image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಆರ್‌ಎಸ್‌ಎಸ್ ವಿರುದ್ಧ ರಾಜ್ಯದಲ್ಲಿ ಪ್ರಕರಣವಿಲ್ಲ: ಸಚಿವರ ಉತ್ತರಕ್ಕೆ ಬಿಜೆಪಿ ವಾಗ್ದಾಳಿ

ಆರ್‌ಎಸ್‌ಎಸ್ ವಿರುದ್ಧ ರಾಜ್ಯದಲ್ಲಿ ಪ್ರಕರಣವಿಲ್ಲ: ಸಚಿವರ ಉತ್ತರಕ್ಕೆ ಬಿಜೆಪಿ ವಾಗ್ದಾಳಿ

ಬೆಂಗಳೂರು : ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ನೋಂದಣಿ ಹಾಗೂ ಚಟುವಟಿಕೆಗಳ ಕುರಿತು ರಾಜ್ಯ ರಾಜಕೀಯದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ವಾಗ್ದಾಳಿ ತೀವ್ರಗೊಂಡಿದೆ. ಆರ್‌ಎಸ್‌ಎಸ್ ಚಟುವಟಿಕೆಗಳ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಅವರು ನಿರಂತರವಾಗಿ ಟೀಕೆ ಮಾಡುತ್ತಿರುವ ಬೆನ್ನಲ್ಲೇ, ವಿಧಾನ ಪರಿಷತ್ತಿನಲ್ಲಿ ನೀಡಿರುವ ಅಧಿಕೃತ ಉತ್ತರವು ಈಗ ಬಿಜೆಪಿ ನಾಯಕರ ಪ್ರಮುಖ ಚರ್ಚೆಯ ವಸ್ತುವಾಗಿದೆ.

ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಕೇಳಿದ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 524 ಕ್ಕೆ ಸರ್ಕಾರದಿಂದ ಸ್ಪಷ್ಟನೆ ನೀಡಲಾಗಿದೆ. ರಾಜ್ಯದಲ್ಲಿ ಆರ್‌ಎಸ್‌ಎಸ್ ವಿರುದ್ಧ ಎಷ್ಟು ಪ್ರಕರಣಗಳು ದಾಖಲಾಗಿವೆ, ಸಂಘವು ಯಾವುದಾದರೂ ಗಲಭೆಯಲ್ಲಿ ಭಾಗಿಯಾಗಿದೆಯೇ ಹಾಗೂ ಪಥ ಸಂಚಲನದ ಸಮಯದಲ್ಲಿ ಅಹಿತಕರ ಘಟನೆಗಳು ಸಂಭವಿಸಿವೆಯೇ ಎಂದು ಅವರು ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿರುವ ಸರ್ಕಾರ, ರಾಜ್ಯದಲ್ಲಿ ಆರ್‌ಎಸ್‌ಎಸ್ ವಿರುದ್ಧ ಯಾವುದೇ ಪ್ರಕರಣಗಳು ದಾಖಲಾಗಿಲ್ಲ ಎಂದು ಸ್ಪಷ್ಟಪಡಿಸಿದೆ.

ಈ ಉತ್ತರ ಹೊರಬಿದ್ದ ತಕ್ಷಣವೇ ಬಿಜೆಪಿ ನಾಯಕರು ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರ್‌ಎಸ್‌ಎಸ್ ವಿರುದ್ಧ ಸರ್ಕಾರದಲ್ಲೇ ಯಾವುದೇ ಆಧಾರ ಅಥವಾ ಪ್ರಕರಣಗಳಿಲ್ಲದಿರುವಾಗ ನಿರಂತರವಾಗಿ ಆರೋಪ ಮಾಡುವುದು ಸರಿಯಲ್ಲ ಎಂದು ಕಮಲ ನಾಯಕರು ಕಿಡಿಕಾರಿದ್ದಾರೆ. ಬಿಜೆಪಿ ತನ್ನ ಅಧಿಕೃತ ಖಾತೆಯಲ್ಲಿ, ಇಷ್ಟು ದಿನ ಆರ್‌ಎಸ್‌ಎಸ್ ವಿರುದ್ಧ ಮಾಡುತ್ತಿದ್ದ ಆರೋಪಗಳಿಗೆ ಆಧಾರವೇನು ಎಂದು ಪ್ರಶ್ನಿಸಿದೆ.

ಇನ್ನೊಂದೆಡೆ, ಬಿಜೆಪಿ ನಾಯಕ ಸಿ.ಟಿ. ರವಿ ಅವರು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಆರ್‌ಎಸ್‌ಎಸ್ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ ಮತ್ತು ಸಂಘವು ಯಾವುದೇ ಕಾನೂನು ವಿರೋಧಿ ಕೃತ್ಯ ಎಸಗಿಲ್ಲ ಎಂಬುದು ಸರ್ಕಾರದ ಉತ್ತರದ ಮೂಲಕವೇ ತಿಳಿದುಬಂದಿದೆ ಎಂದಿದ್ದಾರೆ. ಹೀಗಾಗಿ ಇನ್ನಾದರೂ ಆರ್‌ಎಸ್‌ಎಸ್ ವಿರುದ್ಧ ಆರೋಪ ಮಾಡುವುದನ್ನು ಬಿಟ್ಟು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯತ್ತ ಗಮನ ಹರಿಸಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಟಾಂಗ್ ನೀಡಿದ್ದಾರೆ.

Category
ಕರಾವಳಿ ತರಂಗಿಣಿ