image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ತಮಿಳುನಾಡು ವಿಧಾನಸಭೆಯಲ್ಲಿ ಕಾವೇರಿದ ವಾಕ್ಸಮರ: ಉದಯನಿಧಿ-ಸಿಟಿಆರ್ ನಿರ್ಮಲ್ ಕುಮಾರ್ ನಡುವೆ 'ಬಾತ್ರೂಮ್ ಲೀಡರ್' ಸಮರ

ತಮಿಳುನಾಡು ವಿಧಾನಸಭೆಯಲ್ಲಿ ಕಾವೇರಿದ ವಾಕ್ಸಮರ: ಉದಯನಿಧಿ-ಸಿಟಿಆರ್ ನಿರ್ಮಲ್ ಕುಮಾರ್ ನಡುವೆ 'ಬಾತ್ರೂಮ್ ಲೀಡರ್' ಸಮರ

ಚೆನ್ನೈ : ತಮಿಳುನಾಡು ವಿಧಾನಸಭೆ ಕಲಾಪದ ವೇಳೆ ಪ್ರತಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್ ಹಾಗೂ ಟಿವಿಕೆ ನಾಯಕ ಸಿಟಿಆರ್ ನಿರ್ಮಲ್ ಕುಮಾರ್ ನಡುವೆ ತೀವ್ರ ವಾಕ್ಸಮರ ನಡೆದಿದೆ. ಉದಯನಿಧಿ ಸ್ಟಾಲಿನ್ ಅವರು ನಿರ್ಮಲ್ ಕುಮಾರ್ ಅವರನ್ನು "ಸಂಘಿ ಸಚಿವ" ಎಂದು ಕರೆದಾಗ, ಅದಕ್ಕೆ ಪ್ರತಿಯಾಗಿ ನಿರ್ಮಲ್ ಕುಮಾರ್, ಉದಯನಿಧಿಯವರನ್ನು "ಬಾತ್ರೂಮ್ ಲೀಡರ್" ಎಂದು ವ್ಯಂಗ್ಯವಾಡಿದರು. ತದನಂತರ ಉದಯನಿಧಿ ಸ್ಟಾಲಿನ್ ಅವರು ತಾವು ನೀಡಿದ್ದ ಹೇಳಿಕೆಗೆ ಕ್ಷಮೆ ಯಾಚಿಸಿದರು.

ಈ 'ಬಾತ್ರೂಮ್ ಲೀಡರ್' ಟೀಕೆಯ ಹಿನ್ನೆಲೆಯನ್ನು ಪರಿಶೀಲಿಸಿದರೆ, ನಟಿ ತ್ರಿಷಾ ವಿರುದ್ಧ ನೀಡಿದ್ದರೆನ್ನಲಾದ ವಿವಾದಾತ್ಮಕ ಹೇಳಿಕೆಗಾಗಿ ಪೊಲೀಸರು ಉದಯನಿಧಿ ಸ್ಟಾಲಿನ್ ಅವರನ್ನು ಬಂಧಿಸಲು ಅವರ ಮನೆಗೆ ತೆರಳಿದ್ದರು. ಆ ಸಂದರ್ಭದಲ್ಲಿ ಉದಯನಿಧಿ ಪತ್ನಿ ಕೃತಿಗಾ ಅವರು "ಅವರು ಶೌಚಾಲಯದಲ್ಲಿದ್ದಾರೆ, ಸ್ವಲ್ಪ ಸಮಯ ನೀಡಿ" ಎಂದು ವಿನಂತಿಸುತ್ತಿರುವ ವೀಡಿಯೊ ವೈರಲ್ ಆಗಿತ್ತು. ಕೃತಿಗಾ ಅವರ ವಿನಂತಿಯ ಹೊರತಾಗಿಯೂ ಪೊಲೀಸರು ಕಾನೂನು ಚೌಕಟ್ಟಿನಲ್ಲಿ ಕರ್ತವ್ಯ ನಿರ್ವಹಿಸಿ ಅವರನ್ನು ವಶಕ್ಕೆ ಪಡೆದಿದ್ದರು. ಈ ಘಟನೆಯನ್ನು ಪ್ರಸ್ತಾಪಿಸಿ ನಿರ್ಮಲ್ ಕುಮಾರ್ ಈ ರೀತಿ ವ್ಯಂಗ್ಯ ಮಾಡಿದ್ದರು.

ಇದೇ ವೇಳೆ, ತಮಿಳುನಾಡು ಶಾಸಕರಿಗೆ ಹೊಸ ವಾಹನ ಹಾಗೂ ಇತರ ಸೌಲಭ್ಯಗಳನ್ನು ಘೋಷಿಸಿದ್ದಕ್ಕೆ ಧನ್ಯವಾದ ಅರ್ಪಿಸಲು ಟಿವಿಕೆ ಶಾಸಕಿ ಕೆ. ಸಿಂಧು ಅವರು ವಿಧಾನಸಭೆಯಲ್ಲಿ ಎಂಜಿಆರ್ ಅವರ "ಕೊಡುತ್ ತದೆಲ್ಲಾಮ್ ಕೊಡುತ್ ತಾನ್" ಎಂಬ ಜನಪ್ರಿಯ ಗೀತೆಯನ್ನು ಹಾಡಿದ್ದರು. ಇದನ್ನು ಉಲ್ಲೇಖಿಸಿ ಟೀಕಿಸಿದ ಪ್ರತಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್, ಶಾಸಕರು ವಿಧಾನಸಭೆಯ ಕಲಾಪಗಳನ್ನು "ಸೂಪರ್ ಸಿಂಗರ್" ಇವೆಂಟ್‌ಗೆ ಹೋಲಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಇದಕ್ಕೂ ಮುನ್ನ ನಡೆದ ಚರ್ಚೆಯಲ್ಲಿ ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರನ್ನು ಉದ್ದೇಶಿಸಿ ಮಾತನಾಡಿದ ಉದಯನಿಧಿ ಸ್ಟಾಲಿನ್, "ಹಿಂದಿನ ಡಿಎಂಕೆ ಸರ್ಕಾರದ ಭ್ರಷ್ಟಾಚಾರದ ಫೈಲ್‌ಗಳು ತಮ್ಮ ಮೇಜಿನ ಮೇಲಿವೆ ಎಂದು ಹೇಳುತ್ತಿರುವ ಮುಖ್ಯಮಂತ್ರಿಗಳು ಸಿನಿಮಾದ ಪಂಚ್ ಡೈಲಾಗ್‌ಗಳನ್ನು ಹೊಡೆಯುವುದನ್ನು ಬಿಟ್ಟು, ಸೂಕ್ತ ಸಮಯಕ್ಕಾಗಿ ಕಾಯದೆ ತಕ್ಷಣವೇ ಆ ಫೈಲ್‌ಗಳನ್ನು ಬಹಿರಂಗಪಡಿಸಲಿ" ಎಂದು ಆಗ್ರಹಿಸಿದರು. ಅಲ್ಲದೆ, ಡಿಎಂಕೆ ಪಕ್ಷವು ಇಂತಹ ಗೊಡ್ಡು ಬೆದರಿಕೆಗಳಿಗೆ ಹೆದರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

Category
ಕರಾವಳಿ ತರಂಗಿಣಿ