ಬೆಂಗಳೂರು: ನಗರ ಹಾಗೂ ಪಟ್ಟಣ ವ್ಯಾಪ್ತಿಯ ಖಾಸಗಿ ಬಡಾವಣೆಗಳಲ್ಲಿ ಹಾಳಾದ ರಸ್ತೆ ಮತ್ತು ಚರಂಡಿಗಳ ಸಮಸ್ಯೆಯಿಂದ ಪರದಾಡುತ್ತಿದ್ದ ಜನರಿಗೆ ರಾಜ್ಯ ಸರ್ಕಾರ ಮಹತ್ವದ ಸುದ್ದಿ ನೀಡಿದೆ. ಸ್ಥಳೀಯ ಸಂಸ್ಥೆಗಳು ಇಂತಹ ಖಾಸಗಿ ರಸ್ತೆ ಹಾಗೂ ಚರಂಡಿಗಳನ್ನು ನೇರವಾಗಿ ತಮ್ಮ ಸುಪರ್ದಿಗೆ ಪಡೆದು ಸಾರ್ವಜನಿಕ ರಸ್ತೆಗಳನ್ನಾಗಿ ಅಭಿವೃದ್ಧಿಪಡಿಸಲು ಅವಕಾಶ ಕಲ್ಪಿಸುವ 'ಕರ್ನಾಟಕ ಪುರಸಭೆಗಳ (ತಿದ್ದುಪಡಿ) ವಿಧೇಯಕ 2026' ಮತ್ತು 'ಕರ್ನಾಟಕ ಮಹಾನಗರ ಪಾಲಿಕೆಗಳ (ತಿದ್ದುಪಡಿ) ವಿಧೇಯಕ 2026' ವಿಧಾನಸಭೆಯಲ್ಲಿ ಅಂಗೀಕಾರಗೊಂಡಿವೆ. ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣಬೈರೇಗೌಡ ಅವರು ಮಂಡಿಸಿದ ಈ ಮಸೂದೆಗಳಿಗೆ ವಿಪಕ್ಷಗಳ ಭಾರಿ ಗದ್ದಲ ಮತ್ತು ಪ್ರತಿಭಟನೆಯ ನಡುವೆಯೇ ಸದನದಲ್ಲಿ ಅನುಮೋದನೆ ದೊರೆತಿದೆ.
ಹೊಸ ತಿದ್ದುಪಡಿ ಕಾಯ್ದೆಯನ್ವಯ, ನಗರ ಅಥವಾ ಪಟ್ಟಣ ವ್ಯಾಪ್ತಿಯಲ್ಲಿರುವ ಖಾಸಗಿ ರಸ್ತೆ ಹಾಗೂ ಚರಂಡಿಗಳು ಕಳಪೆ ಸ್ಥಿತಿಯಲ್ಲಿದ್ದು, ಸಾರ್ವಜನಿಕರ ಆರೋಗ್ಯ ಮತ್ತು ಸುರಕ್ಷತೆಗೆ ಧಕ್ಕೆ ತರುತ್ತಿದ್ದರೆ ಮುನ್ಸಿಪಲ್ ಕಮಿಷನರ್ಗಳು ಅಥವಾ ಸ್ಥಳೀಯ ಸಂಸ್ಥೆಯ ಅಧಿಕಾರಿಗಳು ತಾವಾಗಿಯೇ ಅವುಗಳನ್ನು ವಶಕ್ಕೆ ಪಡೆಯಬಹುದು. ಅಲ್ಲದೆ, ಸೈಟು ಮಾಲೀಕರು ಸಹ ತಮ್ಮ ಬಡಾವಣೆಯ ರಸ್ತೆಯನ್ನು ಸಾರ್ವಜನಿಕ ರಸ್ತೆಯೆಂದು ಘೋಷಿಸುವಂತೆ ನಗರಸಭೆ ಅಥವಾ ಪಾಲಿಕೆಗೆ ಮನವಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಆದರೆ, ಒಮ್ಮೆ ಖಾಸಗಿ ರಸ್ತೆಯನ್ನು ಸಾರ್ವಜನಿಕ ಆಸ್ತಿಯೆಂದು ಘೋಷಿಸಿದ ನಂತರ ಮೂಲ ಭೂಮಾಲೀಕರಿಗೆ ಯಾವುದೇ ರೀತಿಯ ಹಣಕಾಸಿನ ಪರಿಹಾರ ಸಿಗುವುದಿಲ್ಲ ಹಾಗೂ ಬದಲಿಗೆ ಅಭಿವೃದ್ಧಿ ಹಕ್ಕು ಪ್ರಮಾಣಪತ್ರ (TDR) ಪಡೆಯಲು ಸಹ ಅವಕಾಶವಿರುವುದಿಲ್ಲ. ರಸ್ತೆ ಹಸ್ತಾಂತರದ ನಂತರ ಅದರ ಸಂಪೂರ್ಣ ನಿರ್ವಹಣೆಯ ಹೊಣೆ ಸ್ಥಳೀಯ ಆಡಳಿತ ಸಂಸ್ಥೆಗಳಿಗೇ ಸೇರುತ್ತದೆ.
ಈ ಹೊಸ ನಿಯಮಗಳಿಗೆ ವಿಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಯಾವುದೇ ಪರಿಹಾರ ನೀಡದೆ ಖಾಸಗಿ ಆಸ್ತಿಯನ್ನು ವಶಪಡಿಸಿಕೊಳ್ಳುವುದು ಕಾನೂನುಬಾಹಿರ ಹಾಗೂ ಮಾಲೀಕರ ಹಕ್ಕುಗಳ ಉಲ್ಲಂಘನೆ ಎಂದು ಆರೋಪಿಸಿವೆ. ಜೊತೆಗೆ, ಅಧಿಕಾರಿಗಳು ತಮಗೆ ಬೇಕಾದ ಖಾಸಗಿ ಲೇಔಟ್ಗಳು ಅಥವಾ ಟೆಕ್ ಪಾರ್ಕ್ಗಳ ರಸ್ತೆಗಳನ್ನು ವಶಪಡಿಸಿಕೊಂಡು ದುರ್ಬಳಕೆ ಮಾಡಿಕೊಳ್ಳುವ ಆತಂಕವಿದೆ ಎಂದು ಪ್ರತಿಪಕ್ಷಗಳು ಪ್ರತಿಪಾದಿಸಿವೆ. ಈ ತಿದ್ದುಪಡಿಯು ಮುಂಬರುವ ದಿನಗಳಲ್ಲಿ 'ಸಾರ್ವಜನಿಕ ಹಿತಾಸಕ್ತಿ ವರ್ಸಸ್ ಖಾಸಗಿ ಆಸ್ತಿ ಹಕ್ಕು' ವಿಷಯದಲ್ಲಿ ದೊಡ್ಡ ಕಾನೂನಾತ್ಮಕ ಚರ್ಚೆಗೆ ವೇದಿಕೆಯಾಗುವ ಸಾಧ್ಯತೆಯಿದೆ.