ಬೆಂಗಳೂರು: ರಾಜ್ಯದ ಹಾಲಿ ಮುಖ್ಯಮಂತ್ರಿಯವರೇ ಬೆನಾಮಿ ಕಂಪನಿಗಳ ಮೂಲಕ 'ನೈಸ್' (NICE) ಸಂಸ್ಥೆಯನ್ನು ಖರೀದಿ (ಟೇಕ್ ಓವರ್) ಮಾಡಲು ಹೊರಟಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಸ್ಪೋಟಕ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ. ಬಿಎಂಐಸಿ (BMIC) ಯೋಜನೆ ಹೆಸರಿನಲ್ಲಿ ಸಾವಿರಾರು ಎಕರೆ ಭೂಮಿಯನ್ನು ಲೂಟಿ ಮಾಡಲು ಸಂಚು ರೂಪಿಸಲಾಗಿದ್ದು, ಈ ಕುರಿತು ಮುಂದಿನ ವಾರ ಸೂಕ್ತ ದಾಖಲೆಗಳನ್ನು ಬಹಿರಂಗಪಡಿಸುವುದಾಗಿ ಅವರು ಎಚ್ಚರಿಸಿದ್ದಾರೆ.
ಜೆಡಿಎಸ್ ಕೇಂದ್ರ ಕಚೇರಿಯಲ್ಲಿ ಯುವಕರು ಮತ್ತು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ಮುಖ್ಯಮಂತ್ರಿಯವರೇ ನೈಸ್ ಅಕ್ರಮಗಳಲ್ಲಿ ನೇರವಾಗಿ ಶಾಮೀಲಾಗಿದ್ದು, ರಾಷ್ಟ್ರದ ಇತಿಹಾಸದಲ್ಲೇ ಇದು ಅತ್ಯಂತ ದೊಡ್ಡ ಭೂ ಲೂಟಿಯಾಗಿದೆ ಎಂದು ಗಂಭೀರ ಆರೋಪ ಮಾಡಿದರು. ವಿಧಾನಸೌಧದ ಮೂರನೇ ಮಹಡಿಯಲ್ಲಿ ಕುಳಿತು ನೇರ ವ್ಯವಹಾರಕ್ಕೆ ಇಳಿದಿದ್ದಾರೆ ಎಂದ ಅವರು, ನೈಸ್ ಕಂಪನಿಯನ್ನು ಯಾರು ವಶಕ್ಕೆ ಪಡೆಯುತ್ತಿದ್ದಾರೆ ಮತ್ತು ಬೆನಾಮಿ ಕಂಪನಿಗಳ ಮೂಲಕ ಯಾರು ವ್ಯವಹಾರ ನಡೆಸುತ್ತಿದ್ದಾರೆ ಎಂಬುದನ್ನು ಜನತೆಯ ಮುಂದೆ ಸತ್ಯ ಹೊರಹಾಕಲಿ ಎಂದು ನೇರ ಸವಾಲು ಹಾಕಿದರು.
ನೈಸ್ ಯೋಜನೆಯನ್ನು 'ಸ್ಕೀಮ್ ಫಾರ್ ಸ್ಕ್ಯಾಮ್' ಎಂದು ಬಣ್ಣಿಸಿದ ಸಚಿವರು, ಈ ಅಕ್ರಮದ ವಿರುದ್ಧ ಇಡೀ ರಾಜ್ಯದ ಯುವಕರು ಮತ್ತು ವಿದ್ಯಾರ್ಥಿಗಳು ತಿರುಗಿ ಬೀಳಬೇಕಿದೆ ಎಂದು ಕರೆ ನೀಡಿದರು. ಒಪ್ಪಂದದ ಪ್ರಕಾರ 111 ಕಿ.ಮೀ. ರಸ್ತೆ ನಿರ್ಮಿಸಬೇಕಿದ್ದ ಸಂಸ್ಥೆ ಕೇವಲ 5 ಕಿ.ಮೀ. ರಸ್ತೆಯನ್ನಷ್ಟೇ ನಿರ್ಮಿಸಿದೆ. ರೈತರ ಭೂಸ್ವಾಧೀನವಾಗಿ 20 ವರ್ಷ ಕಳೆದರೂ ಪರಿಹಾರ ನೀಡಿಲ್ಲ. ಯೋಜನಾ ಚೌಕಟ್ಟು ಒಪ್ಪಂದವನ್ನು ಸಂಪೂರ್ಣ ಉಲ್ಲಂಘಿಸಿದ್ದರೂ ಸಹ ಟೋಲ್ ಪ್ಲಾಜಾಗಳಲ್ಲಿ ವಾಹನ ಸವಾರರಿಂದ ಅಕ್ರಮವಾಗಿ ಹಣ ಸುಲಿಗೆ ಮಾಡಲಾಗುತ್ತಿದೆ ಎಂದು ದೂರಿದರು.
ಹೈಕೋರ್ಟ್ ಈ ಯೋಜನೆಯ ಅಕ್ರಮಗಳ ಕುರಿತು ಕಠಿಣ ಶಬ್ದಗಳಲ್ಲಿ ಅಭಿಪ್ರಾಯ ದಾಖಲಿಸಿದ್ದರೂ ಸರ್ಕಾರ ಕ್ರಮ ಜರುಗಿಸದೆ ಮೌನಕ್ಕೆ ಶರಣಾಗಿದೆ. ಬಡ ವಾಹನ ಸವಾರರ ರಕ್ತ ಹೀರುವ ಈ ಸುಲಿಗೆಯ ಹಣವನ್ನು ಎಲ್ಲರೂ ಹಂಚಿಕೊಳ್ಳುತ್ತಿದ್ದು, ಸರ್ಕಾರವೇ ಕಂಪನಿಗೆ ಕುಮ್ಮಕ್ಕು ನೀಡುತ್ತಿದೆ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.