರ್ಯಕ್ರಮದ ಸ್ಥಳವನ್ನು ʼಶುದ್ಧೀಕರಿಸಿʼರುವುದನ್ನು ಉತ್ತರಾಖಂಡ ಬಿಜೆಪಿ ರಾಜ್ಯಾಧ್ಯಕ್ಷ ಮಹೇಂದ್ರ ಭಟ್ ಸಮರ್ಥಿಸಿಕೊಂಡಿದ್ದಾರೆ. ಕೇಂದ್ರ ಸಚಿವ ಹಾಗೂ ಬಿಜೆಪಿ ಮಾಜಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಈ ಘಟನೆಯನ್ನು ಖಂಡಿಸಿ, ವಿಷಾದ ವ್ಯಕ್ತಪಡಿಸಿದ ಬೆನ್ನಲ್ಲೇ ಮಹೇಂದ್ರ ಭಟ್ ಅವರ ಈ ಹೇಳಿಕೆ ಹೊರಬಿದ್ದಿದ್ದು, ಮತ್ತೆ ರಾಜಕೀಯ ಸಂಚಲನ ಮೂಡಿಸಿದೆ.

ಆಗಸ್ಟ್ 8ರಂದು ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ನಡೆದ "ವಿಜಯ ಶಂಖನಾದ" ಸಾರ್ವಜನಿಕ ಸಮಾವೇಶವನ್ನು ಉದ್ದೇಶಿಸಿ ಮಲ್ಲಿಕಾರ್ಜುನ ಖರ್ಗೆ ಅವರು ಮಾತನಾಡಿದ್ದರು. ಇದಾದ ಎರಡು ದಿನಗಳ ಬಳಿಕ, ಶ್ರೀ ರಾಮ ಸೇನೆಯ ಸದಸ್ಯರು ಅದೇ ಸ್ಥಳದಲ್ಲಿ ʼಶುದ್ಧೀಕರಣ ಹವನʼ ನಡೆಸಿದ್ದರು. ಈ ಘಟನೆಯು ಬಿಜೆಪಿಯ ದಲಿತ ವಿರೋಧಿ ಮನಸ್ಥಿತಿಯನ್ನು ಬಹಿರಂಗಪಡಿಸುತ್ತದೆ ಎಂದು ಕಾಂಗ್ರೆಸ್ ಪಕ್ಷದ ಉತ್ತರಾಖಂಡ ಉಸ್ತುವಾರಿ ಕುಮಾರಿ ಸೆಲ್ಜಾ ಹಾಗೂ ಪಿಸಿಸಿ ಅಧ್ಯಕ್ಷ ಗಣೇಶ್ ಗೋಧಿಯಾಲ್ ಆರೋಪಿಸಿದ್ದರು. ಈ ಕುರಿತು ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದ್ದ ಮಲ್ಲಿಕಾರ್ಜುನ ಖರ್ಗೆ, ಶುದ್ಧೀಕರಣ ನಡೆಸಿದವರನ್ನು ಬಂಧಿಸಬೇಕು ಎಂದು ತೀವ್ರವಾಗಿ ಒತ್ತಾಯಿಸಿದ್ದರು.

ಸಂಸತ್ತಿನಲ್ಲಿ ಖರ್ಗೆ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ್ದ ಜೆ.ಪಿ. ನಡ್ಡಾ, ಶುದ್ಧೀಕರಣ ಕಾರ್ಯವನ್ನು ಬಿಜೆಪಿ ಆಯೋಜಿಸಿದೆ ಎಂಬ ಆರೋಪವನ್ನು ತಳ್ಳಿಹಾಕಿದ್ದರು. ಅಂತಹ ಚಟುವಟಿಕೆಗಳಿಗೆ ಪಕ್ಷ ಬೆಂಬಲ ನೀಡುವುದಿಲ್ಲ ಹಾಗೂ ಈ ಘಟನೆಯಿಂದ ಖರ್ಗೆಯವರ ಭಾವನೆಗಳಿಗೆ ಧಕ್ಕೆ ಉಂಟಾಗಿದ್ದರೆ ವಿಷಾದಿಸುತ್ತೇವೆ ಎಂದು ಹೇಳಿದ್ದರು. ಆದರೆ ಮಸ್ಸೂರಿಯಲ್ಲಿ ಕಾರ್ಯಕ್ರಮವೊಂದರ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಮಹೇಂದ್ರ ಭಟ್, ನಿಜವಾದ ಸಮಸ್ಯೆಗಳಿಲ್ಲದ ಪ್ರತಿಪಕ್ಷಗಳು ರಾಜಕೀಯ ಲಾಭಕ್ಕಾಗಿ ಸಮಾಜವನ್ನು ವಿಭಜಿಸುವ ವಿಷಯಗಳ ಬಗ್ಗೆ ಟೀಕೆ ಮಾಡುತ್ತಿವೆ ಎಂದಿದ್ದಾರೆ. ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಶ್ರೀರಾಮ ಮಂದಿರವಿದ್ದು, ಅಲ್ಲಿ ಕೂಗಬಾರದಂತಹ ಘೋಷಣೆಗಳನ್ನು ಕೂಗಿ ಸ್ಥಳವನ್ನು ಅಪವಿತ್ರಗೊಳಿಸಲಾಗಿತ್ತು. ಹಾಗಾಗಿ ಕಲುಷಿತಗೊಂಡಿದ್ದ ಆ ಧಾರ್ಮಿಕ ಹಾಗೂ ಸಾಂಸ್ಕೃತಿಕ ಸ್ಥಳವನ್ನು ಶುದ್ಧೀಕರಿಸಲಾಗಿದೆಯೇ ಹೊರತು ಯಾವುದೇ ವ್ಯಕ್ತಿ ಅಥವಾ ಜಾತಿಯ ವಿರುದ್ಧ ಈ ಕಾರ್ಯ ನಡೆದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Category
ಕರಾವಳಿ ತರಂಗಿಣಿ