image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಅಠಾವಳೆ ಆಹ್ವಾನಕ್ಕೆ ತೀವ್ರ ತಿರುಗೇಟು ನೀಡಿದ ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ

ಅಠಾವಳೆ ಆಹ್ವಾನಕ್ಕೆ ತೀವ್ರ ತಿರುಗೇಟು ನೀಡಿದ ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ

ಮುಂಬೈ : ಎನ್‌ಡಿಎ ಮೈತ್ರಿಕೂಟದ ಅಂಗಪಕ್ಷವಾದ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಎ) ಗೆ ಸೇರ್ಪಡೆಯಾಗುವಂತೆ ಕೇಂದ್ರ ಸಚಿವ ರಾಮದಾಸ್ ಅಠಾವಳೆ ನೀಡಿರುವ ಆಹ್ವಾನಕ್ಕೆ 'ಕಾಕ್ರಾಚ್ ಜನತಾ ಪಾರ್ಟಿ' (CJP) ಸಂಸ್ಥಾಪಕ ಅಭಿಜೀತ್ ದೀಪ್ಕೆ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಅಠಾವಳೆ ಅವರ ಆಹ್ವಾನದ ಕುರಿತಾದ ವರದಿಯನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ದೀಪ್ಕೆ, "ಕೇವಲ ಒಂದು ತಿಂಗಳ ಹಿಂದೆ ತಮಗೆ ನಾನು ದೇಶದ್ರೋಹಿಯಂತೆ ಕಾಣುತ್ತಿದ್ದೆನೇ?" ಎಂದು ಬರೆಯುವ ಮೂಲಕ ಅವರ ದಿಢೀರ್ ಬದಲಾದ ನಿಲುವನ್ನು ನೇರವಾಗಿ ಪ್ರಶ್ನಿಸಿದ್ದಾರೆ. ಮಹಾರಾಷ್ಟ್ರದ ನಾಗಪುರದಲ್ಲಿ ಮಾತನಾಡಿದ್ದ ಕೇಂದ್ರ ಸಚಿವ ರಾಮದಾಸ್ ಅಠಾವಳೆ, ಅಭಿಜೀತ್ ದೀಪ್ಕೆ ಅವರನ್ನು ಯುವ ಹಾಗೂ ಸಕ್ರಿಯ ಅಂಬೇಡ್ಕರ್‌ವಾದಿ ಎಂದು ಬಣ್ಣಿಸಿದ್ದರು. ದೀಪ್ಕೆ ತಮ್ಮ ಪಕ್ಷಕ್ಕೆ ಸೇರ್ಪಡೆಯಾದರೆ ಪಕ್ಷ ಬಲಗೊಳ್ಳುವುದರ ಜೊತೆಗೆ ಡಾ. ಬಿ.ಆರ್. ಅಂಬೇಡ್ಕರ್ ಅವರ ಆಶಯಗಳನ್ನು ಈಡೇರಿಸಲು ಸಹಾಯವಾಗುತ್ತದೆ ಎಂದು ಆಹ್ವಾನ ನೀಡಿದ್ದರು. ಆದರೆ ದೀಪ್ಕೆ ಅವರು ತಕ್ಷಣಕ್ಕೆ ಯಾವುದೇ ಚುನಾವಣಾ ರಾಜಕೀಯಕ್ಕೆ ಧುಮುಕುವ ಅಥವಾ ಚುನಾವಣೆಯಲ್ಲಿ ಸ್ಪರ್ಧಿಸುವ ಆಲೋಚನೆ ತಮಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕೇಂದ್ರೀಯ ತನಿಖಾ ಸಂಸ್ಥೆಗಳಾದ ಇಡಿ ಮತ್ತು ಸಿಬಿಐಗಳನ್ನು ಬಳಸಿ ರಾಜಕೀಯ ಪಕ್ಷಗಳನ್ನು ಒಡೆಯಲಾಗುತ್ತಿದೆ ಹಾಗೂ ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕಲಾಗುತ್ತಿದೆ ಎಂದು ಆರೋಪಿಸಿರುವ ದೀಪ್ಕೆ, ಪ್ರಸ್ತುತ ಸನ್ನಿವೇಶದಲ್ಲಿ ಮತ್ತೊಂದು ರಾಜಕೀಯ ಪಕ್ಷವನ್ನು ಕಟ್ಟುವುದರಿಂದ ಯುವಕರ ಸಮಸ್ಯೆಗಳಿಗೆ ಪರಿಹಾರ ಸಿಗುವುದಿಲ್ಲ, ಬದಲಿಗೆ ದೇಶಕ್ಕೆ ಬಲವಾದ ಜನಪದ ಹಾಗೂ ಸಾಮಾಜಿಕ ಚಳವಳಿಯ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಅಮೆರಿಕದಿಂದ ಭಾರತಕ್ಕೆ ಮರಳಿದ ನಂತರ ದೀಪ್ಕೆ ಅವರು ನೀಟ್-ಯುಜಿ (NEET-UG) ಪರೀಕ್ಷಾ ಅಕ್ರಮದ ವಿರುದ್ಧ ದೆಹಲಿಯಲ್ಲಿ ಬೃಹತ್ ಯುವ ಪ್ರತಿಭಟನೆಯ ನೇತೃತ್ವ ವಹಿಸಿ ಸುದ್ದಿಯಲ್ಲಿದ್ದರು. ಪ್ರಸ್ತುತ ಅವರ ನೇತೃತ್ವದ 'ಸಿಜೆಪಿ' ಸಂಘಟನೆಯು ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳ ದುರಸ್ತಿ ಮತ್ತು ಮೂಲಸೌಕರ್ಯ ಸುಧಾರಣೆಗೆ ಆಗ್ರಹಿಸಿ 'ಸ್ಕೂಲ್ ಠೀಕ್ ಕರೋ' ಎಂಬ ಅಭಿಯಾನದಲ್ಲಿ ತೊಡಗಿಸಿಕೊಂಡಿದೆ. ಇದರ ಭಾಗವಾಗಿ ಅವರು ಇತ್ತೀಚೆಗೆ ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯ ತಮ್ಮ ಸ್ವಂತ ಗ್ರಾಮವಾದ ಸಂತುಕ್ ಪಿಂಪ್ರಿಯ ಸರ್ಕಾರಿ ಶಾಲೆಯ ಪರಿಶೀಲನೆ ನಡೆಸಿ ಜಾಗೃತಿ ಮೂಡಿಸುತ್ತಿದ್ದಾರೆ.

Category
ಕರಾವಳಿ ತರಂಗಿಣಿ