ಬೆಂಗಳೂರು : ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅತ್ಯಂತ ಆಪ್ತ ಹಾಗೂ ನಂಬಿಕಸ್ತ ಸಚಿವ ಎಂದೇ ಗುರುತಿಸಿಕೊಂಡಿರುವ ಕೃಷ್ಣ ಬೈರೇಗೌಡ ಅವರಿಗೆ ಸಂಸದೀಯ ವ್ಯವಹಾರಗಳ ಹೆಚ್ಚುವರಿ ಖಾತೆಯನ್ನು ವಹಿಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಆದೇಶ ಹೊರಡಿಸಿದ್ದಾರೆ. ಈಗಾಗಲೇ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA), ಬಿಡಬ್ಲ್ಯೂಎಸ್‍ಎಸ್‌ಬಿ (BWSSB) ಹಾಗೂ ಬಿಎಂಆರ್‌ಸಿಎಲ್ (BMRCL) ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸುತ್ತಿರುವ ಅವರ ಕಾರ್ಯಕ್ಷಮತೆ, ಬುದ್ಧಿವಂತಿಕೆ ಮತ್ತು ಸಂಸದೀಯ ಜ್ಞಾನವನ್ನು ಪರಿಗಣಿಸಿ ಸರ್ಕಾರ ಈ ಹೊಸ ಜವಾಬ್ದಾರಿಯನ್ನು ಹಸ್ತಾಂತರಿಸಿದೆ.
ರಾಜಕೀಯದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದ 'ಕ್ಲೀನ್ ಹ್ಯಾಂಡ್' ಎಂಬ ಹೆಗ್ಗಳಿಕೆ ಹೊಂದಿರುವ ಕೃಷ್ಣ ಬೈರೇಗೌಡರು, ಸರ್ಕಾರಕ್ಕೆ ಸಂಕಷ್ಟ ಎದುರಾದಾಗ ಕಾನೂನಾತ್ಮಕವಾಗಿ ಮತ್ತು ತರ್ಕಬದ್ಧವಾಗಿ ಎದುರಿಸುವ ಸಾಮರ್ಥ್ಯ ಹೊಂದಿದ್ದಾರೆ. ಈ ಹಿಂದೆ ಕಂದಾಯ ಸಚಿವರಾಗಿ ಪ್ರಶಂಸನೀಯ ಕೆಲಸ ಮಾಡಿದ್ದ ಇವರು, ಇತ್ತೀಚೆಗೆ ಬೆಂಗಳೂರಿನಲ್ಲಿ ಫುಟ್‌ಪಾತ್ ತೆರವು ಕಾರ್ಯಾಚರಣೆ ನಡೆಸಿ ಸಾರ್ವಜನಿಕರಿಂದ 'ಭೇಷ್' ಎನಿಸಿಕೊಂಡಿದ್ದರು. ಸರ್ಕಾರದ ಕೆಲಸ ಕಾರ್ಯಗಳ ಮೇಲೆ ಉತ್ತಮ ಹಿಡಿತ ಹಾಗೂ ಭ್ರಷ್ಟಾಚಾರರಹಿತ ಆಡಳಿತ ಶೈಲಿ ಹೊಂದಿರುವ ಕೃಷ್ಣ ಬೈರೇಗೌಡರ ಈ ಹೊಸ ಸೇರ್ಪಡೆ, ಸಂಸದೀಯ ವ್ಯವಹಾರಗಳ ಕ್ಷೇತ್ರದಲ್ಲೂ ಸರ್ಕಾರದ ಬಲವನ್ನು ಹೆಚ್ಚಿಸಲಿದೆ.